ಚಿತ್ರರಂಗದಲ್ಲಿ ಅಭಿಮಾನಿಗಳ ಆರಾಧ್ಯ ದೈವ ಆಗಿ ಮಿಂಚುವ ಬಹಳಷ್ಟು ನಟರು ಒಂದು ಅವಧಿವರೆಗೂ ಚಿತ್ರರಂಗದಲ್ಲಿ ಸಕ್ರಿಯರಾಗಿರುತ್ತಾರೆ. ದಶಕಗಳ ಕಾಲ ಅಭಿಮಾನಿಗಳನ್ನು ರಂಜಿಸುವ ಅವರು ನಿರ್ದಿಷ್ಟ ಸಮಯದಲ್ಲಿ ಸಿನಿಮಾದಿಂದ ನಿವೃತ್ತಿ ಪಡೆಯಲು ಬಯಸುತ್ತಾರೆ. ಇದು ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದರೂ ಆ ಕಲಾವಿದರ ಆರೋಗ್ಯದ ಹಿತದೃಷ್ಟಿಯಿಂದ ನೋಡಿದರೆ ಅವರ ನಿರ್ಧಾರ ಸರಿ ಎನ್ನಬಹುದು. ಮರಾಠಿ ಕುಟುಂಬಕ್ಕೆ ಸೇರಿದ್ದು, ಬೆಂಗಳೂರಿನ ಶಿವಾಜಿ ನಗರದಲ್ಲಿ ಹುಟ್ಟಿ ಬೆಳೆದು ಈಗ ತಮಿಳು ಅಭಿಮಾನಿಗಳ ಪಾಲಿನ ತಲೈವಾ ಆಗಿರುವ ಸೂಪರ್ ಸ್ಟಾರ್ ರಜಿನಿಕಾಂತ್ ಯಾರಿಗೆ ತಾನೇ ಇಷ್ಟವಿಲ್ಲ..? ಅವರ ಆ್ಯಕ್ಟಿಂಗ್, ಮ್ಯಾನರಿಸಂ, ಲುಕ್, ಡ್ಯಾನ್ಸ್ಗೆ ಫಿದಾ ಆಗದವರಿಲ್ಲ. ಅದರಲ್ಲೂ ಬಾಯಿಗೆ ಸಿಗರೇಟ್ ಎಸೆದುಕೊಳ್ಳುವ ಸ್ಟೈಲ್, ಕಣ್ಣಿಗೆ ಗ್ಲಾಸ್ ಹಾಕಿಕೊಳ್ಳುವ ಸ್ಟೈಲ್ ಅಂತೂ ಇಂದಿನ ಯುವಜನತೆಗೂ ಬಹಳ ಅಚ್ಚು ಮೆಚ್ಚು. ಈ ಕಾರಣದಿಂದಲೇ ರಜನಿಕಾಂತ್ಗೆ ತಮಿಳುನಾಡು, ಕರ್ನಾಟಕ ಮಾತ್ರವಲ್ಲ, ದೇಶ-ವಿದೇಶಗಳಲ್ಲೂ ಕೋಟ್ಯಂತರ ಸಂಖ್ಯೆಯ ಅಭಿಮಾನಿಗಳಿದ್ದಾರೆ.
1975 ರಲ್ಲಿ ಕೆ. ಬಾಲಚಂದರ್ ನಿರ್ದೇಶನದ ‘ಅಪೂರ್ವ ರಾಗಂಗಳ್’ ತಮಿಳು ಚಿತ್ರದ ಮೂಲಕ ಆ್ಯಕ್ಟಿಂಗ್ ಕರಿಯರ್ ಆರಂಭಿಸಿದ ಶಿವಾಜಿರಾವ್ ಗಾಯಕ್ವಾಡ್, ನಂತರ ರಜಿನಿಕಾಂತ್ ಎಂದು ಬದಲಾದರು. ಸುಮಾರು 4 ದಶಕಗಳ ಕಾಲ ಸಿನಿಪ್ರಿಯರನ್ನು ರಂಜಿಸಿದ ರಜಿನಿಕಾಂತ್, ಸಿನಿಮಾ ನಿವೃತ್ತಿ ಪಡೆಯಲು ನಿರ್ಧರಿಸಿದ್ದಾರಾ ಎಂಬ ಅನುಮಾನ ಅಭಿಮಾನಿಗಳಿಗೆ ಕಾಡುತ್ತಿದೆ. ಈ ವಿಚಾರವಾಗಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ‘ದರ್ಬಾರ್’ ಸಿನಿಮಾ ಬಿಡುಗಡೆಯಾದ ನಂತರ ರಜಿನಿಕಾಂತ್ ‘ಅಣ್ಣಾತೆ’ ಚಿತ್ರವನ್ನು ಘೋಷಿಸಿದರು. ಕಳೆದ ವರ್ಷವೇ ಈ ಸಿನಿಮಾ ಚಿತ್ರೀಕರಣ ಆರಂಭವಾದರೂ ಕೋವಿಡ್ ಸಮಸ್ಯೆಯಿಂದ ತಡವಾಗುತ್ತಲೇ ಬರುತ್ತಿದೆ. ಆದರೆ ಈ ಸಿನಿಮಾ ಚಿತ್ರೀಕರಣ ನಡೆಯುವ ವೇಳೆ ರಜಿನಿಕಾಂತ್ ಭಾವುಕರಾಗಿ ಆಡಿದ ಮಾತಿನಿಂದ ಅವರು ‘ಅಣ್ಣಾತೆ’ ನಂತರ ಬೇರೆ ಸಿನಿಮಾದಲ್ಲಿ ನಟಿಸುತ್ತಾರಾ…? ಇಲ್ಲವಾ…? ಎಂಬ ಸಂದೇಹಕ್ಕೆ ಎಡೆ ಮಾಡಿಕೊಟ್ಟಿದೆ.
ಏಕೆಂದರೆ ರಜಿನಿಕಾಂತ್ ರಾಜಕೀಯ ಪಕ್ಷವೊಂದನ್ನು ಸ್ಥಾಪಿಸುವ ಯೋಚನೆಯಲ್ಲಿದ್ದರು. ಆದರೆ ಅನಾರೋಗ್ಯ ಕಾಡಿದ್ದರಿಂದ ಪಕ್ಷ ಸ್ಥಾಪನೆ ನಿರ್ಧಾರದಿಂದ ಹಿಂದೆ ಸರಿದಿದ್ದರು. ”ರಾಜಕೀಯಕ್ಕೆ ಬರದೆ ಜನರ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತೇನೆ. ಪಕ್ಷ ಸ್ಥಾಪನೆ ತೀರ್ಮಾನದಿಂದ ಹಿಂದೆ ಸರಿಯುತ್ತಿದ್ದೇನೆ ದಯವಿಟ್ಟು ಪ್ರತಿಭಟನೆ ಮಾಡಿ ಮನಸ್ಸು ನೋಯಿಸಬೇಡಿ” ಎಂದು ಮನವಿ ಮಾಡಿದ್ದರು. ಅದಕ್ಕೂ ಮುನ್ನ ಹೈದರಾಬಾದ್ನಲ್ಲಿ ನಡೆಯುತ್ತಿದ್ದ ‘ಅಣ್ಣಾತೆ’ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ”ಆಗ್ಗಾಗ್ಗೆ ಆರೋಗ್ಯ ಕೈ ಕೊಡುತ್ತಿದೆ. ಅಭಿಮಾನಿಗಳಿಗೆ ನಿರಾಸೆ ಮಾಡುವ ಉದ್ದೇಶ ಇಲ್ಲ. ನನ್ನ ಆರೋಗ್ಯ ಸ್ಥಿರವಾಗಿದ್ದರೆ ಖಂಡಿತ ‘ಅಣ್ಣಾತೆ’ ನಂತರ ಹೊಸ ಸಿನಿಮಾಗಳಲ್ಲಿ ನಟಿಸುತ್ತೇನೆ” ಎಂದು ಭಾವುಕರಾಗಿ ಮಾತನಾಡಿದ್ದರು ಎನ್ನಲಾಗಿದೆ. ಈ ಸಮಯದಲ್ಲೇ ಅವರ ಆರೋಗ್ಯದಲ್ಲಿ ಏರುಪೇರಾಗಿ ಹೈದರಾಬಾದ್ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದು ಚೆನ್ನೈಗೆ ವಾಪಸಾಗಿದ್ದರು. ಅಭಿಮಾನಿಗಳು ಮಾತ್ರ, ರಜಿನಿಕಾಂತ್ ಆರೋಗ್ಯ ಮೊದಲಿನಂತಾಗಲಿ. ಅವರು ಇನ್ನೂ ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ನಟಿಸುವಂತಾಗಲಿ ಎಂದು ಆಶಿಸುತ್ತಿದ್ದಾರೆ.
‘ಅಣ್ಣಾತೆ’ ಸಿನಿಮಾ ವಿಚಾರಕ್ಕೆ ಬರುವುದಾದರೆ ಈ ಸಿನಿಮಾ ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. ಕಲಾನಿಧಿ ಮಾರನ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು ಶಿವ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್, ರಜಿನಿಕಾಂತ್ ತಂಗಿಯಾಗಿ ನಟಿಸುತ್ತಿದ್ದಾರೆ. ಇವರೊಂದಿಗೆ ಮೀನಾ, ಖುಷ್ಬೂ, ನಯನತಾರಾ, ಜಗಪತಿ ಬಾಬು, ಜಾಕಿ ಶ್ರಾಫ್, ಪ್ರಕಾಶ್ ರಾಜ್ ಹಾಗೂ ಇನ್ನಿತರರು ನಟಿಸುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಡಿ. ಇಮಾನ್ ಸಂಗೀತ ನೀಡುತ್ತಿದ್ದಾರೆ. ತಲೈವಾ ಆರೋಗ್ಯ ಸುಧಾರಿಸಿ ಅವರು ಇನ್ನೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸುವಂತಾಗಲಿ ಎಂಬುದು ನಮ್ಮ ಹಾರೈಕೆ ಕೂಡಾ.
-ರಕ್ಷಿತ ಕೆ.ಆರ್. ಸಾಗರ