ಇತ್ತೀಚಿಗೆ ಎಲ್ಲರಿಗೂ ಕಾಡುವ ಸಮಸ್ಯೆನೆ ಬೇಗ ಕೂದಲು ಬೆಳ್ಳಗಾಗುವುದು. ಕೂದಲು ಉದುರುವುದು, ತಲೆ ಹೊಟ್ಟು ಮೊದಲಾದ ಸಮಸ್ಯೆಗಳ ನಡುವೆ ಈ ಕೂದಲು ಬೆಳ್ಳಗಾಗುವ ತಲೆನೋವೂ ಸೇರಿಕೊಂಡ್ರೆ.. ಈ ಬಾಲನೆರೆ ಅಥವಾ ಅತೀ ಸಣ್ಣ ವಯಸ್ಸಿನಲ್ಲಿ ಕೂದಲು ಬೆಳ್ಳಗಾಗುವುದು ಅಥವಾ ವಯಸ್ಸಾದ ಮೇಲೆ ಕೂದಲು ಬೆಳ್ಳಗಾಗುವುದು ನಮ್ಮ ಕೂದಲು ಎಷ್ಟೇ ಸುಂದರವಾಗಿದ್ದರೂ ಅದರ ಸೌಂದರ್ಯವನ್ನು ಹಾಳು ಮಾಡುತ್ತೆ. ಹಾಗಾಗಿ ಮಾರ್ಕೇಟ್ ನಲ್ಲಿ ಸಿಗುವ ಸಾಕಷ್ಟು ವಿವಿಧ ರಾಸಾಯನಿಕ ಮಿಶ್ರಿತ ಕೂದಲು ಕಪ್ಪಾಗಿಸುವ ಉತ್ಪನ್ನಗಳನ್ನು ತಂದು ಬಳಸುತ್ತೇವೆ. ಆದರೆ ಇದರಿಂದ ಅಡ್ಡಪರಿಣಾಮಗಳೇ ಹೆಚ್ಚು.
ಕೂದಲು ದಿನದಿಂದ ದಿನಕ್ಕೆ ಇನ್ನಷ್ಟು ಬೆಳ್ಳಗಾಗುವುದರ ಜೊತೆಗೆ ಕೂದಲು ಉದುರುವ ಸಮಸ್ಯೆಗಳೂ ಶುರುವಾಗುತ್ತವೆ. ಹಾಗಾದರೆ ಈ ಬಿಳಿ ಕೂದಲಿನಿಂದ ಮುಕ್ತಿ ಹೇಗೆ ಎಂದು ನೀವು ಚಿಂತಿಸುತ್ತಿದ್ದರೆ ಇಲ್ಲಿದೆ ಒಂದು ಅದ್ಭುತವಾದ ಮನೆಮದ್ದು.. ಅದನ್ನ ತಯಾರಿಸುವ ವಿಧಾನ ಹೀಗಿದೆ.
ತಯಾರಿಸಲು ಬೇಕಾಗುವ ವಸ್ತುಗಳು.. ನೆಲ್ಲಿಕಾಯಿ ಪುಡಿ – ೨ ಟೀ ಸ್ಪೂನ್.. ಶಿಖಾಕಾಯಿ ಪುಡಿ – ೧ ಟೀ ಸ್ಪೂನ್.. ಟೀ ಪುಡಿ – ೨ ಟೀ ಸ್ಪೂನ್.. ಕಾಫಿ ಪುಡಿ – ೧ ಟೀ ಸ್ಪೂನ್.. ಮೆಹೆಂದಿ ಪುಡಿ – ೧ ಟೀ ಸ್ಪೂನ್.. ಭೃಂಗರಾಜ ಹೇರ್ ಪೌಡರ್ – ೧ ಟೀ ಸ್ಪೂನ್.. ಅಂಟ್ವಾಳದ ಪುಡಿ – ಒಂದು ಚಮಚ..
ಮಾಡುವ ವಿಧಾನ.. ಮೊದಲು ಒಂದು ಕಬ್ಬಿಣದ ಬಾಣಲೆ ಅಥವಾ ತವಾವನ್ನು ತೆಗೆದುಕೊಳ್ಳಿ. ಇದನ್ನು ಒಲೆಯ ಮೇಲಿಟ್ಟು ಅದಕ್ಕೆ ನೆಲ್ಲಿಕಾಯಿ ಪುಡಿ ಹಾಗೂ ಶಿಖಾಕಾಯಿ ಪುಡಿ ಎರಡನ್ನೂ ತವಾ ಮೇಲೆ ಹಾಕಿ, ಕಡಿಮೆ ಉರಿಯಲ್ಲಿ ಹುರಿಯಿರಿ. ಅದು ಕಪ್ಪಗಾಗುವ ವರೆಗೂ ಹುರಿದು ತಣ್ಣಗಾಗಲು ಬಿಡಿ. ನಂತರ ಒಂದು ಪಾತ್ರೆಯಲ್ಲಿ ಒಂದು ಲೋಟ ನೀರನ್ನು ಕುದಿಸಲು ಇಡಿ. ಇದಕ್ಕೆ ೨ ಟೀ ಸ್ಪೂನ್ ಟೀ ಪುಡಿ ಹಾಗೂ ಒಂದು ಟೀ ಸ್ಪೂನ್ ಕಾಫಿ ಪುಡಿ ಹಾಕಿ ಚೆನ್ನಾಗಿ ಕುದಿಸಿ. ಇದು ಸುಮಾರು ಅರ್ಧ ಲೋಟದಷ್ಟು ಆಗುವವರೆಗೆ ಕುದಿಸಿ ಸೋಸಿ. ನಂತರ ತವಾದಲ್ಲಿ ಕಾಯಿಸಿಟ್ಟ ಮಿಶ್ರಣಕ್ಕೆ ಒಂದು ಚಮಚ ಭೃಂಗರಾಜ ಹೇರ್ ಪೌಡರ್ ಹಾಗೂ ಒಂದು ಟೀ ಸ್ಪೂನ್ ಅಂಟ್ವಾಳದ ಪೌಡರ್ ನ್ನು ಸೇರಿಸಿ ಇದಕ್ಕೆ ಕುದಿಸಿಟ್ಟ ನೀರನ್ನು ಸ್ವಲ್ಪಸ್ವಲ್ಪವೇ ಹಾಕಿ ಮಿಶ್ರಣ ಮಾಡಿ. ನಂತರ ಇದಕ್ಕೆ ಒಂದು ಟೀ ಸ್ಪೂನ್ ಮೆಹೆಂದಿ ಪುಡಿಯನ್ನು ಸೇರಿಸಿ. ಈ ಎಲ್ಲವನ್ನು ಪೇಸ್ಟ್ ಹದಕ್ಕೆ ತಂದು ರಾತ್ರಿ ಪೂರ್ತಿ ಹಾಗೆಯೇ ಬಿಡಿ.
ನಂತರ ಬೆಳಗ್ಗೆ ಎದ್ದು ಈ ಪೇಸ್ಟ್ ನ್ನು ಕೂದಲಿಗೆ ಚೆನ್ನಾಗಿ ಹಚ್ಚಿ ಒಂದು ಗಂಟೆಯ ನಂತರ ಕೂದಲನ್ನು ತೊಳೆಯಿರಿ. ಪ್ರತಿ ಹದಿನೈದು ದಿನಗಳಿಗೊಮ್ಮೆ ಈ ಮನೆಮದ್ದನ್ನು ಮಾಡಿ ಕೂದಲಿಗೆ ಹಚ್ಚುವುದರಿಂದ ಕ್ರಮೇಣ ಕೂದಲು ಬೆಳ್ಳಗಾಗುವುದು ನಿಲ್ಲುವುದು ಮಾತ್ರವಲ್ಲದೇ ಈಗಿರುವ ಬೆಳ್ಳಗಿನ ಕೂದಲು ಕೂಡಲೇ ಕಪ್ಪಾಗುತ್ತದೆ. ಇದನ್ನು ಮಹಿಳೆಯರು ಹಾಗೂ ಪುರುಷರು ಯಾರು ಬೇಕಾದರೂ ಬಳಸಬಹುದು. ಯಾವುದೇ ಅಡ್ಡಪರಿಣಾಮಗಳಿಲ್ಲದ ಈ ಮನೆಮದ್ದನ್ನು ತಯಾರಿಸುವಾಗ ನಿಮ್ಮ ಕೂದಲಿನ ಪ್ರಮಾಣದ ಆಧಾರದ ಮೇಲೆ ಮಿಶ್ರಣವನ್ನು ತಯಾರಿಸಿಕೊಳ್ಳಿ.