ಸಿನಿಮಾ ನಟರ ಹುಟ್ಟುಹಬ್ಬದಂದು ಅವರ ಸಿನಿಮಾ ಟೀಸರ್, ಟ್ರೇಲರ್, ಪೋಸ್ಟರ್ಗಳು ಬಿಡುಗಡೆಯಾಗುವುದು ಅಥವಾ ಅವರು ಹೊಸ ಸಿನಿಮಾಗಳನ್ನು ಘೋಷಿಸುವುದು ಸಾಮಾನ್ಯ. ಮೇ 30 ರಂದು ಕ್ರೇಜಿಸ್ಟಾರ್ ರವಿಚಂದ್ರನ್ ತಮ್ಮ ಕುಟುಂಬದ ಸದಸ್ಯರೊಂದಿಗೆ 60 ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡರು. ಹುಟ್ಟುಹಬ್ಬದ ವಿಶೇಷವಾಗಿ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ವಿಭಿನ್ನವಾಗಿ ಮೂರು ಹೊಸ ಸಿನಿಮಾಗಳನ್ನು ಕೂಡಾ ಅನೌನ್ಸ್ ಮಾಡಿದರು. 2019 ರಲ್ಲಿ ‘ಆ ದೃಶ್ಯ’ ಸಿನಿಮಾ ನಂತರ ರವಿಚಂದ್ರನ್ ಅಭಿನಯಿಸಿರುವ ಯಾವುದೇ ಸಿನಿಮಾಗಳು ಬಿಡುಗಡೆಯಾಗಿರಲಿಲ್ಲ. ಆದ್ದರಿಂದ ರವಿಮಾಮನ ಅಭಿಮಾನಿಗಳು ಅವರ ಹೊಸ ಸಿನಿಮಾಗಳನ್ನು ನೋಡಲು ಕಾತರದಿಂದ ಕಾಯುತ್ತಿದ್ಧಾರೆ. ಸದ್ಯಕ್ಕೆ ರವಿಚಂದ್ರನ್ ‘ಕನ್ನಡಿಗ’ ಚಿತ್ರವನ್ನು ಮುಗಿಸಿದ್ದು ‘ರವಿ ಬೋಪಣ್ಣ’ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.
‘ಗಾಡ್’, ‘6T’ಹಾಗೂ ‘ಬ್ಯಾಡ್ ಬಾಯ್ಸ್’ ರವಿಚಂದ್ರನ್ ಈ ಬಾರಿ ತಮ್ಮ ಹುಟ್ಟುಹಬ್ಬದಂದು ಘೋಷಿಸಿರುವ 3 ಹೊಸ ಸಿನಿಮಾಗಳು. ಇನ್ನು ಪ್ರತಿ ಅಭಿಮಾನಿಗಳಿಗೂ ಒಂದೇ ಕುಟುಂಬದ ಕಲಾವಿದರನ್ನು ತೆರೆ ಮೇಲೆ ಒಟ್ಟಿಗೆ ನೋಡುವ ಆಸೆ ಇರುತ್ತದೆ. ರವಿಚಂದ್ರನ್ ತಮ್ಮ ಪುತ್ರರೊಂದಿಗೆ ಯಾವಾಗ ಸಿನಿಮಾ ಮಾಡುತ್ತಾರೆ..? ಎಂದು ಅಭಿಮಾನಿಗಳು ಬಹಳ ದಿನಗಳಿಂದ ಕೇಳುತ್ತಲೇ ಇದ್ದರು. ಇದಕ್ಕೆ ಈಗ ಸಮಯ ಕೂಡಿ ಬಂದಿದೆ. ಕ್ರೇಜಿಸ್ಟಾರ್ ತಮ್ಮ ಪುತ್ರರಾದ ಮನುರಂಜನ್ ಹಾಗೂ ವಿಕ್ರಮ್ ಜೊತೆ ಸಿನಿಮಾ ಮಾಡಲು ಎಲ್ಲಾ ತಯಾರಿ ನಡೆಸಿದ್ದಾರೆ. ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಕೂಡಾ ಶುರುವಾಗಿದೆಯಂತೆ. ‘ಬ್ಯಾಡ್ ಬಾಯ್ಸ್’ ಚಿತ್ರದಲ್ಲಿ ರವಿಚಂದ್ರನ್ ತಮ್ಮ ಇಬ್ಬರೂ ಪುತ್ರರೊಂದಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ‘ತ್ರೀ ಇನ್ ಒನ್’ ಎಂಬ ಟ್ಯಾಗ್ಲೈನ್ ಕೂಡಾ ಇದೆ.
ತಂದೆಯೊಂದಿಗೆ ತೆರೆ ಹಂಚಿಕೊಳ್ಳುತ್ತಿರುವ ಬಗ್ಗೆ ವಿಕ್ರಮ್ ರವಿಚಂದ್ರನ್ ಮಾತನಾಡಿ, ”ಬ್ಯಾಡ್ ಬಾಯ್ಸ್, ನಾಯಕನಾಗಿ ನನ್ನ ಎರಡನೇ ಸಿನಿಮಾ. ಲಾಕ್ಡೌನ್ಗೆ ಮುನ್ನವೇ ಬ್ಯಾಡ್ ಬಾಯ್ಸ್ ಶೇ.20 ರಷ್ಟು ಚಿತ್ರೀಕರಣ ಮಾಡಿದ್ದೇವೆ. ಔಟ್ಪುಟ್ ಬಹಳ ಚೆನ್ನಾಗಿ ಮೂಡಿಬಂದಿದೆ. ನಾನು ಈಗಾಗಲೇ ಅಪ್ಪ ಅಭಿನಯಿಸಿದ್ದ ‘ಕ್ರೇಜಿಸ್ಟಾರ್’ ಚಿತ್ರದಲ್ಲಿ ನಟಿಸಿದ್ದೇನೆ. ಆದರೆ ಹೀರೋ ಆದ ನಂತರ ತಂದೆಯೊಂದಿಗೆ ಕೆಲಸ ಮಾಡುತ್ತಿರುವುದು ಇದೇ ಮೊದಲು. ತಂದೆಯವರೇ ಎಲ್ಲಾ ಕೆಲಸವನ್ನು ನೋಡಿಕೊಳ್ಳುತ್ತಿದ್ದಾರೆ, ಆದ್ದರಿಂದ ಚಿತ್ರದ ಬಗ್ಗೆ ಈಗಲೇ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ” ಎಂದು ವಿಕ್ರಮ್ ಹೇಳಿದ್ದಾರೆ.
ಇನ್ನು, ತಂದೆಯೊಂದಿಗೆ ಕೆಲಸ ಮಾಡುವ ಅನುಭವ ಹೇಗಿದೆ..? ಎಂದು ಕೇಳಿದ ಪ್ರಶ್ನೆಗೆ, ”ನಾವು ಮನೆಯಲ್ಲಿ ಮಾತ್ರ ಅಪ್ಪ-ಮಗ. ಆದರೆ ಚಿತ್ರೀಕರಣದ ಸ್ಥಳದಲ್ಲಿ ಪ್ರೊಫೆಷನಲ್ ಆಗಿರುತ್ತೇವೆ. ನಮ್ಮಿಂದ ಅಥವಾ ಇತರ ಕಲಾವಿದರಿಂದ ಕೆಲಸ ಮಾಡಿಸುವ ಸಮಯದಲ್ಲಿ ತಂದೆ ಯಾವುದೇ ಸಂಬಂಧಗಳನ್ನು ಮಧ್ಯೆ ತರುವುದಿಲ್ಲ. ಅವರ ಜೊತೆ ಕೆಲಸ ಮಾಡುವುದು ನಿಜಕ್ಕೂ ಒಂದೊಳ್ಳೆ ಅನುಭವ. ಅವರ ಬಳಿ ನಾನು ಸಾಕಷ್ಟು ವಿಚಾರಗಳನ್ನು ಕಲಿತಿದ್ದೇನೆ. ಮತ್ತೆ ಚಿತ್ರೀಕರಣಕ್ಕೆ ಸರ್ಕಾರದಿಂದ ಯಾವಾಗ ಅನುಮತಿ ದೊರೆಯಲಿದೆಯೋ ನನಗೆ ಗೊತ್ತಿಲ್ಲ. ಆದರೆ ಮತ್ತೆ ನಾನು ಸೆಟ್ಗೆ ಹೋಗಿ ಅಪ್ಪನೊಂದಿಗೆ ಚಿತ್ರೀಕರಣದಲ್ಲಿ ಭಾಗಿಯಾಗಲು ಕಾಯುತ್ತಿದ್ದೇನೆ. ಅಭಿಮಾನಿಗಳು ಕೂಡಾ ಬಹಳ ದಿನಗಳಿಂದ ಅಪ್ಪನ ಸಿನಿಮಾ ನೋಡಲು ಕಾಯುತ್ತಿದ್ಧಾರೆ” ಎಂದು ವಿಕ್ರಮ್ ರವಿಚಂದ್ರನ್ ಹೇಳಿದ್ದಾರೆ.
ವಿಕ್ರಮ್ ರವಿಚಂದ್ರನ್ ಅಭಿನಯದ ‘ತ್ರಿವಿಕ್ರಮ’ ಬಿಡುಗಡೆಗೆ ಸಿದ್ಧವಿದೆ. ಈ ಸಿನಿಮಾ ಆಡಿಯೋ ಹಕ್ಕು 50 ಲಕ್ಷಕ್ಕೆ ಮಾರಾಟವಾಗಿದ್ದು ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿಸಿದೆ. ಇನ್ನು ಮನುರಂಜನ್ ರವಿಚಂದ್ರನ್ ‘ಪ್ರಾರಂಭ’ ಹಾಗೂ ‘ಮುಗಿಲ್ ಪೇಟೆ’ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ.
-ರಕ್ಷಿತ ಕೆ.ಆರ್. ಸಾಗರ