ಕಳೆದ ವರ್ಷ ಬಿಡುಗಡೆಯಾದ ಸಿನಿಮಾಗಳಲ್ಲಿ ದೊಡ್ಡ ಮಟ್ಟಿಗೆ ಸದ್ದು ಮಾಡಿದ್ದು ‘ಲವ್ ಮಾಕ್ಟೇಲ್’ ಹಾಗೂ ‘ದಿಯಾ’ ಸಿನಿಮಾಗಳು. ಲವ್ ಮಾಕ್ಟೇಲ್ ಜನವರಿ 31 ಹಾಗೂ ದಿಯಾ ಫೆಬ್ರವರಿ 7 ರಂದು ಬಿಡುಗಡೆಯಾಗಿತ್ತು. ಆರಂಭದಲ್ಲಿ ಈ ಸಿನಿಮಾಗಳಿಗೆ ಉತ್ತಮ ಪ್ರತಿಕ್ರಿಯೆ ದೊರೆಯದಿದ್ದರೂ ಒಟಿಟಿಯಲ್ಲಿ ಯಶಸ್ಸು ಗಳಿಸಿತು. ನಂತರ ಸಿನಿಮಾವನ್ನು ಥಿಯೇಟರ್ನಲ್ಲಿ ರೀ ರಿಲೀಸ್ ಮಾಡಲಾಯ್ತು. ಕ್ರಮೇಣ ಈ ಚಿತ್ರಗಳು ಸೂಪರ್ ಹಿಟ್ ಎನಿಸಿದವು. ಅದರಲ್ಲೂ ‘ದಿಯಾ’ ಚಿತ್ರದ ನಾಯಕಿಗೆ ಬಹಳಷ್ಟು ಮಂದಿ ಫಿದಾ ಆದರು. ಖುಷಿ ರವಿ ಆ್ಯಕ್ಟಿಂಗ್ಗಿಂತ ಅವರ ಮುದ್ದು ಮುಖಕ್ಕೆ ಎಲ್ಲರೂ ಮಾರುಹೋದರು. ಆದರೆ ಆಕೆಗೆ ಈಗಾಗಲೇ ಮದುವೆಯಾಗಿ ಒಂದು ಮಗು ಇದೆ ಎಂದು ತಿಳಿದಾಗ ಎಷ್ಟೋ ಹುಡುಗರಿಗೆ ಬೇಸರವಾಗಿದ್ದಂತೂ ನಿಜ. ಖುಷಿಗೆ ಚಿಕ್ಕಂದಿನಿಂದ ಆ್ಯಕ್ಟಿಂಗ್ ಎಂದರೆ ಇಷ್ಟ. ಅನೇಕ ನಾಟಕ ಹಾಗೂ ಕಿರುಚಿತ್ರಗಳಲ್ಲಿ ನಟಿಸಿದ್ದ ಖುಷಿ ರವಿ ‘ದಿ ಗ್ರೇಟ್ ಸೋಡಾ ಬುಡ್ಡಿ’ ಎಂಬ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಬಂದರು. ಆದರೆ ಈ ಚಿತ್ರದಿಂದ ಖುಷಿಯನ್ನು ಯಾರೂ ಗುರುತಿಸಲಿಲ್ಲ. ‘ದಿಯಾ’ ಸಿನಿಮಾ ಬಿಡುಗಡೆಯಾಗಿದ್ದೇ ಆಗಿದ್ದು ಖುಷಿ ಸಖತ್ ಫೇಮಸ್ ಆಗಿಬಿಟ್ರು.
ಈಗ ಖುಷಿ ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಉದ್ಭವವಾಗುವುದು ಸಹಜ. ‘ದಿಯಾ’ ಸಿನಿಮಾ ನಂತರ ಖುಷಿಗೆ ಸಾಲು ಸಾಲು ಅವಕಾಶಗಳು ಹುಡುಕಿ ಬರುತ್ತಿವೆ. ಆದರೆ ಬಂದ ಪಾತ್ರಗಳನ್ನೆಲ್ಲಾ ಒಪ್ಪಿಕೊಳ್ಳದೆ ಮನೆ ಮಂದಿಯವರೊಂದಿಗೆ ಚರ್ಚಿಸಿ ಸೂಕ್ತ ಕಥೆಯನ್ನು ಆಯ್ಕೆ ಮಾಡುತ್ತಿದ್ಧಾರೆ. ಇದೀಗ ಖುಷಿ ಕೈಯ್ಯಲ್ಲಿ ಮೂರು ಸಿನಿಮಾಗಳಿವೆ. ಸ್ಪೂಕಿ ಕಾಲೇಜ್, ಮಾರ್ಗ ಹಾಗೂ ನಕ್ಷೆ ಇದರಲ್ಲಿ ಸ್ಪೂಕಿ ಕಾಲೇಜ್, ಹಾರರ್-ಕಾಮಿಡಿ ಸಿನಿಮಾವಾಗಿದ್ದು ಭರತ್ ನಿರ್ದೇಶಿಸುತ್ತಿದ್ದಾರೆ. ಖುಷಿ ಜೊತೆ ವಿವೇಕ್ ಸಿಂಹ ನಟಿಸುತ್ತಿದ್ದು ಚಿತ್ರದ ಹಾಡುಗಳಿಗೆ ಅಜನೀಶ್ ಲೋಕನಾಥ್ ಸಂಗೀತ ನೀಡುತ್ತಿದ್ಧಾರೆ. ಮಾರ್ಗ, ಥ್ರಿಲ್ಲರ್ ಸಿನಿಮಾವಾಗಿದ್ದು ಚಿತ್ರವನ್ನು ಮೋಹನ್ ಎಂಬುವವರು ಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಖುಷಿ ಜೊತೆ ಕಾರ್ತಿಕ್ ಜಯರಾಮ್, ಚೇತನ್ ಕುಮಾರ್ ಹಾಗೂ ಇನ್ನಿತರರು ನಟಿಸುತ್ತಿದ್ದಾರೆ. ನಕ್ಷೆ ಚಿತ್ರಕ್ಕೆ ಮಧು ಎಂಬುವವರು ಆ್ಯಕ್ಷನ್ – ಕಟ್ ಹೇಳುತ್ತಿದ್ದು ಈ ಚಿತ್ರದಲ್ಲಿ ಖುಷಿ ಜೊತೆಗೆ ಚಿರಾಗ್, ಅರ್ಚನಾ ಜೋಯಿಸ್, ಸುಮನ್ ನಗರ್ಕರ್, ಪ್ರಮೋದ್ ಶೆಟ್ಟಿ ಹಾಗೂ ಇನ್ನಿತರರು ನಟಿಸಿದ್ದಾರೆ.
ಸಿನಿಮಾಗಳನ್ನು ಹೊರತುಪಡಿಸಿ ಖುಷಿ ಒಂದು ಕಿರುಚಿತ್ರವನ್ನು ಕೂಡಾ ಒಪ್ಪಿಕೊಂಡಿದ್ದಾರಂತೆ. ಇದೊಂದು ಸೈನ್ಸ್ ಫಿಕ್ಷನ್ ಝೋನರ್ ಕಿರುಚಿತ್ರವಾಗಿದ್ದು ನಾಯಕಿಯು 2050 ರ ಕಾಲಘಟ್ಟದಿಂದ 1980 ರ ಕಾಲಘಟ್ಟಕ್ಕೆ ಪ್ರಯಾಣಿಸುವ ಕಥೆಯನ್ನೊಂದಿದೆ ಎನ್ನಲಾಗಿದೆ. ”ಟೈಂ ಟ್ರಾವೆಲ್ ಪರಿಕಲ್ಪನೆಯಲ್ಲಿ ತಯಾರಾಗುತ್ತಿರುವ ಈ ಕಿರುಚಿತ್ರದ ಕಥೆ ಹಾಗೂ ನಾನು ಮಾಡಬೇಕಿರುವ ಪಾತ್ರ ನನಗೆ ಬಹಳ ಇಷ್ಟವಾಯ್ತು, ಕಥೆ ಕೇಳಿದೊಡನೆ ನಾನು ಇದರಲ್ಲಿ ನಟಿಸಬಹುದು ಎನ್ನಿಸಿತು. ಈ ಕಿರುಚಿತ್ರದಲ್ಲಿ ನನ್ನ ಕಾಸ್ಟ್ಯೂಮ್ ಕೂಡಾ ಬಹಳ ಚೆನ್ನಾಗಿದೆ. ರಾಣಿ ಎಲಿಜಬೆಜ್ ಕಾಲಘಟ್ಟದಲ್ಲಿ ಎಲ್ಲರೂ ಧರಿಸುತ್ತಿದ್ದಂತೆ ಗೌನ್, ತಲೆ ಮೇಲೆ ದೊಡ್ಡ ಹ್ಯಾಟ್ ಧರಿಸಲಿದ್ದೇನೆ. ನನ್ನ ಲುಕ್ ಕೂಡಾ ರಾಣಿಯಂತಿದೆ. ಒಮ್ಮೆ ಲಾಕ್ಡೌನ್ ಮುಗಿದು ಚಿತ್ರಿಕರಣಕ್ಕೆ ಅನುಮತಿ ನೀಡುತ್ತಿದ್ದಂತೆ ಈ ಕಿರುಚಿತ್ರದ ಕೆಲಸಗಳು ಆರಂಭವಾಗಲಿವೆ” ಎಂದು ಖುಷಿ ಹೇಳಿಕೊಂಡಿದ್ದಾರೆ.
ಖುಷಿಯ ಈ ಸಿನಿಜರ್ನಿಗೆ ಪತಿ ಹಾಗೂ ಮನೆಯವರ ಸಂಪೂರ್ಣ ಸಹಕಾರವಿದೆ. ಪತಿ ರಾಕೇಶ್ ಸ್ವಂತ ಬ್ಯುಸ್ನೆಸ್ ಮಾಡುತ್ತಿದ್ದಾರೆ. ಖುಷಿ ಹಾಗೂ ರಾಕೇಶ್ ಅವರದ್ದು ಲವ್ ಮ್ಯಾರೇಜ್. ಈ ದಂಪತಿಗೆ ತನಿಷಾ ಎಂಬ ಹೆಣ್ಣು ಮಗುವಿದೆ. ಆ್ಯಕ್ಟಿಂಗ್ ಹೊರತುಪಡಿಸಿ ಖುಷಿಗೆ ಡ್ಯಾನ್ಸ್ ಹಾಗೂ ಸಂಗೀತದಲ್ಲಿ ಬಹಳ ಆಸಕ್ತಿ ಇದೆ. ಖುಷಿ ಮುಂದಿನ ಸಿನಿಮಾಗಳು ಕೂಡಾ ‘ದಿಯಾ’ ಚಿತ್ರದಂತೆ ಯಶಸ್ಸು ಗಳಿಸಲಿ ಎಂದು ಹಾರೈಸೋಣ.
-ರಕ್ಷಿತ ಕೆ.ಆರ್. ಸಾಗರ