ಚಿತ್ರರಂಗದಲ್ಲಿ ಅನೇಕ ಮಂದಿ ನಟನಾಗಿ, ನಿರ್ದೇಶಕ, ನಿರ್ಮಾಪಕನಾಗಿ ಕೂಡಾ ಗುರುತಿಸಿಕೊಂಡಿದ್ದಾರೆ. ಉಪೇಂದ್ರ, ರವಿಚಂದ್ರನ್, ಸುದೀಪ್, ರಮೇಶ್ ಅರವಿಂದ್, ರಿಷಭ್ ಶೆಟ್ಟಿ ಹಾಗೂ ಇನ್ನಿತರರು ಸಿನಿಮಾದಲ್ಲಿ ಆ್ಯಕ್ಟಿಂಗ್ ಜೊತೆಗೆ ನಿರ್ದೇಶನದಲ್ಲೂ ತೊಡಗಿಸಿಕೊಂಡಿದ್ದಾರೆ. ಕೆಲವೊಂದು ಸಿನಿಮಾಗಳ ನಿರ್ಮಾಣ ಕೂಡಾ ಮಾಡಿದ್ದಾರೆ. ದುನಿಯಾ ವಿಜಯ್ ಕೂಡಾ ‘ಸಲಗ’ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ಧಾರೆ. ಈ ಸಿನಿಮಾ ಬಿಡುಗಡೆ ನಂತರ ಮತ್ತೊಂದು ಸಿನಿಮಾ ಮಾಡಲು ಈಗಾಗಲೇ ಸಕಲ ತಯಾರಿ ಮಾಡಿಕೊಂಡಿದ್ದಾರೆ. ಇದೀಗ ಬಹುಭಾಷಾ ನಟ ಕಿಶೋರ್ ಕೂಡಾ ಸಿನಿಮಾವೊಂದನ್ನು ನಿರ್ದೇಶನ ಮಾಡಲು ಮುಂದಾಗಿದ್ದಾರೆ. ನಾಯಕನಾಗಿ, ಖಳನಾಯಕನಾಗಿ ಕನ್ನಡ, ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ಗುರುತಿಸಿಕೊಂಡಿರುವ ಕಿಶೋರ್ ಮೊದಲ ಬಾರಿಗೆ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಅಂದಹಾಗೆ ಕಿಶೋರ್ ತಮ್ಮದೇ ವಿಸ್ತಾರ ಬ್ಯಾನರ್ ಅಡಿ ಮೂಲಕ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರಕ್ಕೆ ಕಿಶೋರ್ ಅವರೇ ಕಥೆ ಬರೆಯುತ್ತಿದ್ದು ಆದಷ್ಟು ಬೇಗ ಪ್ರೀ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿ ಸಿನಿಮಾ ಚಿತ್ರೀಕರಣ ಆರಂಭಿಸಲಿದ್ದಾರಂತೆ. ಕನ್ನಡ ಹಾಗೂ ತಮಿಳಿನಲ್ಲಿ ತಯಾರಾಗಲಿರುವ ಈ ಸಿನಿಮಾಗೆ ಕಿಶೋರ್ ‘ಅಹಾನಿ’ ಎಂದು ಹೆಸರಿಟ್ಟಿದ್ದಾರೆ ಎನ್ನಲಾಗಿದೆ. ಇದೊಂದು ಥ್ರಿಲ್ಲರ್ ಸಿನಿಮಾವಾಗಿದ್ದು ಚಿತ್ರದಲ್ಲಿ ಸಂಪೂರ್ಣ ಹೊಸಬರಿಗೆ ಅವಕಾಶ ನೀಡಲಾಗುವುದು ಎಂದು ಕಿಶೋರ್ ಹೇಳಿದ್ದಾರೆ.
ಚನ್ನಪಟ್ಟಣದವರಾದ ಕಿಶೋರ್, ಕಾಲೇಜು ವಿದ್ಯಾಭ್ಯಾಸದೊಂದಿಗೆ ರಂಗಭೂಮಿಯಲ್ಲೂ ತೊಡಗಿಸಿಕೊಂಡಿದ್ದರು. ಕಾಲೇಜಿನಲ್ಲಿ ಲೆಕ್ಚರರ್ ಆಗಿ ಕೆಲಸ ಆರಂಭಿಸಿದ ಕಿಶೋರ್ ನಂತರ ಸಹಾಯಕ ಫ್ಯಾಷನ್ ಡಿಸೈನರ್ ಆಗಿ ಕೆಲಸ ಮಾಡಿದರು. ಇದಾದ ನಂತರ ವಾರ್ತಾ ಪತ್ರಿಕೆಗಳ ಸೇಲ್ಸ್ಮ್ಯಾನ್ ಆಗಿ ಕೂಡಾ ಕೆಲಸ ಮಾಡಿದ ಕಿಶೋರ್, 2004 ರಲ್ಲಿ ಬಿಡುಗಡೆಯಾದ ‘ಕಂಠಿ’ ಚಿತ್ರದ ಮೂಲಕ ಆ್ಯಕ್ಟಿಂಗ್ ಕರಿಯರ್ ಆರಂಭಿಸಿದರು. ಮೊದಲ ಚಿತ್ರದಲ್ಲೇ ಕಿಶೋರ್ ಉತ್ತಮ ಪೋಷಕ ನಟ ಪ್ರಶಸ್ತಿ ಪಡೆದರು. ಡೆಡ್ಲಿ ಸೋಮ, ಹ್ಯಾಪಿ, ಕಲ್ಲರಳಿ ಹೂವಾಗಿ, ಪೊಲ್ಲಧವನ್, ಗೆಳೆಯ, ಗೂಳಿ, ಬಗೀರಥ, ತಿರುವಂಬಡಿ ತಂಬನ್, ಜಟ್ಟ, ಯಾರಿವನ್, ಉದ್ಘರ್ಷ , ವೆಂಕಿಮಾಮ ಸೇರಿ ಸುಮಾರು 85 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಿಶೋರ್ ನಟಿಸಿದ್ದಾರೆ.
‘ದಿ ಫ್ಯಾಮಿಲಿ ಮ್ಯಾನ್ -1’ ಸೀರೀಸ್ನಲ್ಲಿ ಕಿಶೋರ್ ಇನ್ಸ್ಪೆಕ್ಟರ್ ಪಾಷಾ ಆಗಿ ನಟಿಸಿದ್ದರು. ಸದ್ಯಕ್ಕೆ ತೆಲುಗಿನ ‘ಆಚಾರ್ಯ’ ಸಿನಿಮಾದೊಂದಿಗೆ 2 ತಮಿಳು ಸಿನಿಮಾ ಹಾಗೂ ಶಿ-2 ವೆಬ್ ಸೀರೀಸ್ನಲ್ಲಿ ಕಿಶೋರ್ ಬ್ಯುಸಿಯಾಗಿದ್ದಾರೆ. ಕಿಶೋರ್ ಚೊಚ್ಚಲ ನಿರ್ದೇಶನಕ್ಕೆ ಅಭಿಮಾನಿಗಳು ಶುಭ ಕೋರಿದ್ಧಾರೆ. ಇಷ್ಟು ದಿನ ನಟನಾಗಿ ರಂಜಿಸುತ್ತಿದ್ದ ಕಿಶೋರ್, ನಿರ್ದೇಶನದ ಮೂಲಕ ಜನರನ್ನು ಹೇಗೆ ಸೆಳೆಯುತ್ತಾರೆ ಎಂಬ ಕುತೂಹಲ ಸಿನಿಪ್ರಿಯರಿಗೆ ಕಾಡುತ್ತಿದೆ.
-ರಕ್ಷಿತ ಕೆ.ಆರ್. ಸಾಗರ