ದೇಹಕ್ಕೆ ವಯಸ್ಸಾಗುತ್ತಿದ್ದಂತೆ ಸಣ್ಣ ಪುಟ್ಟ ಕಾಯಿಲೆಗಳು ಮನುಷ್ಯರನ್ನು ಕಾಡುವುದು ಸಹಜ. ನಿಯಮಿತ ಆಹಾರ, ವ್ಯಾಯಾಮ ಹಾಗೂ ಇನ್ನಿತರ ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನ ನೀಡಿದರೆ ಇಂತಹ ಕಾಯಿಲೆಗಳು ಹೀಗೆ ಬಂದು ಹಾಗೆ ಹೋಗುತ್ತವೆ. ಆದರೆ ಈ ಕ್ಯಾನ್ಸರ್, ಹೆಚ್ಐವಿಯಂತ ಕಾಯಿಲೆಗಳು ಜೀವಂತ ಸಮಾಧಿ ಮಾಡುತ್ತವೆ. ಆರಂಭದಲ್ಲೇ ಇದಕ್ಕೆ ಸೂಕ್ತ ಚಿಕಿತ್ಸೆ ಪಡೆದರೆ ಈ ಮಾರಣಾಂತಿಕ ಕಾಯಿಲೆಯಿಂದ ಹೊರ ಬರಬಹುದು. ಆದರೆ ಅವಧಿ ಮೀರಿದರೆ ಕಷ್ಟ. ಒಂದು ವೇಳೆ ಬಡವರು ಈ ಕಾಯಿಲೆಗೆ ಒಳಗಾದರೆ ದೊಡ್ಡ ಮೊತ್ತದ ಹಣ ತೆತ್ತು ಅವರಿಗೆ ಚಿಕಿತ್ಸೆ ಪಡೆಯುವ ಯಾವುದೇ ದಾರಿಯಿರುವುದಿಲ್ಲ. ಆದರೆ ಶ್ರೀಮಂತರು ವಿದೇಶಕ್ಕೆ ಹೋಗಿಯಾದರೂ ಈ ಕಾಯಿಲೆಯಿಂದ ಗುಣಮುಖರಾಗುತ್ತಾರೆ. ಸೆಲಬ್ರಿಟಿಗಳ ವಿಚಾರಕ್ಕೆ ಬರುವುದಾದರೆ ಕ್ರಿಕೆಟಿಗ ಯುವರಾಜ್ ಸಿಂಗ್, ಸಿನಿಮಾ ನಟಿ ಗೌತಮಿ, ಮೊನಿಷಾ ಕೊಯಿರಾಲ, ನಟ ಸಂಜಯ್ ದತ್ ಹಾಗೂ ಇನ್ನಿತರರು ಕ್ಯಾನ್ಸರ್ಗಾಗಿ ವಿದೇಶದಲ್ಲಿ ಚಿಕಿತ್ಸೆ ಪಡೆದು ಅಪಾಯದಿಂದ ಪಾರಾಗಿದ್ದಾರೆ. ‘ಪ್ರೀತ್ಸೆ’ ಹುಡುಗಿ ಸೋನಾಲಿ ಬೇಂದ್ರೆ ಕೂಡಾ 3 ವರ್ಷಗಳ ಹಿಂದೆ ಕ್ಯಾನ್ಸರ್ಗೆ ಚಿಕಿತ್ಸೆ ಪಡೆದಿದ್ದರು. ಆ ದಿನಗಳನ್ನು ಸೋನಾಲಿ ನೆನೆದಿದ್ದಾರೆ.
ಜೂನ್ 6 ರಂದು ನ್ಯಾಷನಲ್ ಸರ್ವೈವರ್ ಡೇ. ಈ ದಿನದ ಅಂಗವಾಗಿ ಸೋನಾಲಿ ಬೇಂದ್ರೆ ವಿಶೇಷ ಫೋಟೋವೊಂದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕ್ಯಾನ್ಸರ್ಗಾಗಿ ವಿದೇಶದಲ್ಲಿ ಚಿಕಿತ್ಸೆ ಪಡೆಯುವಾಗ ಸೋನಾಲಿ ತಮ್ಮ ಕೂದಲನ್ನು ತೆಗೆದಿದ್ದರು. ಆ ಸಮಯದಲ್ಲಿ ಅವರು ಬಹಳ ಶಕ್ತಿಹೀನರಾಗಿ ಕಾಣುತ್ತಿದ್ದರು. ಅಂದಿನ ಫೋಟೋ ಹಾಗೂ ಈಗಿನ ಎರಡೂ ಫೋಟೋಗಳನ್ನು ಜೊತೆ ಸೇರಿಸಿರುವ ಸೋನಾಲಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಈ ಫೋಟೋ ಎಲ್ಲರ ಗಮನ ಸೆಳೆದಿದೆ.
”3 ವರ್ಷಗಳ ಈ ಸಮಯ ಎಷ್ಟು ಬೇಗ ಕಳೆಯಿತೋ ನನಗೆ ಗೊತ್ತಿಲ್ಲ” ಎಂದು ಸೋನಾಲಿ ಬರೆದುಕೊಂಡಿದ್ದಾರೆ. ಈಗಿನ ಫೋಟೋ ನೋಡುತ್ತಿದ್ದರೆ ನಿಜಕ್ಕೂ ಸೋನಾಲಿ ಬೇಂದ್ರೆ ಕ್ಯಾನ್ಸರ್ನಿಂದ ಬಳಲಿದ್ರಾ ಎಂಬ ಪ್ರಶ್ನೆ ಮೂಡುವುದು ಸಹಜ. ಸೋನಾಲಿ ಬೇಂದ್ರೆ ನ್ಯೂಯಾರ್ಕಿಗೆ ತೆರಳಿ ಸುಮಾರು 5 ತಿಂಗಳ ಕಾಲ ಚಿಕಿತ್ಸೆ ಪಡೆದಿದ್ದರು. ”ಪತಿ ಹಾಗೂ ಕುಟುಂಬ ನನ್ನಲ್ಲಿ ಆತ್ಮವಿಶ್ವಾಸ ತುಂಬಿದ್ದಕ್ಕೆ ನಾನು ಈ ಕಾಯಿಲೆಯಿಂದ ಗುಣಮುಖಳಾದೆ. ಕಾಯಿಲೆಗಿಂತ ಅದಕ್ಕೆ ಪಡೆದ ಚಿಕಿತ್ಸೆಯೇ ಬಹಳ ಭಯಾನಕ ಹಾಗೂ ನೋವಿನಿಂದ ಕೂಡಿತ್ತು” ಎಂದು ಸೋನಾಲಿ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಸೋನಾಲಿ ಬೇಂದ್ರೆ ಪೋಸ್ಟ್ಗೆ ಅಭಿಮಾನಿಗಳು ‘ಪಾಸಿಟಿವ್ ಆಗಿ ಇರಿ, ನಾವು ಯಾವಾಗಲೂ ನಿಮ್ಮೊಂದಿಗೆ ಇರುತ್ತೇವೆ’ ಎಂದು ಕಮೆಂಟ್ ಮಾಡಿದ್ದಾರೆ.
ಮಹಾರಾಷ್ಟ್ರದಲ್ಲಿ ಹುಟ್ಟಿ ಬೆಳೆದ ಸೋನಾಲಿ ಬೇಂದ್ರೆ, ಬೆಂಗಳೂರಿನ ಕೇಂದ್ರೀಯ ವಿದ್ಯಾಲಯದಲ್ಲಿ ಶಿಕ್ಷಣ ಮುಗಿಸಿದರು. ಕಾಲೇಜು ದಿನಗಳಲ್ಲೇ ಮಾಡೆಲಿಂಗ್ನಲ್ಲಿ ಗುರುತಿಸಿಕೊಂಡಿದ್ದ ಸೋನಾಲಿ, ಮೊದಲು ನಟಿಸಿದ್ದ ಹಿಂದಿ ಸಿನಿಮಾ ‘ರಾಮ್’ ಬಿಡುಗಡೆಯಾಗಲಿಲ್ಲ. ನಂತರ ತಮ್ಮ 19ನೇ ವರ್ಷದಲ್ಲಿ ‘ಆಗ್’ ಎಂಬ ಚಿತ್ರದಲ್ಲಿ ನಾಯಕಿ ಪಾತ್ರದಲ್ಲಿ ನಟಿಸುವ ಮೂಲಕ ಜನರಿಗೆ ಪರಿಚಿತರಾದರು. ರಕ್ಷಕ್, ದಿಲ್ಜಲೆ, ಡೂಪ್ಲಿಕೆಟ್, ಸರ್ಫರೋಶ್, ಹಮ್ ಸಾಥ್, ಸಾಥ್ ಹೈ, ಚಲ್ ಮೇರಿ ಭಾಯ್, ಇಂದ್ರ ಮನ್ಮಥುಡು ಸೇರಿ ಹಿಂದಿ, ಮರಾಠಿ, ತೆಲುಗಿನ ಬಹಳಷ್ಟು ಸಿನಿಮಾಗಳಲ್ಲಿ ಸೋನಾಲಿ ಬೇಂದ್ರೆ ನಟಿಸಿದ್ದಾರೆ.
2000 ರಲ್ಲಿ ಕನ್ನಡಕ್ಕೆ ಬಂದ ಸೋನಾಲಿ ಬೇಂದ್ರೆ ಶಿವರಾಜ್ಕುಮಾರ್ ಜೋಡಿಯಾಗಿ ‘ಪ್ರೀತ್ಸೆ’ ಚಿತ್ರದಲ್ಲಿ ನಟಿಸಿದ್ದರು. ಹುಡುಗಿಯನ್ನು ಕಾಡುವ ಸೈಕೋ ವಿಲನ್ ಆಗಿ ಉಪೇಂದ್ರ ಈ ಚಿತ್ರದಲ್ಲಿ ನಟಿಸಿದ್ದರು. ರಾಕ್ಲೈನ್ ವೆಂಕಟೇಶ್ ನಿರ್ಮಿಸಿದ್ದ ಈ ಚಿತ್ರವನ್ನು ಡಿ. ರಾಜೇಂದ್ರ ಬಾಬು ನಿರ್ದೇಶಿಸಿದ್ದರು. ಕಿರುತೆರೆಯಲ್ಲಿ ನಿರೂಪಕಿ, ರಿಯಾಲಿಟಿ ಶೋ ಜಡ್ಜ್ ಆಗಿ ಕೂಡಾ ಗುರುತಿಸಿಕೊಂಡಿರುವ ಸೋನಾಲಿ ಬೇಂದ್ರೆ ಸದ್ಯಕ್ಕೆ ನಟನೆಯಿಂದ ದೂರ ಉಳಿದಿದ್ದಾರೆ.
-ರಕ್ಷಿತ ಕೆ.ಆರ್. ಸಾಗರ