ರಕ್ಷಿತ್ ಶೆಟ್ಟಿ-ರಶ್ಮಿಕಾ ಮಂದಣ್ಣ ಜೋಡಿ ಎಷ್ಟು ಚೆನ್ನಾಗಿದೆ ಅಲ್ವೇ ಎಂದುಕೊಂಡಿದ್ದವರು ಮುಂದೆ ಅದೇ ಜೋಡಿ ದೂರಾಗಬಹುದು ಎಂದು ಕನಸಲ್ಲೂ ಊಹಿಸಿರಲಿಲ್ಲ ಎನ್ನಿಸುತ್ತದೆ. ತಮ್ಮ ‘ಕಿರಿಕ್ ಪಾರ್ಟಿ’ ಚಿತ್ರಕ್ಕೆ ರಶ್ಮಿಕಾ ಮಂದಣ್ಣನನ್ನು ಕರೆತಂದ ರಕ್ಷಿತ್ ಶೆಟ್ಟಿ ಕೆಲವು ದಿನಗಳ ನಂತರ ಅವರನ್ನೇ ಪ್ರೀತಿಸಿದರು. ಇಬ್ಬರೂ ಮದುವೆಯಾಗಲು ನಿಶ್ಚಯಿಸಿ ನಿಶ್ಚಿತಾರ್ಥ ಕೂಡಾ ಮಾಡಿಕೊಂಡ್ರು. ಆದರೆ ರಶ್ಮಿಕಾ ಯಾವಾಗ ತೆಲುಗು ಚಿತ್ರರಂಗದತ್ತ ಹೊರಟು ವಿಜಯ್ ದೇವರಕೊಂಡ ಜೊತೆ ನಟಿಸಿದ್ರೋ, ಗಾಸಿಪ್ ಶುರುವಾಯ್ತು. ರಕ್ಷಿತ್-ರಶ್ಮಿಕಾ ಇಬ್ಬರ ನಡುವೆ ಎಲ್ಲಾ ಚೆನ್ನಾಗಿದ್ರೂ ಜನರು ಮಾತ್ರ ರಶ್ಮಿಕಾ ಇನ್ನು ರಕ್ಷಿತ್ ಶೆಟ್ಟಿಯನ್ನು ಮರೆತಂತೆ ಎಂದು ಮಾತನಾಡಿಕೊಳ್ಳಲು ಆರಂಭಿಸಿದರು. ಮುಂದೆ ಅದೇ ನಿಜವಾಯ್ತು. ಇಬ್ಬರ ನಿಶ್ಚಿತಾರ್ಥ ಮುರಿದು ಬಿತ್ತು. ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ದೂರವಾದ್ರು. ಅದಾದ ನಂತರ ರಕ್ಷಿತ್ ಶೆಟ್ಟಿ ಸುಮಾರು 1 ವರ್ಷಗಳ ಕಾಲ ಸೋಷಿಯಲ್ ಮೀಡಿಯಾದಿಂದ ದೂರ ಉಳಿದುಬಿಟ್ರು. ಇತ್ತ ರಶ್ಮಿಕಾ ಮಂದಣ್ಣ ಚಿತ್ರರಂಗದಲ್ಲಿ ಹಂತ ಹಂತವಾಗಿ ಬೆಳೆಯುತ್ತಾ ಹೋದ್ರು.
ಇಬ್ಬರ ಬ್ರೇಕ್ ಅಪ್ ಆದಾಗಿನಿಂದ ಬಹುತೇಕ ಎಲ್ಲರೂ ರಶ್ಮಿಕಾ ಕಡೆ ಬೆರಳು ತೋರಿ ಮಾತನಾಡುತ್ತಲೇ ಇದ್ದಾರೆ. ರಕ್ಷಿತ್ ಶೆಟ್ಟಿ ಜೊತೆ ಸಂಬಂಧ ಕಳೆದುಕೊಂಡಿದ್ದರ ಜೊತೆಗೆ ಕನ್ನಡ ಸಿನಿಮಾ ಹಾಗೂ ಭಾಷೆಯನ್ನು ಅವರು ಕಡೆಗಣಿಸುತ್ತಿದ್ದಾರೆ ಎಂಬ ಕಾರಣಕ್ಕೆ ಬಹಳಷ್ಟು ಮಂದಿ ರಶ್ಮಿಕಾ ಬಗ್ಗೆ ಬೇಸರ ವ್ಯಕ್ತಪಡಿಸುತ್ತಲೇ ಇದ್ದಾರೆ. ಅವಕಾಶ ದೊರೆತಾಗಲೆಲ್ಲಾ ರಶ್ಮಿಕಾ ಅವರನ್ನು ನಿಂದಿಸುತ್ತಿದ್ದಾರೆ. ಆದರೆ ರಕ್ಷಿತ್ ಶೆಟ್ಟಿ ಮಾತ್ರ ರಶ್ಮಿಕಾ ತಮ್ಮಿಂದ ದೂರ ಹೋದರೂ ಅವರನ್ನು ಇಂದಿಗೂ ಗೌರವಿಸುತ್ತಿದ್ಧಾರೆ. ಇದನ್ನು ಅವರು ಸಾಕಷ್ಟು ಬಾರಿ ನಿರೂಪಿಸಿದ್ದಾರೆ. ಇದೀಗ ಮತ್ತೆ ರಶ್ಮಿಕಾ ಪರ ಮಾತನಾಡಿ ತಾವು ಎಂತಹ ವ್ಯಕ್ತಿ ಎಂಬುದನ್ನು ಮತ್ತೆ ಸಾಬೀತು ಮಾಡಿದ್ಧಾರೆ.
2 ದಿನಗಳ ಹಿಂದಷ್ಟೇ ರಕ್ಷಿತ್ ಶೆಟ್ಟಿ ತಮ್ಮ 38ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಬರ್ತ್ ಡೇ ವಿಶೇಷವಾಗಿ ನಿನ್ನೆ ‘ಚಾರ್ಲಿ 777’ ಚಿತ್ರತಂಡ 5 ಭಾಷೆಗಳಲ್ಲಿ ಹೊಸ ಟೀಸರ್ ಬಿಡುಗಡೆ ಮಾಡಿತ್ತು. ಎಲ್ಲಾ ಭಾಷೆಗಳ ಸಿನಿಪ್ರಿಯರೂ ಟೀಸರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಚಾರ್ಲಿ 777 ಸಿನಿಮಾದ ಬಗ್ಗೆ ಮಾತನಾಡಲು ರಕ್ಷಿತ್ ಶೆಟ್ಟಿ ಇನ್ಸ್ಟಾಗ್ರಾಮ್ ಲೈವ್ ಬಂದಿದ್ದಾರೆ. ಆದರೆ ಕೆಲವರು ರಶ್ಮಿಕಾ ಅವರನ್ನು ಬೈಯ್ದು ಕಮೆಂಟ್ ಮಾಡಿದ್ದಾರೆ. ಇದನ್ನು ಗಮನಿಸಿದ ರಕ್ಷಿತ್ ಶೆಟ್ಟಿ, ರಶ್ಮಿಕಾ ಹೆಸರನ್ನು ಹೇಳದೆ, ”ಇಲ್ಲಿ ಕೆಲವೊಂದು ಕಮೆಂಟ್ಗಳನ್ನು ನೋಡುತ್ತಿದ್ರೆ ಬಹಳ ಬೇಜಾರಾಗುತ್ತಿದೆ. ಆ ಕಮೆಂಟ್ ನನ್ನ ಬಗ್ಗೆ ಅಲ್ಲ, ಮತ್ತೊಬ್ಬರ ಕುರಿತಾಗಿದ್ಧಾಗಿದೆ. ನಾನು ಎಲ್ಲರಿಗೂ ಕೇಳಿಕೊಳ್ಳುವುದಿಷ್ಟೇ, ದಯವಿಟ್ಟು ಹಳೆಯದನ್ನು ಮರೆತುಬಿಡಿ, ಆದದ್ದು ಆಗಿ ಹೋಯ್ತು, ಅದರ ಬಗ್ಗೆ ಮಾತನಾಡಿ ಪ್ರಯೋಜನವಿಲ್ಲ, ನಮ್ಮ ಬಗ್ಗೆಯೇ ಅಸಹ್ಯ ಹುಟ್ಟಿಸುವಷ್ಟರ ಮಟ್ಟಿಗೆ ಬೇರೆಯವರ ವಿಚಾರವಾಗಿ ಕಮೆಂಟ್ ಮಾಡಬಾರದು. ಮೊದಲು ಮಾನವರಾಗೋಣ, ಎಲ್ಲರನ್ನೂ ಗೌರವಿಸೋಣ, ಎಲ್ಲರಿಗೂ ಅವರದ್ದೇ ಆದ ಜೀವನವಿದೆ. ಇಲ್ಲಿ ನಾನು ಒಳ್ಳೊಳ್ಳೆ ಕಮೆಂಟ್ಗಳನ್ನು ನೋಡಲು ಬಯಸುತ್ತೇನೆ, ನಮ್ಮ ಸಿನಿಮಾ ಬಗ್ಗೆ ಕಮೆಂಟ್ ನೋಡಲು ಮಾತ್ರ ಬಯಸುತ್ತೇನೆ” ಎಂದು ರಕ್ಷಿತ್ ಶೆಟ್ಟಿ, ರಶ್ಮಿಕಾ ವಿರುದ್ಧದ ಕಮೆಂಟ್ಗಳಿಗೆ ಬೇಸರ ವ್ಯಕ್ತಪಡಿಸಿದ್ದಾರೆ.
ರಕ್ಷಿತ್ ಶೆಟ್ಟಿ ಹೀಗೆ ಮಾತನಾಡಿದ್ದು ರಶ್ಮಿಕಾ ವಿಚಾರವಾಗಿ ಅಂತ ಎಲ್ಲರಿಗೂ ತಕ್ಷಣವೇ ಅರ್ಥವಾಗಿದೆ. ಬ್ರೇಕಪ್ ವಿಚಾರಕ್ಕೆ ಎಷ್ಟು ನೋವು, ಅಪಮಾನವಾದರೂ ಇಂದಿಗೂ ರಕ್ಷಿತ್ ಶೆಟ್ಟಿ ರಶ್ಮಿಕಾ ಅವರನ್ನು ಗೌರವಿಸುತ್ತಿದ್ದಾರೆ ಎಂದು ತಿಳಿದ ನೆಟಿಜನ್ಸ್ ರಕ್ಷಿತ್ ಗುಣಕ್ಕೆ ಮಾರು ಹೋಗಿದ್ದಾರೆ. ಮತ್ತೆ ಕೆಲವರಂತೂ ‘ಗುರು, ಇಷ್ಟು ಇನೋಸೆಂಟ್ ಆಗ್ಬೇಡಿ’ ಎಂದು ಕಮೆಂಟ್ ಮಾಡುತ್ತಿದ್ಧಾರೆ.
ಇನ್ನು ‘ಚಾರ್ಲಿ 777’ ಸಿನಿಮಾ ವಿಚಾರಕ್ಕೆ ಬರುವುದಾದರೆ ಕಿರಣ್ ರಾಜ್ .ಕೆ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಜಿ.ಎಸ್. ಗುಪ್ತ ಹಾಗೂ ರಕ್ಷಿತ್ ಶೆಟ್ಟಿ ಜೊತೆ ಸೇರಿ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ಗಳು ಹಾಗೂ ಮೇಕಿಂಗ್ ವಿಡಿಯೋ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಸಿನಿಮಾ 5 ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು ರಿಲೀಸ್ ದಿನಾಂಕವನ್ನು ಚಿತ್ರತಂಡ ಶೀಘ್ರದಲ್ಲೇ ಘೋಷಿಸಲಿದೆ.
-ರಕ್ಷಿತ ಕೆ.ಆರ್. ಸಾಗರ