ಕಷ್ಟ ಎಂದು ಮನೆ ಮುಂದೆ ಬಂದವರಿಗಾಗಿ ಕಲ್ಲಿಗೆ ದುಡ್ಡು ಸುತ್ತಿ ಬಾಲ್ಕನಿಯಿಂದ ಎಸೆಯುತ್ತಿದ್ದರಂತೆ ಆ ಖ್ಯಾತ ನಟ…!

ದೇವರ ದಯೆ, ಅದೃಷ್ಟ, ಶ್ರಮ ನಮ್ಮೊಂದಿಗೆ ಇದ್ದರೆ ಪ್ರಪಂಚದಲ್ಲಿ ನಮ್ಮಷ್ಟು ಪರಮಸುಖಿಗಳು ಮತ್ತೊಬ್ಬರು ಇರುವುದಿಲ್ಲ. ಆದರೆ ಎಷ್ಟು ಸಂಪಾದಿಸಿದರೂ, ಎಷ್ಟು ಒಡವೆ ಧರಿಸಿದರೂ ಹೋಗುವಾಗ ಏನೂ ಕೊಂಡೊಯ್ಯಲು ಸಾಧ್ಯವಿಲ್ಲ. ಎಲ್ಲರೂ ಹೋಗುವುದು ಅದೇ ಭೂಮಿಗೆ. “ಜೀವನದಲ್ಲಿ ಪ್ರತಿ ಮನುಷ್ಯನೂ ಒಮ್ಮೆ ಬಡತನ ಅನುಭವಿಸಬೇಕು ಆಗ ಮಾತ್ರ ಆತ ದೊಡ್ಡ ಪಾಠ ಕಲಿಯುತ್ತಾನೆ” ಎಂದು ಇತ್ತೀಚೆಗೆ ತೆಲುಗಿನ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಹೇಳಿದ್ದರು. ಅದೇ ರೀತಿ ಕಷ್ಟ ಅರಿತವನೇ ಮತ್ತೊಬ್ಬರ ಕಷ್ಟವನ್ನು ಅರಿಯಲು ಸಾಧ್ಯ. ಕೆಲವರು ಹತ್ತಿ ಬಂದ ಏಣಿಯನ್ನು ಮರೆತರೆ ಮತ್ತೆ ಕೆಲವರು ದಾನಶೂರ ಕರ್ಣನನ್ನು ನೆನಪಿಸುವಂತೆ ಕಷ್ಟ ಎಂದು ಬಂದವರಿಗೆ ಬರಿಗೈಲಿ ವಾಪಸ್ ಕಳಿಸದೆ ಸಹಾಯ ಮಾಡುತ್ತಾರೆ. ಸಿನಿಮಾ ನಟರಲ್ಲಿ ಬಹಳಷ್ಟು ನಟರು ಟ್ರಸ್ಟ್ ಸ್ಥಾಪಿಸಿ ಆ ಮೂಲಕ ಬಡವರಿಗೆ ನೆರವಾಗುತ್ತಿದ್ದಾರೆ. ಕೆಲವರು ಪ್ರಚಾರಕ್ಕಾಗಿ ಸಹಾಯ ಮಾಡಿದರೆ, ಮನಸ್ಫೂರ್ತಿ ಬಡವರ ಕಷ್ಟಕ್ಕೆ ನೆರವಾಗುವವರು ಬಹಳ ಅಪರೂಪ. ಅಂತವರಲ್ಲಿ ನಟ ಶ್ರೀಹರಿ ಕೂಡಾ ಒಬ್ಬರು.

 

ತೆಲುಗು ನಟ ಶ್ರೀಹರಿ ಇಂದು ಇಲ್ಲವಾದರೂ ಅವರಿಂದ ಸಹಾಯ ಪಡೆದವರು ಇಂದಿಗೂ ಅವರನ್ನು ಪ್ರತಿದಿನ ನೆನೆಯುತ್ತಿದ್ಧಾರೆ. ಎಷ್ಟೋ ಮನೆಗಳಲ್ಲಿ ಅವರ ಫೋಟೋ ಇಟ್ಟು ಪೂಜಿಸುತ್ತಿದ್ಧಾರೆ ಎನ್ನಲಾಗಿದೆ. 80-90 ರ ದಶಕದಲ್ಲಿ ಚಿತ್ರರಂಗದ ಮಾದಕ ಡ್ಯಾನ್ಸರ್ ಎಂದು ಹೆಸರಾಗಿದ್ದ ಡಿಸ್ಕೋ ಶಾಂತಿ ಪತಿಯೇ ಈ ಶ್ರೀಹರಿ. ತೆಲುಗಿನ ಕ್ಯಾಷ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪೋಷಕ ನಟ ಪೃಥ್ವಿರಾಜ್, ಶ್ರೀಹರಿ ಬಗ್ಗೆ ಮಾತನಾಡಿದ್ಧಾರೆ. “ಹೈದರಾಬಾದ್​​ನ​​ ಜೂಬ್ಲಿಹಿಲ್ಸ್​​​​​​ ನಲ್ಲಿ ಶ್ರೀಹರಿ ವಾಸವಿದ್ದರು. ಯಾರಾದರೂ ಅವರ ಮನೆ ಮುಂದೆ ಬಂದು ನಿಂತು ಕಷ್ಟ ಎಂದರೆ ಅದು ಯಾರು..? ಏನು..? ಎಂದು ಕೇಳದೆ ಕಲ್ಲಿಗೆ ದುಡ್ಡು ಕಟ್ಟಿ ಬಾಲ್ಕನಿ ಮೇಲಿಂದ ಎಸೆಯುತ್ತಿದ್ದರು. ಅದೇನೆಂದು ತೆಗೆದು ನೋಡಿದವರು ಆಶ್ಚರ್ಯಗೊಂಡು ಶ್ರೀಹರಿಗೆ ಸಂತೋಷದಿಂದ ನಮಸ್ಕರಿಸಿ ಹೋಗುತ್ತಿದ್ದರು. ಅವರು ಮಾಡಿರುವ ದಾನ ಧರ್ಮಗಳಿಗೆ ಲೆಕ್ಕವೇ ಇಲ್ಲ” ಎಂದು ಶ್ರೀಹರಿಯನ್ನು ನೆನಪಿಸಿಕೊಂಡಿದ್ದಾರೆ.

ಕಾರ್ಯಕ್ರಮದಲ್ಲಿ ಪೃಥ್ವಿರಾಜ್, ಯುವನಟ ಉದಯ್ ಕಿರಣ್ ಬಗ್ಗೆ ಕೂಡಾ ಮಾತನಾಡಿದ್ದಾರೆ. “ಉದಯ್ ಕಿರಣ್ ಒಳ್ಳೆ ಪ್ರತಿಭಾವಂತ ನಟ, ಲವ್ವರ್ ಬಾಯ್​​ ಆಗಿ ಒಳ್ಳೆ ಇಮೇಜ್ ಇತ್ತು. ಆದರೆ ಎಲ್ಲೋ ಏನೋ ತಪ್ಪಾಗಿದೆ. ಆತ ದುಡುಕಿನ ನಿರ್ಧಾರ ಮಾಡಬಾರದಿತ್ತು” ಎಂದು ಬೇಸರ ವ್ಯಕ್ತಪಡಿಸಿದ್ದಾರೆ. “ಇಂದು ಶ್ರೀಹರಿ, ಉದಯ್ ಕಿರಣ್ ಇಬ್ಬರೂ ನಮ್ಮೊಂದಿಗೆ ಇಲ್ಲ. ಶ್ರೀಹರಿ ಇಂದು ನಮ್ಮೊಂದಿಗೆ ಇದ್ದಿದ್ದರೆ ಈ ಕೊರೊನಾ ಸಮಯದಲ್ಲಿ ಎಲ್ಲರಿಗಿಂತ ಮುಂದೆ ನಿಂತು ಜನರ ಸೇವೆ ಮಾಡುತ್ತಿದ್ದರು. ಇನ್ನು ಉದಯ್ ಕಿರಣ್, ಟಾಲಿವುಡ್​​​ನ ಮತ್ತೊಬ್ಬ ಸುಶಾಂತ್ ಸಿಂಗ್ ರಜಪೂತ್” ಎಂದು ನೆಟಿಜನ್ಸ್​ ಕಮೆಂಟ್ ಮಾಡಿದ್ದಾರೆ.

ಸುಮಾ ಕನಕಾಲ ನಡೆಸಿಕೊಡುವ ಕ್ಯಾಷ್ ಕಾರ್ಯಕ್ರಮದಲ್ಲಿ ಪೃಥ್ವಿರಾಜ್ ಭಾಗವಹಿಸಿರುವ ಎಪಿಸೋಡ್ ಇದೇ ಶನಿವಾರ ರಾತ್ರಿ 9.30ಕ್ಕೆ ಈಟಿವಿ ತೆಲುಗು ವಾಹಿನಿಯಲ್ಲಿ ಪ್ರಸಾರವಾಗಲಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಅತಿಥಿಗಳಿಗಿಂತ ನಿರೂಪಕಿ ಸುಮಾ ಅವರ ನಿರೂಪಣೆಯನ್ನು ನೋಡಲೆಂದೇ ಎಷ್ಟೋ ಜನರು ಈ ಕಾರ್ಯಕ್ರಮ ನೋಡುತ್ತಾರೆ. ತೆಲುಗಿನ ಖ್ಯಾತ ಕಾರ್ಯಕ್ರಮಗಳಲ್ಲಿ ಕ್ಯಾಷ್ ಕೂಡಾ ಒಂದು.

-ರಕ್ಷಿತ ಕೆ.ಆರ್. ಸಾಗರ

Be the first to comment

Leave a Reply

Your email address will not be published.


*