ಚಿತ್ರರಂಗದಲ್ಲಿ ಗಾಸಿಪ್ ಎನ್ನುವುದು ಸಾಮಾನ್ಯ. ಬಹಳಷ್ಟು ನಟ-ನಟಿಯರು ತಮ್ಮ ಬಗ್ಗೆ ಗಾಸಿಪ್ಗೆ ಕಿವಿ ಕೊಡದೆ ತಾವಾಯಿತು ತಮ್ಮ ಕೆಲಸವಾಯ್ತು ಎಂದು ಸುಮ್ಮನಿದ್ದರೆ, ಮತ್ತೆ ಕೆಲವರು ಪ್ರತಿ ಬಾರಿ ತಮ್ಮ ಬಗ್ಗೆ ಗಾಸಿಪ್ ಹಬ್ಬಿದಾಗಲೆಲ್ಲಾ ಅದಕ್ಕೆ ಸ್ಪಷ್ಟನೆ ನೀಡುತ್ತಲೇ ಬಂದಿದ್ದಾರೆ. ಆದರೆ ಇದೇ ಗಾಸಿಪ್, ಎಷ್ಟೋ ಬಾರಿ ಆ ನಟ-ನಟಿಯರ ಕೆಲಸಕ್ಕೂ ಕಲ್ಲು ಹಾಕಿದ ಬಹಳಷ್ಟು ಉದಾಹರಣೆಗಳಿವೆ. ಮಾಧ್ಯಮಗಳಲ್ಲಿ ಈ ರೀತಿ ಗಾಸಿಪ್ಗಳು ಸುದ್ದಿಯಾಗುವುದು ಸಾಮಾನ್ಯ. ಆದರೆ ಗೂಗಲ್ ಮಾಡಿದ ಎಡವಟ್ಟಿನಿಂದ ಕೂಡಾ ಓದುಗರಿಗೆ ಎಷ್ಟೋ ಬಾರಿ ತಪ್ಪು ಮಾಹಿತಿ ತಲುಪಿದೆ. ಇದಕ್ಕೆ ತಾಜಾ ಉದಾಹರಣೆ ಸ್ಯಾಂಡಲ್ವುಡ್ ನಟಿ ಪೂಜಾಗಾಂಧಿ ಬಾಲಿವುಡ್ ನಟ ಸನ್ನಿ ಡಿಯೋಲ್ ಅವರನ್ನು ಮದುವೆಯಾಗಿರುವುದು. ಅರೆ! ಇದು ನಿಜಾನಾ ಮೊನ್ನೆಯಷ್ಟೇ ಲಾಕ್ಡೌನ್ನಲ್ಲಿ ನಟಿ ಪ್ರಣಿತಾ ಯಾರಿಗೂ ತಿಳಿಯದಂತೆ ಮದುವೆಯಾದ್ರು, ಇದೀಗ ಪೂಜಾಗಾಂಧಿ ಸನ್ನಿಡಿಯೋಲ್ ಕೈ ಹಿಡಿದ್ರಾ ಎಂದು ಆಶ್ಚರ್ಯಪಡಬೇಡಿ. ಇದು ಗೂಗಲ್ ಮಾಡಿರುವ ತಪ್ಪು ಅಷ್ಟೇ.
ಪೂಜಾ ಗಾಂಧಿ, ಅವರ ಹೆಸರಿಗಿಂತ ಹೆಚ್ಚಾಗಿ ಮಳೆ ಹುಡುಗಿ ಎಂದೇ ಫೇಮಸ್. ‘ಮುಂಗಾರು ಮಳೆ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ಪೂಜಾಗಾಂಧಿ ಬಹಳ ದಿನಗಳ ಗ್ಯಾಪ್ ನಂತರ ಇದೀಗ ಮತ್ತೆ ಆ್ಯಕ್ಟಿಂಗ್ಗೆ ವಾಪಸಾಗಿದ್ದಾರೆ. ಕೆಲವು ವರ್ಷಗಳ ಹಿಂದೆ ಪೂಜಾ ಗಾಂಧಿಗೆ ಆನಂದ್ ಎಂಬ ಉದ್ಯಮಿಯೊಂದಿಗೆ ಮದುವೆ ಫಿಕ್ಸ್ ಆಗಿತ್ತು. ನಿಶ್ಚಿತಾರ್ಥ ಕೂಡಾ ಆಗಿತ್ತು. ಪೂಜಾ ಹಾಗೂ ಆನಂದ್ ನಿಶ್ಚಿತಾರ್ಥದ ಸುದ್ದಿ ಮಾಧ್ಯಮಗಳಲ್ಲಿ ಕೂಡಾ ಪ್ರಕಟವಾಗಿತ್ತು. ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡುವ ಮುನ್ನವೇ ಕಾರಣಾಂತರಗಳಿಂದ ಮದುವೆ ಮುರಿದುಬಿತ್ತು. ಆದರೆ ಇದೀಗ ಪೂಜಾಗಾಂಧಿ ಬಾಲಿವುಡ್ ನಟ ಸನ್ನಿಡಿಯೋಲ್ ಅವರನ್ನು ಮದುವೆಯಾಗಿದ್ದಾರೆ ಎಂಬ ಗಾಸಿಪ್ ಹರಿದಾಡುತ್ತಿದೆ. ಆದರೆ ಪೂಜಾಗಾಂಧಿ ಇನ್ನೂ ಮದುವೆಯಾಗಿಲ್ಲ, ಸನ್ನಿ ಡಿಯೋಲ್ಗೆ ಈಗಾಗಲೇ 30 ವರ್ಷ ವಯಸ್ಸಿನ ಮಗ ಇದ್ದಾರೆ. ಇನ್ನು ಅವರನ್ನು ಪೂಜಾ ಗಾಂಧಿ ಮದುವೆಯಾಗಲು ಹೇಗೆ ಸಾಧ್ಯ…?
ಪೂಜಾ ಗಾಂಧಿ ಬಗ್ಗೆ ಈ ರೀತಿ ಗಾಸಿಪ್ ಹರಡಲು ಕಾರಣ ಗೂಗಲ್ನಿಂದ ಆಗಿರುವ ತಪ್ಪು. ಸನ್ನಿ ಡಿಯೋಲ್ ವೈಫ್ ಎಂದು ಗೂಗಲ್ನಲ್ಲಿ ಹುಡುಕಾಡಿದರೆ ಅವರ ಪತ್ನಿ ಹೆಸರು ಪೂಜಾ ಡಿಯೋಲ್ ಎಂದು ಕಾಣಸಿಗುತ್ತದೆ. ಆದರೆ ಅಲ್ಲಿ ಪೂಜಾ ಗಾಂಧಿ ಫೋಟೋ ಇರುವುದು ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ. handlewife.com ಎಂಬ ವೈಬ್ಸೈಟ್ ಕೂಡಾ ಸನ್ನಿಡಿಯೋಲ್ ಪತ್ನಿ ಪೂಜಾಗಾಂಧಿ ಎಂದು ವರದಿ ಮಾಡಿರುವುದಲ್ಲದೆ, ಆಕೆಯ ಬಗ್ಗೆ ಕೆಲವೊಂದು ಮಾಹಿತಿಗಳನ್ನು ನೀಡಿದೆ. ಸನ್ನಿ ಡಿಯೋಲ್ ಪತ್ನಿ ಹೆಸರು ಪೂಜಾ ಡಿಯೋಲ್ ಎಂಬುದು ಸತ್ಯ ಸಂಗತಿ. ಆಕೆಗೆ ಲಿಂಡಾ ಡಿಯೋಲ್ ಎಂಬ ಹೆಸರು ಕೂಡಾ ಇದೆ. ಆದರೆ ಪೂಜಾ ಡಿಯೋಲ್ ಫೋಟೋ ಬದಲಿಗೆ ಪೂಜಾ ಗಾಂಧಿ ಫೋಟೋ ಹಾಕಲಾಗಿದೆ. ಈ ರೀತಿ ಆಗಿರುವುದು ಇದೇ ಮೊದಲಲ್ಲ, ಇಂತದ್ದೇ ತಪ್ಪುಗಳು ಆಗ್ಗಾಗ್ಗೆ ನಡೆಯುತ್ತಿರುತ್ತವೆ.
ಇನ್ನು ಪೂಜಾಗಾಂಧಿ ಸಿನಿಮಾ ವಿಚಾರಕ್ಕೆ ಬರುವುದಾದರೆ ಬಹಳ ವರ್ಷಗಳ ನಂತರ ನಟನೆಗೆ ವಾಪಸಾಗಿರುವ ಪೂಜಾ ‘ಸಂಹಾರಿಣಿ’ ಎಂಬ ಚಿತ್ರದಲ್ಲಿ ನಟಿಸಿದ್ದು ಈ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಇನ್ನು ಸನ್ನಿ ಡಿಯೋಲ್ ಬಗ್ಗೆ ಹೇಳುವುದಾದರೆ ಕಳೆದ ವರ್ಷ ಪುತ್ರ ಕರಣ್ ಡಿಯೋಲ್ಗಾಗಿ ಸಿನಿಮಾವೊಂದನ್ನು ನಿರ್ದೇಶನ ಮಾಡಿದ್ದು ಬಿಟ್ಟರೆ ಅವರು ಯಾವುದೇ ಸಿನಿಮಾದಲ್ಲಿ ತೊಡಗಿಸಿಕೊಂಡಿಲ್ಲ. ‘ಪಲ್ ಪಲ್ ದಿಲ್ ಕೆ ಪಾಸ್’ ಎಂಬ ಈ ಚಿತ್ರ ಬಾಕ್ಸ್ ಆಫೀಸಿನಲ್ಲಿ ಸೋಲು ಕಂಡಿತ್ತು.
-ರಕ್ಷಿತ ಕೆ.ಆರ್. ಸಾಗರ