ಲಾಕ್ಡೌನ್ನಿಂದ ಮನೆಯಲ್ಲಿ ಸುಮ್ಮನೆ ಕೂರಲಾರದ ಎಷ್ಟೋ ಮಂದಿ ವ್ಯವಸಾಯದ ಮೊರೆ ಹೋಗಿದ್ದಾರೆ. ಸೆಲಬ್ರಿಟಿಗಳು ಕೂಡಾ ಇದಕ್ಕೆ ಹೊರತಾಗಿಲ್ಲ. ಕಿಶೋರ್, ಉಪೇಂದ್ರ, ದರ್ಶನ್, ಚಿಕ್ಕಣ್ಣ, ಮಲಯಾಳಂ ನಟ ಮೋಹನ್ ಲಾಲ್, ಬಾಲಿವುಡ್ನ ಶಿಲ್ಪಾ ಶೆಟ್ಟಿ, ಸಲ್ಮಾನ್ ಖಾನ್ ಹಾಗೂ ಇನ್ನಿತರರು ತಮ್ಮದೇ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಕಳೆದ ವರ್ಷದ ಲಾಕ್ಡೌನ್ ಸಮಯದಲ್ಲೇ ತಮ್ಮ ಪುತ್ರ ಆಯುಷ್ನನ್ನು ಕೂಡಾ ಜಮೀನಿನ ಬಳಿ ಕೊಂಡೊಯ್ದು ಆತನಿಗೂ ಸಣ್ಣ ಪುಟ್ಟ ಕೆಲಸಗಳನ್ನು ಕಲಿಸಿದ್ದರು. ಈ ವಿಡಿಯೋ ವೈರಲ್ ಕೂಡಾ ಆಗಿತ್ತು. ಉಪ್ಪಿ ಕೂಡಾ ತಮ್ಮ ಜಮೀನಿನಲ್ಲಿ ಹಣ್ಣು, ತರಕಾರಿ ಬೆಳೆದು ಆ ವಿಡಿಯೊವನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವ ಮೂಲಕ ಅಭಿಮಾನಿಗಳೊಂದಿಗೆ ಖುಷಿ ಹಂಚಿಕೊಂಡಿದ್ದರು.
ಇನ್ನು ಬೆಂಗಳೂರಿನ ದೊಡ್ಡ ಆಲದ ಮರದ ಬಳಿ ಇರುವ ಸುಮಾರು 15 ಎಕರೆಗೂ ಹೆಚ್ಚು ಜಮೀನನ್ನು ಉಪೇಂದ್ರ ರೈತರಿಂದ ಅಕ್ರಮವಾಗಿ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ವಿಚಾರ ಕೋರ್ಟ್ ಮೆಟ್ಟಿಲೇರಿತ್ತು. ಆದರೆ ಈ ವಿವಾದದಲ್ಲಿ ಉಪೇಂದ್ರಗೆ ರಿಲೀಫ್ ದೊರೆತಿದೆ. ವ್ಯಕ್ತಿಯೊಬ್ಬರು ಇದೇ ವಿಚಾರವಾಗಿ ಉಪೇಂದ್ರ ಅವರನ್ನು ಪ್ರಶ್ನಿಸಿದ್ದಾರೆ. ರೈತರ ಭೂಮಿಯನ್ನು ಕಸಿದುಕೊಂಡಿದ್ದೀರ ಎಂದು ಆರೋಪಿಸಿದ್ದಾರೆ. ಆತನ ಆರೋಪಕ್ಕೆ ಸ್ವಲ್ಪವೂ ಬೇಸರ ವ್ಯಕ್ತಪಡಿಸದ ಉಪೇಂದ್ರ ನಗುತ್ತಲೇ ತಾಳ್ಮೆಯಿಂದ ಉತ್ತರಿಸಿದ್ದಾರೆ.
ದೊಡ್ಡ ಆಲದ ಮರದ ಬಳಿ ರೈತರಿಂದ ಕಿತ್ತುಕೊಂಡಿರುವ ಹತ್ತಾರು ಎಕರೆ ಭೂಮಿಯಲ್ಲಿ ನೀವೇನು ರಾಗಿ, ಭತ್ತ, ತೊಗರಿಬೇಳೆ ಬೆಳೆಯುತ್ತೀದ್ದೀರಾ…? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಉಪ್ಪಿ, ”ದಯವಿಟ್ಟು ಯಾರ ಮೇಲಾದರೂ ಆರೋಪ ಮಾಡಬೇಕಾದರೆ ಸೂಕ್ತ ದಾಖಲೆಯನ್ನು ನಿಮ್ಮ ಬಳಿ ಇರಿಸಿಕೊಳ್ಳಿ. ಸುಮಾರು 14 ವರ್ಷಗಳ ಹಿಂದೆ ವಿಲೇಜ್ ಎಂಬ ರೆಸಾರ್ಟ್ ಇತ್ತು. ಈ ರೆಸಾರ್ಟ್ ಹರಾಜಿಗೆ ಬಂದಿತ್ತು. ಆ ಸಮಯದಲ್ಲಿ ಹರಾಜಿನಲ್ಲಿ ನಾವು ಆ ರೆಸಾರ್ಟ್ ಖರೀದಿಸಿ ಈಗ ಅದನ್ನು ರುಪೀಸ್ ರೆಸಾರ್ಟ್ ಮಾಡಿದ್ದೇವೆ. ಇನ್ನು ಈ ರೆಸಾರ್ಟ್ ಹಿಂದಿರುವ ಕೃಷಿ ಜಮೀನನ್ನು ಶಿವರಾಜ್ಕುಮಾರ್ ಅವರ ಬಳಿ ಖರೀದಿಸಿದ್ದು, ಅಂದಿನಿಂದ ಆ ಭೂಮಿಯಲ್ಲಿ ವ್ಯವಸಾಯ ಮಾಡುತ್ತಿದ್ದೇವೆ. ನನ್ನ ಬಳಿ ಸೂಕ್ತ ದಾಖಲೆಗಳಿವೆ” ಎಂದು ಉತ್ತರಿಸಿದ್ಧಾರೆ.
ಉಪೇಂದ್ರ ಬಡತನವನ್ನು ನೋಡಿದವರು, ಚಿಕ್ಕಂದಿನಿಂದ ಕಷ್ಟಪಟ್ಟು ಬೆಳೆದು ಮುಂದೆ ಬಂದವರು. ಅವರ ಪ್ರತಿ ಸಂಪಾದನೆಯ ಹಿಂದೆ ಸಾಕಷ್ಟು ಶ್ರಮವಿದೆ. ತಾವು ಬಾಲ್ಯದಲ್ಲಿ ಅನುಭವಿಸಿದ ಕಷ್ಟಗಳನ್ನು ಉಪೇಂದ್ರ ಅನೇಕ ಇಂಟರ್ವ್ಯೂಗಳಲ್ಲಿ ಹೇಳಿಕೊಂಡಿದ್ದಾರೆ. ಆದರೆ ಕೆಲವರು ಅವರ ಬೆಳವಣಿಗೆ ಸಹಿಸದೆ ಅವರು ರೈತರ ಭೂಮಿ ಖರೀದಿಸಿದ್ದಾರೆ ಎಂದು ಆರೋಪಿಸಿದ್ದರು. ಇದಕ್ಕೆ ಉಪ್ಪಿ ದಾಖಲೆ ಸಹಿತ ಉತ್ತರ ನೀಡಿದ್ದಾರೆ. ಇನ್ನು ರೈತರ ಕಷ್ಟವನ್ನು ಅರಿತ ಉಪೇಂದ್ರ, ಲಾಕ್ಡೌನ್ ಸಮಯದಲ್ಲಿ ರೈತರಿಗೆ ನೆರವಾಗುತ್ತಲೇ ಬಂದಿದ್ದಾರೆ. ಬೆಳೆದ ಬೆಳೆ ಹಾಳಾಯಿತು ಎಂದು ಕಣ್ಣೀರಿಡುತ್ತಿದ್ದ ರೈತರಿಂದ ಹಣ್ಣು, ತರಕಾರಿ ಖರೀದಿಸಿ ಅದನ್ನು ಅಗತ್ಯ ಇರುವವರಿಗೆ ಹಂಚುತ್ತಿದ್ದಾರೆ.
ಇದೀಗ ಈ ವಿಡಿಯೋ ಈಗ ವೈರಲ್ ಆಗುತ್ತಿದ್ದು ಕೆಲವರು ಆ ವ್ಯಕ್ತಿ ಪರ ಮಾತನಾಡಿದರೆ ಮತ್ತೆ ಕೆಲವರು ಉಪೇಂದ್ರ ಪರ ನಿಂತಿದ್ಧಾರೆ. ಭೂಮಿ ಖರೀದಿಸಿರುವ ಬಗ್ಗೆ ಉಪೇಂದ್ರ ಬಳಿ ಸೂಕ್ತ ದಾಖಲೆಗಳಿದ್ದಾಗ ಮತ್ತೆ ಮತ್ತೆ ಈ ಪ್ರಶ್ನೆ ಕೇಳುವುದು ದಡ್ಡತನ, ಉಪೇಂದ್ರ ಸಿನಿಮಾಗಳು ಹಾಗೂ ಪ್ರಜಾಕೀಯದ ಬಗ್ಗೆ ಕೂಡಾ ಆ ವ್ಯಕ್ತಿ ಪ್ರಶ್ನಿಸಿದ್ಧಾರೆ. ಉಪೇಂದ್ರ ಬೆಳವಣಿಗೆ ಸಹಿಸದ ಆತ ಹೀಗೆಲ್ಲಾ ಮಾತನಾಡುತ್ತಿದ್ದಾರೆ ಎಂದು ಅಭಿಮಾನಿಗಳು ಕಿಡಿ ಕಾರಿದ್ದಾರೆ.
-ರಕ್ಷಿತ ಕೆ.ಆರ್. ಸಾಗರ