ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಆಗ್ಗಾಗ್ಗೆ ವರ್ಗಾವಣೆ ಮಾಡುವುದು ಹೊಸ ವಿಚಾರವೇನಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡುವ ಅಧಿಕಾರಿಗಳ ಸೇವೆ ಇತರ ಜಿಲ್ಲೆಗಳಿಗೂ ದೊರೆಯಲಿ ಎಂಬ ಕಾರಣ ಮತ್ತೊಂದೆಡೆಯಾದರೆ ಎಷ್ಟೋ ಸಂಧರ್ಭಗಳಲ್ಲಿ ಅದೇ ಪ್ರಾಮಾಣಿಕತೆ ಆ ಅಧಿಕಾರಿಗಳಿಗೆ ಮುಳುವಾಗುತ್ತದೆ. ಕೆಲವೊಮ್ಮೆ ಪ್ರಭಾವಿ ವ್ಯಕ್ತಿಗಳ ಕೈವಾಡವೂ ವರ್ಗಾವಣೆಗೆ ಕಾರಣವಾಗಿರುತ್ತದೆ. ಮೈಸೂರು ಡಿಸಿ ಆಗಿದ್ದ ರೋಹಿಣಿ ಸಿಂಧೂರಿ ಹಾಗೂ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ನಡುವಿನ ಜಗಳ ಕೊರೊನಾ ಸಮಸ್ಯೆಗಿಂತಲೂ ದೊಡ್ಡ ಸುದ್ದಿಯಾಗಿತ್ತು. ”ರೋಹಿಣಿ ಸಿಂಧೂರಿ ನನಗೆ ಕಿರುಕುಳ ನೀಡುತ್ತಿದ್ದಾರೆ” ಎಂದು ಶಿಲ್ಪಾನಾಗ್ ಆರೋಪಿಸಿದರೆ, ”ಜಿಲ್ಲಾಧಿಕಾರಿಯಾಗಿ ನನಗೂ ಒತ್ತಡಗಳಿರುತ್ತವೆ. ಕೊರೊನಾ ಅಂಕಿ-ಅಂಶ ತಪ್ಪಾಗಬಾರದು ಎಂದು ಲೆಕ್ಕ ಕೇಳಿದ್ದಕ್ಕೆ ನನ್ನ ಮೇಲೆ ಕಿರುಕುಳದ ಆರೋಪ ಹೊರಿಸಿದ್ದಾರೆ” ಎಂದು ರೋಹಿಣಿ ಸಿಂಧೂರಿ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ. ಈ ವಿಚಾರದಲ್ಲಿ ಕೆಲವರು ರೋಹಿಣಿ ಸಿಂಧೂರಿ ಪರ ನಿಂತರೆ ಮತ್ತೆ ಕೆಲವರು ಶಿಲ್ಪಾ ನಾಗ್ ಅವರನ್ನು ಬೆಂಬಲಿಸಿದ್ಧಾರೆ.
ಇನ್ನು ರೋಹಿಣಿ ಹಾಗೂ ಶಿಲ್ಪಾನಾಗ್ ನಡುವಿನ ಯುದ್ಧ ಇಬ್ಬರ ವರ್ಗಾವಣೆಯಲ್ಲಿ ಕೊನೆಯಾಗಿದೆ. ರೋಹಿಣಿ ಸಿಂಧೂರಿ ಅವರನ್ನು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರನ್ನಾಗಿಯೂ, ಶಿಲ್ಪಾ ನಾಗ್ ಅವರನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕರನ್ನಾಗಿ ವರ್ಗಾವಣೆ ಮಾಡಲಾಗಿದೆ. ಮೈಸೂರಿನ ಹೊಸ ಜಿಲ್ಲಾಧಿಕಾರಿಯನ್ನಾಗಿ ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿದ್ದ ಗೌತಮ್ ಬಗಾದಿ ಅವರನ್ನು ನೇಮಿಸಲಾಗಿದೆ. ವಿಶೇಷ ಎಂದರೆ ಗೌತಮ್ ಪತ್ನಿ ಅಶ್ವಥಿ ಮಂಡ್ಯ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಆಡಳಿದ ವ್ಯವಸ್ಥಾಪಕರಾಗಿದ್ದ ಲಕ್ಷ್ಮಿಕಾಂತ್ ರೆಡ್ಡಿ ಅವರನ್ನು ಮೈಸೂರು ಪಾಲಿಕೆ ಆಯ್ತುಕ್ತರನ್ನಾಗಿ ನೇಮಿಸಲಾಗಿದೆ.
ಹೊಸದಾಗಿ ಮೈಸೂರು ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸುವ ಗೌತಮ್ ಬಗಾದಿ ಅವರಿಗೆ ಶುಭ ಕೋರಿ, ಹುದ್ದೆಯಿಂದ ನಿರ್ಗಮಿಸಿದ ರೋಹಿಣಿ ಸಿಂಧೂರಿ ಮೈಸೂರಿನ ಜನತೆಗೆ ಧನ್ಯವಾದ ಅರ್ಪಿಸಿದ್ಧಾರೆ. ”ಶಿಲ್ಪಾನಾಗ್ ಹತಾಶೆ ಬಗ್ಗೆ ನನಗೆ ಅನುಕಂಪ ಇದೆ. ಯಾವುದೇ ಅಧಿಕಾರಿಯನ್ನು ವರ್ಗಾಯಿಸಿದ ಮಾತ್ರಕ್ಕೆ ಅಲ್ಲಿಗೆ ಎಲ್ಲವೂ ಕೊನೆಯಾಯ್ತು ಎಂಬ ಅರ್ಥವಲ್ಲ. ಯಾವ ಜಿಲ್ಲೆಯಲ್ಲಾದರೂ ಯಾವ ಇಲಾಖೆಯಲ್ಲಾದರೂ ಈ ರೀತಿ ಮತ್ತೆ ಮತ್ತೆ ವರ್ಗಾವಣೆ ಮಾಡುತ್ತಿದ್ದರೆ ಕೆಲಸ ಮಾಡುವುದು ಕಷ್ಟವಾಗುತ್ತದೆ. ಜಿಲ್ಲೆಯ ವಸ್ತುಸ್ಥಿತಿಯನ್ನು ಹೊಸ ಜಿಲ್ಲಾಧಿಕಾರಿಗೆ ವಿವರಿಸಿದ್ದೇನೆ” ಎಂದ ರೋಹಿಣಿ ಸಿಂಧೂರಿ ಮೈಸೂರು ಬಿಟ್ಟು ಹೋಗುತ್ತಿರುವುದಕ್ಕೆ ಸ್ವಲ್ಪ ಭಾವುಕರಾಗೇ ಮಾತನಾಡಿದರು.
”ಇಲ್ಲಿ ಬಂದಾಗಿನಿಂದ ಮೈಸೂರಿನ ಜನತೆ ನನಗೆ ಬಹಳಷ್ಟು ಪ್ರೀತಿ ಕೊಟ್ಟಿದ್ದಾರೆ. ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ನಾನು ಇಷ್ಟು ದಿನ ತಾಯಿ ಮನೆಯಲ್ಲಿ ಇದ್ದೆ ಎಂಬ ಭಾವನೆ ಇದೆ. ಮಗಳಾಗಿ ನಾನು ಮೈಸೂರಿನ ಜನತೆಗೆ ಧನ್ಯವಾದ ಹೇಳುತ್ತಿದ್ದೇನೆ. ಇದೆಲ್ಲಾ ಆಕಸ್ಮಿಕವಾಗಿ ಆದ ಬೆಳವಣಿಗೆ, ನಾನು ಇದನ್ನು ನಿರೀಕ್ಷೆ ಮಾಡಿರಲಿಲ್ಲ. ತವರು ಮನೆಯನ್ನು ಬಿಟ್ಟು ಹೋಗುತ್ತಿದ್ದೇನೆ” ಎಂದು ರೋಹಿಣಿ ಸಿಂಧೂರಿ ಮತ್ತೆ ಮತ್ತೆ ಮೈಸೂರು ಹಾಗೂ ಮೈಸೂರಿನ ಜನತೆಯನ್ನು ಬಿಟ್ಟು ಹೋಗುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
-ರಕ್ಷಿತ ಕೆ.ಆರ್. ಸಾಗರ