ರಾಜ್ಯದಲ್ಲಿ ಮತ್ತೊಮ್ಮೆ ಲಾಕ್ಡೌನ್ ಘೋಷಣೆ ಮಾಡಲಾಗಿದ್ದು ಜೂನ್ 7 ವರೆಗೂ ಲಾಕ್ಡೌನ್ ನಿಯಮಗಳನ್ನು ಪಾಲಿಸುವಂತೆ ರಾಜ್ಯ ಸರ್ಕಾರ ಜನತೆಗೆ ಸೂಚಿಸಿದೆ. ಸದ್ಯಕ್ಕೆ 2 ನೇ ಹಂತದ ಲಾಕ್ಡೌನ್ ಜಾರಿಯಲ್ಲಿದ್ದು ಮತ್ತೆ ವಿಸ್ತರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕೊರೊನಾ ನಿಯಂತ್ರಣಕ್ಕೆ ತರಲು ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಮಾಲ್, ಥಿಯೇಟರ್, ಸಾರಿಗೆ ಬಂದ್ ಆಗಿವೆ. ಅದ್ಧೂರಿ ಮದುವೆ, ಇನ್ನಿತರ ಕಾರ್ಯಕ್ರಮಗಳಿಗೆ ಬ್ರೇಕ್ ಬಿದ್ದಿದೆ. 3-4 ತಿಂಗಳ ಮುನ್ನವೇ ಮದುವೆ ದಿನಾಂಕ ಫಿಕ್ಸ್ ಮಾಡಿಕೊಂಡಿದ್ದವರಿಗೆ ಇದರಿಂದ ಬೇಸರ ಆದರೂ ಆರೋಗ್ಯದ ದೃಷ್ಟಿಯಿಂದ ಲಾಕ್ಡೌನ್ ನಿಯಮ ಪಾಲಿಸುತ್ತಿದ್ಧಾರೆ. ಈ ನಡುವೆ ಎಷ್ಟೋ ಮದುವೆಗಳು ಕುಟುಂಬದ ಸದಸ್ಯರ ಸಮ್ಮುಖದಲ್ಲಿ ನೆರವೇರಿದೆ. ಸೆಲಬ್ರಿಟಿಗಳ ಮದುವೆ ಕೂಡಾ ಇದರಿಂದ ಹೊರತಾಗಿಲ್ಲ. ಕಳೆದ ಬಾರಿ ಬಹಳಷ್ಟು ಸೆಲಬ್ರಿಟಿಗಳು ಲಾಕ್ಡೌನ್ ಸಮಯದಲ್ಲಿ ಮದುವೆಯಾಗಿದ್ದರು. ಈ ವರ್ಷ ಮೇ 14 ರಂದು ನಟ ಚಂದನ್ ಕುಮಾರ್ ಹಾಗೂ ಕವಿತಾ ಗೌಡ ಬಹಳ ಸರಳವಾಗಿ ಮದುವೆಯಾಗಿದ್ದರು. ಇದೀಗ ಸ್ಯಾಂಡಲ್ವುಡ್ ನಟಿ ಪ್ರಣಿತಾ ಸುಭಾಷ್ ಕೂಡಾ ಸಪ್ತಪದಿ ತುಳಿದಿದ್ಧಾರೆ.
ಲಾಕ್ಡೌನ್ ಜಾರಿಯಲ್ಲಿ ಇರುವುದರಿಂದ ಪ್ರಣಿತಾ ಭಾನುವಾರ (ಮೇ 30) ಬೆಂಗಳೂರಿನ ತಮ್ಮ ನಿವಾಸದಲ್ಲೇ ಮದುವೆಯಾಗಿದ್ದಾರೆ. ಪ್ರಣಿತಾ ಮದುವೆಯಾದ ವಿಚಾರ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಅಭಿಮಾನಿಗಳು ಶಾಕ್ ಆಗಿದ್ದಾರೆ. ಏಕೆಂದರೆ ಪ್ರಣಿತಾ, ತಮಗೆ ಮದುವೆ ಫಿಕ್ಸ್ ಆಗಿರುವ ವಿಚಾರವನ್ನು ಹೇಳಿಕೊಂಡಿರಲಿಲ್ಲ. ಈಗ ಇದ್ದಕ್ಕಿದ್ದಂತೆ ಸದ್ದಿಲ್ಲದೆ ಮದುವೆಯಾಗಿರುವುದು ಕೆಲವು ಅಭಿಮಾನಿಗಳಿಗೆ ಬೇಸರ ಆಗಿದೆ. ಆದರೆ ತಮ್ಮ ಮೆಚ್ಚಿನ ನಟಿ ವೈವಾಹಿಕ ಜೀವನ ಸುಖಮಯವಾಗಿರಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ. ಪ್ರಣಿತಾ ಮದುವೆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಅಂದ ಹಾಗೆ ಪ್ರಣಿತಾ ಬಹಳ ದಿನಗಳಿಂದ ತಾವು ಪ್ರೀತಿಸುತ್ತಿದ್ದ ನಿತಿನ್ ರಾಜು ಎಂಬುವವರ ಕೈ ಹಿಡಿದಿದ್ದಾರೆ. ನಿತಿನ್ಗೆ ಸ್ವಂತ ಬ್ಯುಸ್ನೆಸ್ ಇದೆ ಎನ್ನಲಾಗಿದೆ. ತಮ್ಮ ಮದುವೆ ಬಗ್ಗೆ ಮಾತನಾಡಿರುವ ಪ್ರಣಿತಾ, “ಇದು ಲವ್ ಕಮ್ ಅರೇಂಜ್ ಮದುವೆ. ನಮ್ಮಿಬ್ಬರಿಗೂ ಬಹಳ ವರ್ಷಗಳಿಂದ ಪರಿಚಯವಿದ್ದು ಇಬ್ಬರಿಗೂ ಸಾಕಷ್ಟು ಮ್ಯೂಚುವಲ್ ಫ್ರೆಂಡ್ಗಳಿದ್ದಾರೆ. ನಮ್ಮ ಪ್ರೀತಿ ವಿಚಾರವನ್ನು ಮನೆಯವರಿಗೆ ತಿಳಿಸಿ ಅವರ ಒಪ್ಪಿಗೆ ಪಡೆದು ಮದುವೆಯಾಗಿದ್ದೇವೆ. ಕೊರೊನಾ ಕಾರಣದಿಂದ ಮದುವೆಯನ್ನು ಮುಂದೂಡುತ್ತಲೇ ಬಂದಿದ್ದೇವೆ. ಆದರೆ ಮನೆಯವರ ಸೂಚನೆ ಮೇರೆಗೆ ಈಗ ಮದುವೆಯಾಗಿದ್ದೇವೆ. ಮದುವೆಯಲ್ಲಿ ಕೊರೊನಾ ನೀತಿ ನಿಯಮಗಳನ್ನು ಪಾಲಿಸಿದ್ದೇವೆ. ಜೀವನದ ಹೊಸ ಅಧ್ಯಾಯವನ್ನು ಆರಂಭಿಸಲಿದ್ದೇನೆ. ಇದರ ಬಗ್ಗೆ ಸಂತೋಷ ಇದೆ. ನಿಮ್ಮೆಲ್ಲರ ಆಶೀರ್ವಾದ ಇರಲಿ” ಎಂದು ಪ್ರಣಿತಾ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಪ್ರಣಿತಾ ಸುಭಾಷ್ ದರ್ಶನ್ ಜೊತೆ ‘ಪೊರ್ಕಿ’ ಚಿತ್ರದಲ್ಲಿ ನಟಿಸುವ ಮೂಲಕ ಆ್ಯಕ್ಟಿಂಗ್ ಕರಿಯರ್ ಆರಂಭಿಸಿದರು. ಕನ್ನಡದೊಂದಿಗೆ ತಮಿಳು ಹಾಗೂ ತಮಿಳು ಚಿತ್ರರಂಗದಲ್ಲಿ ಕೂಡಾ ಪ್ರಣಿತಾ ಗುರುತಿಸಿಕೊಂಡಿದ್ದು ಲಕ್ಷಾಂತರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಸದ್ಯಕ್ಕೆ ಪ್ರಣಿತಾ ಕನ್ನಡದಲ್ಲಿ ‘ರಾಮನ ಅವತಾರ’ ಚಿತ್ರದಲ್ಲಿ ನಟಿಸುತ್ತಿದ್ಧಾರೆ. ಬಾಲಿವುಡ್ಗೆ ಕೂಡಾ ಕಾಲಿಟ್ಟಿರುವ ಈ ಚೆಲುವೆ ‘ಭುಜ್-ದಿ ಪ್ರೈಡ್ ಆಫ್ ಇಂಡಿಯಾ’ ಹಾಗೂ ‘ಹಂಗಾಮ-2’ ಸಿನಿಮಾಗಳಲ್ಲಿ ನಟಿಸುತ್ತಿದ್ಧಾರೆ. ಪ್ರಣಿತಾ ವೈವಾಹಿಕ ಜೀವನ ಸಂತೋಷವಾಗಿರಲಿ ಎಂದು ಹಾರೈಸೋಣ.
-ರಕ್ಷಿತ ಕೆ.ಆರ್. ಸಾಗರ