ಲಾಕ್ಡೌನ್ ಇರುವುದರಿಂದ ಸದ್ಯಕ್ಕೆ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹತೋಟಿಯಲ್ಲಿದೆ ಎನ್ನಲಾಗುತ್ತಿದೆ. ಈ ಕಾರಣಕ್ಕೆ ಮತ್ತೆ ಲಾಕ್ಡೌನ್ ವಿಸ್ತರಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಈ ಸಮಸ್ಯೆ ಶಾಶ್ವತವಾಗಿ ಕಡಿಮೆ ಆಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ. ಎಷ್ಟು ಬೇಗ ಲಾಕ್ಡೌನ್ ಮುಗಿದು, ಕೊರೊನಾ ಸಮಸ್ಯೆ ಕಳೆದು ಮೊದಲಿನಂತೆ ಹೊರಗೆ ಹೋಗುತ್ತೇವೋ ಎಂದು ಪರಿತಪಿಸುವಂತಾಗುತ್ತಿದೆ. ಲಾಕ್ಡೌನ್ನಿಂದ ಸಂಪಾದನೆ ಇಲ್ಲದವರಿಗೆ ಉಳ್ಳವರು ಸಹಾಯ ಹಸ್ತ ಚಾಚುತ್ತಿದ್ದಾರೆ. ಚಿತ್ರರಂಗದ ವಿಚಾರಕ್ಕೆ ಬರುವುದಾದರೆ ಸ್ಟಾರ್ ನಟರು, ಪೋಷಕ ನಟರು ಹಾಗೂ ಸಿನಿಕಾರ್ಮಿಕರಿಗೆ ದಿನಸಿ ಕಿಟ್ ಹಾಗೂ ಇನ್ನಿತರ ಅಗತ್ಯ ವಸ್ತುಗಳನ್ನು ವಿತರಿಸುತ್ತಿದ್ದಾರೆ. ಸೋನುಸೂದ್ ಸುದೀಪ್, ರಾಗಿಣಿ, ಉಪೇಂದ್ರ, ಸಂಜನಾ ಗಲ್ರಾನಿ ಹಾಗೂ ಇನ್ನಿತರರು ಸಾಕಷ್ಟು ನೆರವು ನೀಡಿದ್ದಾರೆ. ನಟಿ ಹರ್ಷಿಕಾ ಪೂಣಚ್ಚ ಹಾಗೂ ಬಿಗ್ ಬಾಸ್ ಖ್ಯಾತಿಯ ಭುವನ್ ಪೊನ್ನಣ್ಣ ಜೊತೆ ಸೇರಿ ಭುವನಂ ಫೌಂಡೇಶನ್ ಮೂಲಕ ಈಗಾಗಲೇ ಸಾಕಷ್ಟು ಸಹಾಯ ಮಾಡಿದ್ಧಾರೆ. ಇದೀಗ ಅವರಿಬ್ಬರೂ ಒಂದು ಹೆಜ್ಜೆ ಮುಂದೆ ಹೋಗಿ ಕೊರೊನಾ ರೋಗಿಗಳನ್ನು ರಂಜಿಸಿದ್ದಾರೆ.
ಕೊರೊನಾ ಬಂದರೆ ಮುಗಿಯಿತು ಎಂಭ ಭಯದಿಂದಲೇ ಎಷ್ಟೋ ಮಂದಿ ಈ ವೈರಸ್ಗೆ ಬಲಿಯಾಗುತ್ತಿದ್ದಾರೆ. ಆದರೆ ಇಂತವರಿಗೆ ಧೈರ್ಯ ತುಂಬುವ ಪ್ರಯತ್ನ ನಡೆಯುತ್ತಲೇ ಬಂದಿದೆ. ಕೊರೊನಾ ಬಂದರೆ ಹೆದರುವ ಅವಶ್ಯಕತೆ ಇಲ್ಲ, ಧೈರ್ಯವೇ ಮೊದಲ ಔಷಧ, ಆತ್ಮವಿಶ್ವಾಸದಿಂದ ಇದ್ದರೆ ಇದರಿಂದ ಹೊರಬರುವುದು ಬಹಳ ಸುಲಭ ಎಂದು ತಿಳುವಳಿಕೆ ಹೇಳಲಾಗುತ್ತಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ವೈದ್ಯರು, ಸಿಬ್ಬಂದಿಗಳು ಹಾಡಿನ ಮೂಲಕ, ನೃತ್ಯದ ಮೂಲಕ ರಂಜಿಸುತ್ತಿರುವ ಎಷ್ಟೋ ಸುದ್ದಿಗಳನ್ನು ನೀವು ಕೇಳಿರುತ್ತೀರಿ. ಇದೀಗ ಹರ್ಷಿಕಾ ಹಾಗೂ ಭುವನ್ ಇಬ್ಬರೂ ತಮ್ಮ ಡ್ಯಾನ್ಸ್ ಮೂಲಕ ರೋಗಿಗಳನ್ನು ರಂಜಿಸಿದ್ಧಾರೆ.
ಲಾಕ್ಡೌನ್ ಆರಂಭವಾದಾಗಿನಿಂದ ಹರ್ಷಿಕಾ ಹಾಗೂ ಭುವನ್ ಜೊತೆ ಸೇರಿ ಬಹಳಷ್ಟು ರೋಗಿಗಳಿಗೆ ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಮಾಡಿದ್ದಾರೆ. ಕೊರೊನಾ ರೋಗಿಗಳು ಯಾವುದೇ ಕಾರಣಕ್ಕೂ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು ಎಂಬ ಉದ್ದೇಶದಿಂದ ಪಿಪಿಇ ಕಿಟ್ ಧರಿಸಿ ಮಡಿಕೇರಿ ಸರ್ಕಾರಿ ಆಸ್ಪತ್ರೆಗೆ ತೆರಳಿ ಅಲ್ಲಿ ರೋಗಿಗಳನ್ನು ಮಾತನಾಡಿಸಿದ್ದಾರೆ. ಅಷ್ಟೇ ಅಲ್ಲ ಅವರ ಮುಂದೆ ಡ್ಯಾನ್ಸ್ ಮಾಡಿ ಅವರನ್ನು ರಂಜಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಸುಮಾರು 400 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಪಿಪಿಇ ಕಿಟ್ ಧರಿಸಿದ್ದರಿಂದ ತಮ್ಮನ್ನು ರೋಗಿಗಳು ಸುಲಭವಾಗಿ ಕಂಡುಹಿಡಿಯಲಿ ಎಂಬ ಕಾರಣದಿಂದ ಹರ್ಷಿಕಾ ತಮ್ಮ ಪಿಪಿಇ ಕಿಟ್ ಮೇಲೆ ಹರ್ಷಿಕಾ ಪೂಣಚ್ಚ ಎಂದು ಬರೆದುಕೊಂಡಿದ್ದರು. ಇವರಿಬ್ಬರ ಈ ಡ್ಯಾನ್ಸ್ ವಿಡಿಯೋ ವೈರಲ್ ಆಗುತ್ತಿದ್ದು ಅಭಿಮಾನಿಗಳು ಹರ್ಷಿಕಾ, ಭುವನ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಿನಿಮಾ ವಿಚಾರಕ್ಕೆ ಬರುವುದಾದರೆ ಭುವನ್ ಪೊನ್ನಣ್ಣ ‘ಪ್ರಣಯರಾಜ’ ಎಂಬ ಚಿತ್ರದಲ್ಲಿ ನಟಿಸುತ್ತಿದ್ಧಾರೆ. ಇನ್ನು ಹರ್ಷಿಕಾ ಪೂಣಚ್ಚ ‘ಹಮ್ ಹೆ ರಹಿ ಪ್ಯಾರ್ ಕೆ’ ಎಂಬ ಭೋಜ್ಪುರಿ ಚಿತ್ರದಲ್ಲಿ ನಟಿಸಿದ್ದು ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಭೋಜ್ಪುರಿ ಭಾಷೆಯ ಪವನ್ ಸಿಂಗ್ ಎಂಬ ಖ್ಯಾತ ನಟನೊಂದಿಗೆ ಹರ್ಷಿಕಾ ನಟಿಸಿದ್ಧಾರೆ.
-ರಕ್ಷಿತ ಕೆ.ಆರ್. ಸಾಗರ