ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಗ್ನಿಸಾಕ್ಷಿ ಧಾರವಾಹಿಯಲ್ಲಿ ಅಖಿಲ್ ಆಗಿ ಅಭಿನಯಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ರಾಜೇಶ್ ಧ್ರುವ ಮುಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅರಮನೆ ಗಿಳಿ ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದರು. ಒಂದಷ್ಟು
ಧಾರಾವಾಹಿಗಳ ಜೊತೆಗೆ ಶೋವಿನಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿರುವ ರಾಜೇಶ್ ಧ್ರುವ ಅಗ್ನಿಸಾಕ್ಷಿ ಧಾರಾವಾಹಿಯ ನಂತರ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದು ಕಡಿಮೆಯೇ. ಇದೀಗ ಡಿಜಿಟಲ್ ವೇದಿಕೆಯಲ್ಲಿ ಹೆಚ್ಚು ಸಕ್ರಿಯರಾಗಿರುವ ರಾಜೇಶ್ ಧ್ರುವ ಅಗ್ನಿಸಾಕ್ಷಿಯ ಸಹಪಾತ್ರಧಾರಿ ಸುಕೃತಾ ನಾಗ್ ಜೊತೆಗೂಡಿ ವಿಡಿಯೋ ಶೇರಿಂಗ್ ವೇದಿಕೆಯೊಂದರಲ್ಲಿ ಇತ್ತೀಚೆಗಷ್ಟೇ ಶೋವೊಂದರ ನಿರೂಪಣೆಯನ್ನು ಮಾಡುತ್ತಿದ್ದಾರೆ. ಸೈಕಲ್ ಗ್ಯಾಪ್ ಎನ್ನುವ ಯೂಟ್ಯೂಬ್ ಚಾನೆಲ್ ನಡೆಸುತ್ತಿರುವ ರಾಜೇಶ್ ದಿ ರಗಳೆ ಶೋ ಎನ್ನುವ ಕಾರ್ಯಕ್ರಮ ನಡೆಸುತ್ತಿದ್ದಾರೆ.
ಈಟೈಮ್ ಟಿವಿಯ ಜೊತೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಈ ಕುರಿತಾಗಿ ಹೇಳಿದ್ದ ರಾಜೇಶ್ ಧ್ರುವ, “ಡಿಜಿಟಲ್ ಲೋಕಕ್ಕೆ ನನ್ನ ಪ್ರವೇಶ ಅಚಾನಕ್ಕಾಗಿತ್ತು. ತುಂಬಾ ಸಮಯದಿಂದ ಈ ಕುರಿತಾಗಿ ನನ್ನ ಮನಸ್ಸಲ್ಲಿ ಆಸೆ ಇತ್ತು. ನಮ್ಮ ಚಿತ್ರರಂಗದ ಖ್ಯಾತನಾಮರು, ಸೆಲೆಬ್ರಿಟಿಗಳ ಜೊತೆ ನಡೆಯುವ ಟಾಕ್ಶೋ ದ ರೀತಿಯೇ ನಮ್ಮ ರಗಳೇ ಶೋ ನಡೆಯುತ್ತಿದೆ. ಈ ಯೋಜನೆಗೆ ನನ್ನ ಮಿತ್ರರೊಬ್ಬರು ಬೆನ್ನುತಟ್ಟಿ ಪ್ರೋತ್ಸಾಹಿಸಿದರು” ಎಂದು ಹೇಳುತ್ತಾರೆ.
“ಇಲ್ಲಿವರೆಗೆ, ಈ ಶೋ ಡಿಜಿಟಲ್ ಮಾಧ್ಯಮದಲ್ಲಿದ್ದರೂ ಒಳ್ಳೆಯ ಪ್ರತಿಕ್ರಿಯೆ ಗಿಟ್ಟಿಸಿಕೊಳ್ಳುತ್ತಿದೆ. ನಮ್ಮ ಡಿಜಿಟಲ್ ಶೋನಿಂದಾಗಿ ಪ್ರೇಕ್ಷಕರು ತಮ್ಮ ನೆಚ್ಚಿನ ಸೆಲೆಬ್ರಿಟಿಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳುತ್ತಿದ್ದಾರೆ. ಸದಾ ಲವಲವಿಕೆಯಿಂದ, ಉತ್ಸಾಹದಿಂದ ಯಾವುದಾದರೊಂದು ಕ್ಷೇತ್ರದಲ್ಲಿ ಹೊಸತನವನ್ನು ಸೃಷ್ಟಿಸಿಕೊಳ್ಳುತ್ತಾ ಬಿಝಿಯಾಗಿರಲು ಕಲಾವಿದರುಗಳು ಬಯಸುತ್ತಾರೆ” ಎಂದು ಶೋವಿನ ಬಗ್ಗೆ ಮಾತನಾಡುತ್ತಾರೆ ರಾಜೇಶ್ ಧ್ರುವ.
” ನಟನೆಯ ಹೊರತಾಗಿ, ನನಗೆ ತಂತ್ರಜ್ಞಾನಾಧಾರಿತ ವಿಷಯಗಳ ಕುರಿತೂ ಹೆಚ್ಚು ಒಲವಿದೆ. ನಾನು ಕಿರುವಿಡಿಯೋ ಹಾಗೂ ಕಿರುಚಿತ್ರಗಳನ್ನೂ ಕೂಡಾ ನಿರ್ಮಿಸುತ್ತೇನೆ. ನನಗೆ ಸಾಧ್ಯವಾಗೋ ಎಲ್ಲಾ ಕ್ಷೇತ್ರಗಳಲ್ಲೂ ಕೈಯಾಡಿಸುವಲ್ಲಿ ಪ್ರಯತ್ನಿಸುತ್ತೇನೆ. ದೊರಕುವ ಎಲ್ಲಾ ಅವಕಾಶಗಳನ್ನೂ ಸಂಪೂರ್ಣವಾಗಿ ಬಳಸಿಕೊಳ್ಳುತ್ತೇನೆ, ಯಾವುದೇ ಅವಕಾಶಗಳು ಅರಸಿ ಬಂದರೂ ಅದನ್ನು ತಳ್ಳಿಹಾಕುವ ಹಾಗೂ ನನಗೊಪ್ಪುವ ಸ್ಕ್ರಿಪ್ಟ್ ದೊರಕುವವರೆಗೂ ಕಾದು ನಂತರ ಪಶ್ಚಾತ್ತಾಪ ಪಡುವ ಸಂದರ್ಭ ಎದುರಾಗಬಾರದು. ಧಾರವಾಹಿ ಹಾಗೂ ರಿಯಾಲಿಟಿ ಶೋಗಳು ನನಗೆ ಸಮ್ಮತವೇ, ಆದರೆ ಡಿಜಿಟಲ್ ಮಾಧ್ಯಮವನ್ನು ಕಡೆಗಣಿಸುವುದಿಲ್ಲ” ಎಂದು ರಾಜೇಶ್ ಹಂಚಿಕೊಂಡಿದ್ದಾರೆ.
– ಅಹಲ್ಯಾ