3 ತಿಂಗಳ ತನ್ನ ಮುದ್ದಾದ ಕಂದನನ್ನು ಅಭಿಮಾನಿಗಳಿಗೆ ಹೆಸರಿನೊಂದಿಗೆ ಪರಿಚಯಿಸಿದ ಸ್ಯಾಂಡಲ್​​ವುಡ್ ನಟಿ

ಸೆಲಬ್ರಿಟಿಗಳು ಹಾಗೂ ಅವರ ಫ್ಯಾಮಿಲಿ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳಂತೂ ಯಾವಾಗಲೂ ಕಾಯುತ್ತಿರುತ್ತಾರೆ. ಈ ಕಾರಣಕ್ಕಾಗೇ ಕೆಲವು ಪಾಪರಾಜಿಗಳು ಸೆಲಬ್ರಿಟಿಗಳನ್ನು ಬೆಂಬಿಡದೆ ಕಾಡುತ್ತಾರೆ. ಅವರು ಹೋದಲ್ಲಿ, ಬಂದಲ್ಲಿ, ನಿಂತಲ್ಲಿ, ಕುಳಿತಲ್ಲಿ ಫೋಟೋ ಕ್ಲಿಕ್ಕಿಸುತ್ತಾರೆ, ವಿಡಿಯೋ ರೆಕಾರ್ಡ್ ಮಾಡುತ್ತಾರೆ. ಅದು ಏರ್​​​ಪೋರ್ಟ್ ಆಗಿರಲಿ, ಜಿಮ್ ಆಗಿರಲಿ, ಮನೆ ಗೇಟ್ ಆಗಲಿ, ಕಾರ್ಯಕ್ರಮಗಳಾಗಲೀ ಹಠಕ್ಕೆ ಬಿದ್ದವರಂತೆ ಅಪರೂಪದ ಫೋಟೋಗಳನ್ನು ಸೆರೆಹಿಡಿಯುತ್ತಾರೆ. ಇನ್ನು ಸೆಲಬ್ರಿಟಿಗಳಿಗೆ ಮದುವೆಯಾಗಿ ಮಕ್ಕಳಾದರಂತೂ ಮಗು ನೋಡಲು ಹೇಗಿದೆ…? ಮಗುವಿನ ಹೆಸರು ಏನು ಎಂಬುದನ್ನು ತಿಳಿಯಲು ಕಾಯುತ್ತಿರುತ್ತಾರೆ. ಇತ್ತೀಚೆಗಷ್ಟೇ ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ ಬಾಲಿವುಡ್ ನಟಿ ಅನುಷ್ಕಾ ಶರ್ಮ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಆ ಮಗುವಿನ ಮುಖವನ್ನು ಇಂದಿಗೂ ಮಾಧ್ಯಮಗಳ ಕಣ್ಣಿಗೆ ಕಾಣಿಸದೆ ಬಹಳ ಎಚ್ಚರಿಕೆಯಿಂದ ಕಾಪಾಡುತ್ತಿದ್ದಾರೆ. ಮಗುವನ್ನು ಬಟ್ಟೆ ಸುತ್ತಿ ಬಚ್ಚಿಟ್ಟುಕೊಳ್ಳಬೇಡಿ, ಅದಕ್ಕೆ ಉಸಿರುಗಟ್ಟುತ್ತದೆ ಎಂದು ಇತ್ತೀಚೆಗೆ ನೆಟಿಜನ್ಸ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಇದಾದ ನಂತರ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮೆಚ್ಚಿನ ಗಾಯಕಿಯ ಮಗು ನೋಡಲು ಅಭಿಮಾನಿಗಳು ಕಾಯುತ್ತಿದ್ದರು. 4-5 ದಿನಗಳ ಹಿಂದಷ್ಟೇ ಅಭಿಮಾನಿಗಳಿಗೆ ಮಗುವಿನ ಮುಖ ದರ್ಶನ ಮಾಡಿಸಿದ ಶ್ರೇಯಾ ಘೋಷಾಲ್ ಮಗನ ಹೆಸರನ್ನೂ ರಿವೀಲ್ ಮಾಡಿದ್ದರು. ಇದೀಗ ಸ್ಯಾಂಡಲ್​​ವುಡ್ ನಟಿ ಮಯೂರಿ ಕ್ಯಾತರಿ ಕೂಡಾ ತಮ್ಮ ಮುದ್ದು ಕಂದನ ಫೋಟೋವನ್ನು ರಿವೀಲ್ ಮಾಡಿದ್ಧಾರೆ. ಅಲ್ಲದೆ ಮಗನ ಹೆಸರನ್ನೂ ತಿಳಿಸಿದ್ದಾರೆ. ಮಗ ಹಾಗೂ ಪತಿಯೊಂದಿಗೆ ಫೋಟೋಶೂಟ್ ಮಾಡಿಸಿರುವ ಮಯೂರಿ, ಫೋಟೋಗಳಿಗೆ ವಿಡಿಯೋ ರೂಪ ಕೊಟ್ಟು ಅದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್​ಲೋಡ್ ಮಾಡಿಕೊಂಡಿದ್ದಾರೆ. ಮಗುವಿನ ಫೋಟೋ ನೋಡಿ ಕನ್ನಡ ಸಿನಿಪ್ರಿಯರು ಸಂತೋಷ ವ್ಯಕ್ತಪಡಿಸಿದ್ದಾರೆ.

“15-03-2021 ರಂದು ಮಗ ಜನಿಸಿದ ನಂತರ ನಮ್ಮ ಜೀವನ ಸಂಪೂರ್ಣ ಬದಲಾಯ್ತು. ನನ್ನ ಮಗನೇ ನನಗೆ ಈಗ ಹೊಸ ಪ್ರಪಂಚ” ಎಂದು ಮಯೂರಿ ಬರೆದುಕೊಂಡಿದ್ಧಾರೆ. ಅಷ್ಟೇ ಅಲ್ಲ, ಮಗನಿಗೆ ಆರವ್ ಎಂದು ಹೆಸರಿಟ್ಟಿರುವುದಾಗಿ ತಿಳಿಸಿದ್ದಾರೆ. ಮಯೂರಿ ದಂಪತಿ ಹಾಗೂ ಮಗುವಿಗೆ ನೆಟಿಜನ್ಸ್ ಶುಭ ಕೋರಿದ್ದಾರೆ. ಗಾಯಕಿ ವಾಣಿ ಹರಿಕೃಷ್ಣ ಸೇರಿದಂತೆ ಇನ್ನಿತರ ಸೆಲಬ್ರಿಟಿಗಳು ಕಮೆಂಟ್ ಮಾಡಿ ಮಗುವಿಗೆ ಹಾರೈಸಿದ್ದಾರೆ. ಮಯೂರಿ, ಕಳೆದ ವರ್ಷ ಜೂನ್ 12 ರಂದು ತಮ್ಮ ಧೀರ್ಘಕಾಲದ ಗೆಳೆಯ ಅರುಣ್ ಅವರೊಂದಿಗೆ ಬೆಂಗಳೂರಿನ ದೇವಸ್ಥಾನವೊಂದರಲ್ಲಿ ಸರಳವಾಗಿ ಮದುವೆಯಾಗಿದ್ದರು. ನಟ ಜೆಕೆ ಸೇರಿದಂತೆ ಕೆಲವೇ ಕೆಲವು ಮಂದಿ ಈ ಮದುವೆಗೆ ಸಾಕ್ಷಿಯಾಗಿದ್ದರು. ಕಳೆದ ವರ್ಷ ದೀಪಾವಳಿ ಹಬ್ಬದಂದು ತಾವು ತಾಯಿಯಾಗುತ್ತಿರುವ ಸುದ್ದಿಯನ್ನು ಮಯೂರಿ, ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.

 

View this post on Instagram

 

A post shared by mayuri (@mayurikyatari)


ಹುಬ್ಬಳ್ಳಿ ಮೂಲಕ ಮಯೂರಿ ಕ್ಯಾತರಿ 2015 ರಲ್ಲಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ‘ಅಶ್ವಿನಿ ನಕ್ಷತ್ರ’ ಧಾರಾವಾಹಿ ಮೂಲಕ ಜನರಿಗೆ ಪರಿಚಯವಾಗಿದ್ದರು. ಸ್ಟಾರ್ ನಟ ಜೆಕೆ ಪತ್ನಿ ಅಶ್ವಿನಿ ಆಗಿ ಅಭಿನಯಿಸಿದ್ದ ಮಯೂರಿ, ಮೊದಲ ಧಾರಾವಾಹಿಯಲ್ಲೇ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದರು. ಈ ಧಾರಾವಾಹಿ ನಂತರ ಅಜಯ್ ರಾವ್ ಜೊತೆ ‘ಕೃಷ್ಣಲೀಲಾ’ ಚಿತ್ರದ ಮೂಲಕ ಮಯೂರಿ ಬೆಳ್ಳಿತೆರೆಗೂ ಎಂಟ್ರಿ ಕೊಟ್ಟರು. ಇಷ್ಟಕಾಮ್ಯ, ನಟರಾಜ ಸರ್ವಿಸ್, ಕರಿಯ 2, ನನ್ನ ಪ್ರಕಾರ, ಮೌನಂ, ಪೊಗರು ಸೇರಿದಂತೆ ಮಯೂರಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

-ರಕ್ಷಿತ ಕೆ.ಆರ್. ಸಾಗರ

Be the first to comment

Leave a Reply

Your email address will not be published.


*