‘ ಸರಸು’ ಧಾರವಾಹಿಯಲ್ಲಿ ನಾಯಕಿ ಸರಸು ಆಗಿ ಅಭಿನಯಿಸುತ್ತಿರುವ ಸುಪ್ರಿತಾ ಸತ್ಯನಾರಾಯಣ್ ಅವರಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಅವರು ಶೂಟಿಂಗ್ ನಿಂದ ಬ್ರೇಕ್ ಪಡೆದುಕೊಂಡಿದ್ದರು. ಇದೀಗ ಅವರು ಸಂಪೂರ್ಣ ಗುಣಮುಖರಾಗಿದ್ದು ಇದೀಗ ಮತ್ತೆ ಶೂಟಿಂಗ್ ಗಾಗಿ ಹೈದರಾಬಾದ್ಗೆ ತೆರಳಲು ಸುಪ್ರೀತಾ ತಯಾರಾಗಿದ್ದಾರೆ. “ನನ್ನ ಧಾರವಾಹಿ ತಂಡವು ಶೂಟಿಂಗ್ಗಾಗಿ ಹೈದರಾಬಾದ್ ತೆರಳಲು ಸಜ್ಜಾಗುವಂತೆ ಹೇಳಿದೆ. ನಾನು ಕೋವಿಡ್ ಸೋಂಕಿಗೆ ತುತ್ತಾಗಿದ್ದು, ಇದೀಗ ಅದರಿಂದ ಸಂಪೂರ್ಣವಾಗಿ ಗುಣಮುಖಳಾಗಿದ್ದೇನೆ. ಹಾಗಾಗಿ ಶೂಟಿಂಗ್ ಮರುಆರಂಭಿಸಲು ಯಾವುದೇ ಆತಂಕಗಳಿಲ್ಲ. ನಮ್ಮ ಆರೋಗ್ಯದ ಬಗ್ಗೆ ಕಾಳಜಿ ಕೂಡಾ ವಹಿಸುವುದು ಅತ್ಯಗತ್ಯ ಆದರೆ ಕೆಲಸಗಳಿಗೆ, ನಮ್ಮ ಜವಾಬ್ದಾರಿಗಳಿಗೆ ವಾಪಾಸ್ಸಾಗುವುದೂ ಕೂಡಾ ಅನಿವಾರ್ಯ” ಎಂದು ಸುಪ್ರೀತಾ ಹೇಳಿದ್ದಾರೆ. ಸರಸು ಧಾರವಾಹಿಯಲ್ಲಿ ಸುಪ್ರೀತಾ ಸತ್ಯನಾರಾಯಣ್ ಹಾಗೂ ಸ್ಕಂದ ಅಶೋಕ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು ತೆರೆಯ ಮೇಲೆ ಇವರ ಜೋಡಿ ಮೋಡಿ ಮಾಡುತ್ತಿದೆ.
150 ಸಂಚಿಕೆಗಳನ್ನು ದಾಟಿರುವ ಈ ಸೀರಿಯಲ್ ಜನಮನ್ನಣೆಯನ್ನು ಗಳಿಸುತ್ತಿದ್ದು, ವೀಕ್ಷಕರೂ ಕೂಡಾ ತಮ್ಮ ನೆಚ್ಚಿನ ಜೋಡಿಯನ್ನು ಯಾವಾಗ ಕಣ್ತುಂಬಿಕೊಳ್ಳಬಹುದು ಎಂದು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಹಳ್ಳಿಯ ಮುಗ್ಧ ಹುಡುಗಿಯೊಬ್ಬಳ ಸುತ್ತ ಕಥೆ ಹೆಣೆಯಲಾಗಿದ್ದು, ಅವಳು ನಗರದಲ್ಲಿ ಪ್ರತಿಷ್ಟಿತ ಕಾಲೇಜೊಂದರಲ್ಲಿ ಸೇರಿ ವಿದ್ಯಾಭ್ಯಾಸ ಮಾಡುವ ಕನಸನ್ನು ಕಾಣುತ್ತಿರುತ್ತಾಳೆ. ಇದು ಪ್ರೇಕ್ಷಕ ವರ್ಗದ ಅದರಲ್ಲೂ ಗ್ರಾಮೀಣ ವರ್ಗದ ವೀಕ್ಷಕರ ಮನಗೆದ್ದಿದೆ.
ಸರಸು ಧಾರವಾಹಿ ತಂಡ ಹೈದಾರಾಬಾದ್ಗೆ ಶೂಟಿಂಗ್ಗಾಗಿ ತೆರಳುತ್ತಿರುವ ಸುದ್ದಿಯು ನಿಜವೇ? ಹಾಗೂ ಲಾಕ್ಡೌನ್ ವೇಳೆ ರದ್ದಾದ ಸೀರಿಯಲ್ ಶೂಟಿಗ್ನ ಮುಂದಿನ ನಡೆಯ ಬಗ್ಗೆ ಅಭಿಮಾನಿಗಳು ಕೇಳಿದ ಪ್ರಶ್ನೆಗೆ ನಟಿ ತಕ್ಷಣವೇ ಉತ್ತರವನ್ನು ನೀಡಿದ್ದಾರೆ.
“ಹೌದು, ಶೂಟಿಂಗ್ನ್ನ ಪುನರಾರಂಭಿಸಲಾಗುವುದು ಹಾಗೂ ಶೀಘ್ರದಲ್ಲೇ ನೀವದನ್ನ ತೆರೆ ಮೇಲೆ ಬರಲಿದೆ” ಎಂದು ತಮ್ಮ ಪೋಸ್ಟ್ವೊಂದರಲ್ಲಿ ಪ್ರತಿಕ್ರಿಯಿಸಿದ್ದಾರೆ.
ಈ ಹಿಂದೆ ಬೆಂಗಳೂರು ಟೈಮ್ಸ್ ಜೊತೆ ನಡೆದ ಸಂದರ್ಶನವೊಂದರಲ್ಲಿ ಸುಪ್ರೀತಾ ಸತ್ಯನಾರಾಯಣ್, ‘ಸರಸು’ ಸೀರಿಯಲ್ ಶೂಟಿಂಗ್ಗಾಗಿ ಹೈದರಾಬಾದ್ ಕಡೆ ಪಯಣ ಬೆಳೆಸುತ್ತಿರುವ ಕುರಿತಾಗಿ ಕೂಡಾ ಹಂಚಿಕೊಂಡಿದ್ದರು. ಇಷ್ಟಲ್ಲದೇ ನಟಿಯು ತಾವು ಪ್ರಯಾಣಕ್ಕೆ ಸಕಲ ಸಿದ್ಧತೆಗಳನ್ನು ನಡೆಸುತ್ತಿರುವ ಹಾಗೂ ಶೀಘ್ರವೇ ಇದು ನೆರವೇರುವ ಕುರಿತಾಗಿ ಆಶಾಭಾವನೆ ಹೊಂದಿರುವ ವಿಡಿಯೋಗಳನ್ನೂ ಕೂಡಾ ಹಂಚಿಕೊಂಡಿದ್ದಾರೆ.
– ಅಹಲ್ಯಾ