‘ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ’ ಎಂಬ ಮಾತಿದೆ. ನೀವು ಎಷ್ಟು ದಾನ ಧರ್ಮ ಮಾಡುತ್ತೀರೋ ಅದಕ್ಕೆ ಹೆಚ್ಚಿನದ್ದು ದೇವರು ನಿಮಗೆ ವಾಪಸ್ ನೀಡುತ್ತಾನೆ. ಆದರೆ ಬಚ್ಚಿಟ್ಟದ್ದು ಮಾತ್ರ ಎಂದಾದರೂ ಬೇರೆಯವರ ಪಾಲಾಗುತ್ತದೆ ಎಂಬುದು ಈ ಮಾತಿನ ಅರ್ಥ. ಈ ಲಾಕ್ಡೌನ್ ಸಮಯದಲ್ಲಿ ಎಷ್ಟೋ ಮಂದಿ, ಬಡವರಿಗೆ ಸಹಾಯ ಮಾಡುತ್ತಾ ಬಂದಿದ್ದಾರೆ. ಕೆಲವರು ಮತ್ತೊಬ್ಬರ ಚಿಂತೆ ನಮಗೇಕೆ ಎಂದು ತಮ್ಮ ಪಾಡಿಗೆ ಇದ್ದಾರೆ. ಮತ್ತೆ ಕೆಲವರು ಕೇವಲ ಪ್ರಚಾರಕ್ಕಾಗಿ ಮಾತ್ರ ಕಷ್ಟದಲ್ಲಿರುವವರಿಗೆ ನೆರವಾಗುವಂತೆ ನಾಟಕ ಮಾಡುತ್ತಿದ್ಧಾರೆ. ಆದರೆ ಇನ್ನೂ ಒಂದು ವರ್ಗವುಂಟು. ‘ಬಲಗೈಲಿ ಕೊಟ್ಟದ್ದು ಎಡಗೈಗೆ ತಿಳಿಯಬಾರದು’ ಎಂಬ ಮಾತಿನಂತೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ, ಯಾವುದೇ ಪ್ರಚಾರ ಬಯಸದೆ ಜನರ ಸಂಕಷ್ಟಕ್ಕೆ ನೆರವಾಗುತ್ತಾ ಬಂದಿದ್ದಾರೆ. ಅಂತವರಲ್ಲಿ ಕನ್ನಡದ ಖ್ಯಾತ ನಿರ್ಮಾಪಕ ವಿಜಯ್ ಕಿರಗಂದೂರು ಕೂಡಾ ಒಬ್ಬರು. ಇವರು ಕಳೆದ ವರ್ಷದ ಲಾಕ್ಡೌನ್ನಿಂದಲೂ ಕೈಲಾಗದವರಿಗೆ ಸಹಾಯ ಮಾಡುತ್ತಾ ಬಂದಿದ್ದಾರೆ.
ಸಿನಿಮಾದಲ್ಲಿ ನಟಿಸುವವರೆಲ್ಲಾ ದುಡ್ಡು ಮಾಡುವುದಿಲ್ಲ. ಕೆಲವರಿಗೆ ನಟನೆ ಬಿಟ್ಟು ಏನೂ ತಿಳಿದಿರುವುದಿಲ್ಲ. ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಲು ಬುಲಾವ್ ಬಂದರೆ ಒಂದೆರಡು ಶಾಟ್ಗಳಲ್ಲಿ ನಟಿಸಿ ಕೊಟ್ಟಷ್ಟು ಹಣ ಪಡೆದು ಬರುವವರೂ ಇದ್ದಾರೆ. ಜೊತೆಗೆ ಲೈಟ್ ಬಾಯ್, ಮೇಕಪ್ ಮ್ಯಾನ್, ಸೆಟ್ ಬಾಯ್ ಸೇರಿದಂತೆ ತೆರೆ ಹಿಂದೆ ಕೆಲಸ ಮಾಡುವ ಅನೇಕರು ಆರ್ಥಿಕ ಸಮಸ್ಯೆ ಎದುರಿಸುತ್ತಿರುತ್ತಾರೆ. ಇಂತವರ ಕಷ್ಟಗಳಿಗೆ ನಿರ್ಮಾಪಕ ವಿಜಯ್ ಕಿರಗಂದೂರು ಮಿಡಿದಿದ್ದಾರೆ. ಕಳೆದ ವರ್ಷ ಕೊರೊನಾದಿಂದ ದುಡಿಮೆ ಇಲ್ಲದೆ ಮನೆಯಲ್ಲೇ ಉಳಿದಿದ್ದ ಅನೇಕ ಸಿನಿ ಕಾರ್ಮಿಕರಿಗೆ ಹಾಗೂ ‘ಕೆಜಿಎಫ್’, ‘ಯುವರತ್ನ’ ಸಿನಿ ಕಾರ್ಮಿಕರಿಗೆ ವಿಜಯ್ ಕಿರಗಂದೂರು ತಮ್ಮ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯಿಂದ ಹಣದ ಸಹಾಯ ಮಾಡಿದ್ದರು.
ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಸುಮಾರು 500 ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ವಿಜಯ್ ಉಚಿತವಾಗಿ ಕೊರೊನಾ ಲಸಿಕೆ ಹಾಕಿಸಿದ್ದಾರೆ ಎನ್ನಲಾಗಿದೆ. ತಾವು ಮಂಡ್ಯದವರಾದ್ದರಿಂದ ಜಿಲ್ಲೆಯ ಆಸ್ಪತ್ರೆಗಳಿಗಾಗಿ ಎರಡು ಆಕ್ಸಿಜನ್ ಪ್ಲಾಂಟ್ಗಳು, ಬೆಡ್ಗಳ ವ್ಯವಸ್ಥೆ ಮಾಡಿದ್ದಾರೆ. ವಿಜಯ್ ಕಿರಗಂದೂರು ಈಗ ‘ಸಲಾರ್’ ಪ್ಯಾನ್ ಇಂಡಿಯಾ ಚಿತ್ರವನ್ನು ನಿರ್ಮಿಸುತ್ತಿರುವುದರಿಂದ ಸುಮಾರು 100 ಕ್ಕೂ ಹೆಚ್ಚು ತೆಲುಗು ಸಿನಿ ಕಾರ್ಮಿಕರಿಗೆ ಕೂಡಾ ಧನ ಸಹಾಯ ಮಾಡಿದ್ಧಾರೆ ಎಂಬ ಮಾತು ಕೇಳಿಬಂದಿದೆ. ಈ ರೀತಿ ಸದ್ದಿಲ್ಲದೆ ಸಮಾಜ ಸೇವೆಯನ್ನು ಮಾಡುವ ಮೂಲಕ ಕೇವಲ ಹಣದಿಂದ ಮಾತ್ರವಲ್ಲ ಹೃದಯವಂತಿಕೆಯಿಂದಲೂ ಶ್ರೀಮಂತರು ಎಂಬುದನ್ನು ವಿಜಯ್ ಕಿರಗಂದೂರು ಸಾಬೀತು ಮಾಡಿದ್ದಾರೆ.
2014 ರಲ್ಲಿ ಬಿಡುಗಡೆಯಾದ ಪುನೀತ್ ರಾಜ್ಕುಮಾರ್ ಅಭಿನಯದ ‘ನಿನ್ನಿಂದಲೇ’ ಸಿನಿಮಾವನ್ನು ನಿರ್ಮಿಸುವ ಮೂಲಕ ವಿಜಯ್ ಕಿರಗಂದೂರು ಚಿತ್ರರಂಗಕ್ಕೆ ಬಂದರು. ಈ ಸಿನಿಮಾ ನಂತರ ಮಾಸ್ಟರ್ ಪೀಸ್, ರಾಜಕುಮಾರ, ಕೆಜಿಎಫ್, ಯುವರತ್ನ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಯಶ್ ಅಭಿನಯದ ‘ಕೆಜಿಎಫ್ 2’ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ‘ಸಲಾರ್’ ಚಿತ್ರದ ಮೂಲಕ ಹೊಂಬಾಳೆ ಫಿಲ್ಮ್ಸ್, ತೆಲುಗು ಚಿತ್ರರಂಗಕ್ಕೂ ಕಾಲಿಟ್ಟಿದೆ. ಈ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಿಸುತ್ತಿದ್ದು ಪ್ರಭಾಸ್, ಶ್ರುತಿ ಹಾಸನ್ ಹಾಗೂ ಇನ್ನಿತರರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ಧಾರೆ. ಇದರೊಂದಿಗೆ ಶ್ರೀಮುರಳಿ ಅಭಿನಯದ ‘ಬಘೀರ’ ಎಂಬ ಸಿನಿಮಾವನ್ನು ವಿಜಯ್ ಕಿರಗಂದೂರು ಘೋಷಿಸಿದ್ಧಾರೆ. ಬಹುಶ; ಸಲಾರ್ ಬಳಿಕ ಈ ಚಿತ್ರ ಸೆಟ್ಟೇರಲಿದೆ.
-ರಕ್ಷಿತ ಕೆ.ಆರ್. ಸಾಗರ