ದರ್ಶನ್​​ಗೆ ‘ಗೋಲ್ಡ್​​​ ರಿಂಗ್’ ತೊಡಿಸಲಿದ್ದಾರಾ ನಿರ್ದೇಶಕ ಪ್ರೇಮ್​​​​….ಈ ಬಗ್ಗೆ ಕ್ರೇಜಿ ಕ್ವೀನ್ ಹೇಳಿದ್ದೇನು…?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾಗಳೆಂದರೆ ಅಭಿಮಾನಿಗಳು ಚಾತಕ ಪಕ್ಷಿಗಳಂತೆ ಕಾಯುತ್ತಿರುತ್ತಾರೆ. 2019 ರ ‘ಒಡೆಯ’ ನಂತರ ದರ್ಶನ್ ಘೋಷಿಸಿದ್ದ ‘ರಾಬರ್ಟ್’ ಸಿನಿಮಾ ನೋಡಲು ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಕೊರೊನಾ ಕಾರಣದಿಂದ ಸಿನಿಮಾ ತಡವಾಗುತ್ತಲೇ ಬಂತು. ಕೊನೆಗೂ ಈ ವರ್ಷ ಮಾರ್ಚ್ 11 ರಂದು ಶಿವರಾತ್ರಿ ಹಬ್ಬದಂದು ರಾಬರ್ಟ್ ಬಿಡುಗಡೆಯಾಯ್ತು. ಕನ್ನಡ, ತೆಲುಗಿನಲ್ಲಿ ಬಿಡುಗಡೆಯಾದ ಈ ಸಿನಿಮಾ ಬಾಕ್ಸ್​ ಆಫೀಸ್ ಲೂಟಿ ಮಾಡಿ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಈ ಚಿತ್ರದ ಕಣ್ಣು ಹೊಡೆಯಾಕ….ಹಾಡು ಎರಡೂ ಭಾಷೆಗಳಲ್ಲೂ ಹಿಟ್ ಆಯ್ತು. ಇನ್ನು ರಾಬರ್ಟ್ ಚಿತ್ರದ ನಂತರ ಮುಂದೇನು ಎಂಬ ಪ್ರಶ್ನೆ ಇದೀಗ ಅಭಿಮಾನಿಗಳನ್ನು ಕಾಡುತ್ತಿದೆ. ‘ರಾಜವೀರ ಮದಕರಿ ನಾಯಕ’ ಚಿತ್ರಕ್ಕೆ ಕಳೆದ ವರ್ಷ ಸ್ವಲ್ಪ ಭಾಗದ ಚಿತ್ರೀಕರಣ ಆಗಿತ್ತಾದರೂ ಚಿತ್ರರಂಗ ಲಾಸ್​​​ನಲ್ಲಿರುವಾಗ ಅಷ್ಟು ದೊಡ್ಡ ಬಜೆಟ್ ಸಿನಿಮಾವನ್ನು ಮುಂದುವರೆಸಲು ಸಾಧ್ಯವಿಲ್ಲ ಎಂದು ಚಿತ್ರತಂಡ ನಿರ್ಧರಿಸಿದೆ.

‘ರಾಜವೀರ ಮದಕರಿ ನಾಯಕ’ ಚಿತ್ರದ ಬದಲಿಗೆ ರಾಕ್​​ಲೈನ್ ವೆಂಕಟೇಶ್ ಜೊತೆ ದರ್ಶನ್ ಬೇರೆ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ದರ್ಶನ್ ತಮ್ಮ ಮುಂದಿನ ಸಿನಿಮಾ ಬಗ್ಗೆ ಇದುವರೆಗೂ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಆದರೆ ಇತ್ತೀಚೆಗೆ ನಿರ್ದೇಶಕ ಪ್ರೇಮ್ ಟ್ವಿಟ್ಟರ್ ಅಕೌಂಟ್​​​ನಲ್ಲಿ ‘ದರ್ಶನ್ ಮುಂದಿನ ಚಿತ್ರಕ್ಕೆ ಗೋಲ್ಡ್ ರಿಂಗ್ ಎಂದು ಹೆಸರಿಡಲಾಗಿದ್ದು ಈ ಚಿತ್ರವನ್ನು ಪ್ರೇಮ್ ನಿರ್ದೇಶಿಸುತ್ತಿದ್ದಾರೆ’ ಎಂಬ ಪೋಸ್ಟ್​ ಸುದ್ದಿಯಾಗಿತ್ತು. ಈ ಟ್ವೀಟ್ ನೋಡಿ ಅಭಿಮಾನಿಗಳು ಬಹಳ ಸಂತೋಷ ವ್ಯಕ್ತಪಡಿಸಿದ್ದರು. ಆದರೆ ಇದು ಸುಳ್ಳುಸುದ್ದಿ ಎಂದು ಸ್ವತ: ಪ್ರೇಮ್ ಮಡದಿ ರಕ್ಷಿತ ಸ್ಪಷ್ಟಪಡಿಸಿದ್ದಾರೆ. ಈ ವಿಚಾರ ಕೇಳಿ ಅಭಿಮಾನಿಗಳಿಗೆ ಬೇಸರವಾಗಿರುವುದಂತೂ ನಿಜ.

”ಪ್ರೇಮ್, ದರ್ಶನ್ ಮುಂದಿನ ಸಿನಿಮಾ ನಿರ್ದೇಶಿಸುತ್ತಿದ್ದಾರೆ ಎಂಬ ಮಾತು ನಿಜವಲ್ಲ. ಅಸಲಿಗೆ ಅದು ಪ್ರೇಮ್ ಅಕೌಂಟ್ ಅಲ್ಲವೇ ಅಲ್ಲ. ಆದರೂ ಆದಷ್ಟು ಬೇಗ ಈ ಟ್ವೀಟ್​​ನಲ್ಲಿರುವಂತೆ ದರ್ಶನ್ ಹಾಗೂ ಪ್ರೇಮ್ ಒಟ್ಟಿಗೆ ಸಿನಿಮಾ ಮಾಡುವಂತಾಗಲಿ ಎಂದು ನಾನು ಬಯಸುತ್ತೇನೆ” ಎಂದು ರಕ್ಷಿತ ಹೇಳಿದ್ದಾರೆ. ಕೆಲವು ದಿನಗಳ ಹಿಂದೆ ಇದೇ ರೀತಿ ಕೆಲವು ಕಿಡಿಗೇಡಿಗಳು ಮಾಡಿದ್ದ ಪೋಸ್ಟ್ ಬಹಳ ವೈರಲ್ ಆಗಿತ್ತು. ಈ ಟ್ವೀಟ್​​​ನಲ್ಲಿ, ಸುದೀಪ್ ಹಾಗೂ ಪ್ರೇಮ್​​​​​​​​​​​​​​​ ಒಟ್ಟಿಗೆ ಇರುವ ಫೊಟೋವಿತ್ತು. ‘ಇಡೀ ಭಾರತ ಚಿತ್ರರಂಗದಲ್ಲೇ ಯಾರೂ ಮಾಡಿರದ ಸಿನಿಮಾವನ್ನು ನಾನು ಮಾಡುತ್ತೇನೆ, ದಯವಿಟ್ಟು ನಿಮ್ಮ ಪ್ರೀತಿ ನಮ್ಮ ಮೇಲೆ ಸದಾ ಇರಲಿ ‘ ಎಂದು ಪ್ರೇಮ್ ಅವರೇ ಹೇಳಿರುವಂತೆ ಪೋಸ್ಟ್ ಮಾಡಲಾಗಿತ್ತು. ಇದನ್ನು ನೋಡಿ ಕೆಲವರು ಸಂತೋಷಪಟ್ಟರೆ ಮತ್ತೆ ಕೆಲವರು ಮುಸಿ ಮುಸಿ ನಗಾಡಿದ್ದರು. ಆದರೆ ನಂತರ, ಇದು ಪ್ರೇಮ್ ಅಸಲಿ ಟ್ವಿಟ್ಟರ್ ಖಾತೆಯಲ್ಲ ಎಂಬ ನಿಜಾಂಶ ಬೆಳಕಿಗೆ ಬಂತು.

ಸದ್ಯಕ್ಕೆ ಪ್ರೇಮ್​, ರಕ್ಷಿತ ಸಹೋದರ ರಾಣಾ ಜೊತೆ ‘ಏಕ್ ಲವ್ ಯಾ ‘ ಚಿತ್ರದಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾ ಮೂಲಕ ಕ್ರೇಜಿ ಕ್ವೀನ್ ನಿರ್ಮಾಪಕಿಯಾಗಿ ಕೂಡಾ ಗುರುತಿಸಿಕೊಂಡಿದ್ದಾರೆ. ಇನ್ನು ದರ್ಶನ್, ಮೈಸೂರಿನ ತಮ್ಮ ಫಾರ್ಮ್​ಹೌಸ್​​​ನಲ್ಲಿ ಉಳಿದುಕೊಂಡಿದ್ದಾರೆ. ಇತ್ತೀಚೆಗೆ ವಿಶ್ವ ಪರಿಸರ ದಿನದಂದು ಮೈಸೂರು ಮೃಗಾಲಯಕ್ಕೆ ತೆರಳಿ ದರ್ಶನ್ ಗಿಡ ನೆಟ್ಟು ಬಂದಿದ್ದರು. ಅಲ್ಲದೆ, ”ಒಂದೂವರೆ ವರ್ಷದಿಂದ ರಾಜ್ಯದ ಮೃಗಾಲಯದ ಪ್ರಾಣಿಗಳು ಸೂಕ್ತ ನಿರ್ವಹಣೆ ಇಲ್ಲದೆ ಸೊರಗುತ್ತಿವೆ. ಸಾಧ್ಯವಾದರೆ ಪ್ರಾಣಿಗಳನ್ನು ದತ್ತು ಪಡೆಯಿರಿ” ಎಂದು ಮನವಿ ಮಾಡಿದ್ದರು. ದರ್ಶನ್ ಮನವಿಗೆ ಸ್ಪಂದಿಸಿದ ಅಭಿಮಾನಿಗಳು ಹುಲಿ, ಸಿಂಹ, ಲವ್​ ಬರ್ಡ್ ಸೇರಿದಂತೆ ಇನ್ನಿತರ ಪ್ರಾಣಿ-ಪಕ್ಷಿಗಳನ್ನು ದತ್ತು ಪಡೆದಿದ್ದಾರೆ. ಪ್ರಾಣಿಗಳನ್ನು ದತ್ತು ಪಡೆದವರ ಪ್ರಮಾಣ ಪತ್ರವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ದರ್ಶನ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಅಭಿಮಾನಿಗಳ ಆಸೆಯಂತೆ ದರ್ಶನ್ ಕೂಡಾ ಆದಷ್ಟು ಬೇಗ ತಮ್ಮ ಮುಂದಿನ ಸಿನಿಮಾವನ್ನು ಘೋಷಿಸುವಂತಾಗಲಿ.

-ರಕ್ಷಿತ ಕೆ.ಆರ್. ಸಾಗರ

Be the first to comment

Leave a Reply

Your email address will not be published.


*