‘ಲೈಫ್ ಆಫ್ ಚಾರ್ಲಿ’ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ಸುದೀಪ್​​​…ಸಿಂಪಲ್​​ ಸ್ಟಾರ್​​ಗೆ ಹೊಸ ನಾಮಕರಣ ಮಾಡಿದ ಕಿಚ್ಚ

ನಿನ್ನೆಯಷ್ಟೇ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಲಾಕ್​ಡೌನ್ ಇದ್ದಿದ್ದರಿಂದ ರಕ್ಷಿತ್ ಶೆಟ್ಟಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಸರಳವಾಗಿ ಈ ಬಾರಿ ಬರ್ತ್​ಡೇ ಆಚರಿಸಿಕೊಂಡಿದ್ದಾರೆ. ಕಳೆದ ಬಾರಿ ಕೂಡಾ ಇದೇ ಸಮಯಕ್ಕೆ ಲಾಕ್​ಡೌನ್ ಇದ್ದಿದ್ದರಿಂದ ರಕ್ಷಿತ್, ಉಡುಪಿಯ ತಮ್ಮ ಮನೆಯಲ್ಲೇ ಫ್ಯಾಮಿಲಿ ಜೊತೆ ಕೇಕ್ ಕಟ್ ಮಾಡಿದ್ದರು. ಇನ್ನು ನಿನ್ನೆ ರಕ್ಷಿತ್ ಬರ್ತ್​ಡೇ ಗಿಫ್ಟ್ ಆಗಿ ಚಿತ್ರತಂಡ ‘ಚಾರ್ಲಿ 777’ ಸಿನಿಮಾದ ಎರಡನೇ ಟೀಸರ್ ಬಿಡುಗಡೆ ಮಾಡಿತ್ತು. ಕೆಲವು ದಿನಗಳ ಹಿಂದೆ ‘ಲೈಫ್ ಆಫ್ ಧರ್ಮ’ ಹೆಸರಿನ ಟೀಸರ್ ಬಿಡುಗಡೆಯಾಗಿತ್ತು. ಈ ಟೀಸರ್​​​ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದ ಅಭಿಮಾನಿಗಳು ಹೊಸ ಟೀಸರ್ ನೋಡಲು ಎದುರು ನೋಡುತ್ತಿದ್ದರು. ಈ ಸಿನಿಮಾದಲ್ಲಿ ಶ್ವಾನ ಕೂಡಾ ಪ್ರಮುಖ ಆಕರ್ಷಣೆಯಾದ್ದರಿಂದ ನಿನ್ನೆ ‘ಲೈಫ್ ಆಫ್ ಚಾರ್ಲಿ’ ಹೆಸರಿನ ಮತ್ತೊಂದು ಟೀಸರ್ ಬಿಡುಗಡೆ ಮಾಡಲಾಗಿದೆ. ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ತಯಾರಾಗಿದ್ದು, ಟೀಸರ್ ಕೂಡಾ 5 ಭಾಷೆಗಳಲ್ಲಿ ಬಿಡುಗಡೆಯಾಗಿದೆ.

ಒಂದು ದಿನದಲ್ಲೇ ಕನ್ನಡದಲ್ಲಿ 4 ಮಿಲಿಯನ್​ ಹಾಗೂ ಉಳಿದ ನಾಲ್ಕೂ ಭಾಷೆಗಳಲ್ಲಿ 3 ಮಿಲಿಯನ್​​​ಗೂ ಹೆಚ್ಚು ಮಂದಿ ಈ ಟೀಸರ್ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೆಲಬ್ರಿಟಿಗಳು ಕೂಡಾ ಈ ಟೀಸರ್ ನೋಡಿ ರಕ್ಷಿತ್ ಶೆಟ್ಟಿ ಹಾಗೂ ತಂಡಕ್ಕೆ ಶುಭ ಕೋರಿದ್ಧಾರೆ. ಕಿಚ್ಚ ಸುದೀಪ್ ಕೂಡಾ ಲೈಫ್ ಆಫ್ ಚಾರ್ಲಿ ಟೀಸರ್ ನೋಡಿ ಬಹಳ ಇಷ್ಟಪಟ್ಟಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಟೀಸರ್ ಹಂಚಿಕೊಂಡಿರುವ ಸುದೀಪ್, ”ಯೋ ಚಾರ್ಲಿ ಶೆಟ್ಟಿ, ಚಾರ್ಲಿ 777 ಟೀಸರ್ ಬಹಳ ಅದ್ಭುತವಾಗಿದೆ. ಟೀಸರ್ ನೋಡಿ ಇಷ್ಟಪಡದ ಹೊರತು ನನಗೆ ಬೇರೆ ಆಯ್ಕೆಯೇ ಇರಲಿಲ್ಲ. ಎಂದೆಂದಿಗೂ ನಿಮಗೆ ಶುಭವಾಗಲಿ, ಹುಟ್ಟುಹಬ್ಬದ ಶುಭಾಶಯಗಳು, ಎಂದಿಗೂ ನಗುತ್ತಿರು” ಎಂದು ಹಗ್ಗಿಂಗ್ ಎಮೋಜಿ ಜೊತೆ ರಕ್ಷಿತ್ ಶೆಟ್ಟಿ ಬರ್ತ್​ಡೇ ಹಾಗೂ ಸಿನಿಮಾಗೆ ಶುಭ ಕೋರಿದ್ಧಾರೆ. ರಕ್ಷಿತ್ ಶೆಟ್ಟಿಗೆ ಸುದೀಪ್ ಚಾರ್ಲಿ ಶೆಟ್ಟಿ ಎಂದು ಹೊಸ ನಾಮಕರಣ ಮಾಡಿದ್ದಾರೆ.

ಮನುಷ್ಯ ಹಾಗೂ ಶ್ವಾನದ ನಡುವಿನ ಭಾವನಾತ್ಮಕ ಸಂಬಂಧದ ಕಥೆಯನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಯಾವಾಗಲೂ ಮನೆ, ಫ್ಯಾಕ್ಟರಿ, ಗಲಾಟೆ, ಇಡ್ಲಿ, ಸಿಗರೇಟ್, ಬಿಯರ್ ಜಪ ಮಾಡುವ ಧರ್ಮನ ಲೈಫ್​​​ನಲ್ಲಿ ಚಾರ್ಲಿ ಬಂದಾಗ ಆತನ ಜೀವನದಲ್ಲಿ ಏನೆಲ್ಲಾ ಬದಲಾವಣೆಯಾಗಲಿದೆ ಎಂಬುದನ್ನು ‘ಚಾರ್ಲಿ 777’ ಸಿನಿಮಾದಲ್ಲಿ ನೋಡಬಹುದು. ಈಗಾಗಲೇ ಸಿನಿಮಾದ ತಮಿಳು ಹಾಗೂ ಮಲಯಾಳಂ ವಿತರಣೆ ಹಕ್ಕುಗಳು ಮಾರಾಟವಾಗಿವೆ. ತಮಿಳಿನಲ್ಲಿ ಖ್ಯಾತ ನಿರ್ದೇಶಕ ಕಾರ್ತಿಕ್ ಸುಬ್ಬರಾಜು ತಮ್ಮ ಸ್ಟೋನ್ ಬೆಂಚ್ ಫಿಲ್ಮ್ಸ್ ಬ್ಯಾನರ್ ಅಡಿ ಸಿನಿಮಾ ಹಕ್ಕನ್ನು ಪಡೆದಿದ್ದಾರೆ. ಮಲಯಾಳಂನಲ್ಲಿ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ತಮ್ಮ ಪೃಥ್ವಿರಾಜ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಡಿಸ್ಟ್ರಿಬ್ಯೂಷನ್ ಹಕ್ಕುಗಳನ್ನು ಪಡೆದಿದ್ದಾರೆ. ತೆಲುಗಿನಲ್ಲಿ ಈ ಟೀಸರನ್ನು ನ್ಯಾಚುರಲ್ ಸ್ಟಾರ್ ನಾಣಿ ಬಿಡುಗಡೆ ಮಾಡಿದ್ದಾರೆ. ತೆಲುಗಿನಲ್ಲಿ ವಾಲ್​ ಪೋಸ್ಟರ್ ಸಿನಿಮಾ ಯೂಟ್ಯೂಬ್ ಚಾನೆಲ್ ಹಾಗೂ ಹಿಂದಿಯಲ್ಲಿ ಪರಮ್ವ ಸ್ಟುಡಿಯೋಸ್ ಯೂಟ್ಯೂಬ್ ಚಾನೆಲ್​​​ನಲ್ಲಿ ಟೀಸರ್ ಬಿಡುಗಡೆಯಾಗಿದ್ದು ಈ ಎರಡೂ ಭಾಷೆಗಳಲ್ಲಿ ಯಾರು ಸಿನಿಮಾ ಹಕ್ಕು ಖರೀದಿಸಿದ್ದಾರೆ ಎಂಬುದನ್ನು ಚಿತ್ರತಂಡ ಶೀಘ್ರದಲ್ಲೇ ಅಧಿಕೃತವಾಗಿ ಘೋಷಿಸಲಿದೆ.

‘ಚಾರ್ಲಿ 777’ ಸಿನಿಮಾವನ್ನು ಜಿ.ಎಸ್​. ಗುಪ್ತ ಹಾಗೂ ರಕ್ಷಿತ್ ಶೆಟ್ಟಿ ನಿರ್ಮಿಸಿದ್ದು ಕಿರಣ್ ರಾಜ್. ಕೆ ಕಥೆ ಬರೆದು ನಿರ್ದೇಶಿಸಿದ್ದಾರೆ. ಇದು ಕಿರಣ್ ನಿರ್ದೇಶನದ ಮೊದಲ ಸಿನಿಮಾ. ಮೈಸೂರು, ಪಂಜಾಬ್, ಗುಜರಾತ್, ಶಿಮ್ಲಾ, ಕಾಶ್ಮೀರ ಹಾಗೂ ಇನ್ನಿತರ ಸ್ಥಳಗಳಲ್ಲಿ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ಚಿತ್ರದ ಹಾಡುಗಳಿಗೆ ನೊಬಿನ್ ಪೌಲ್ ಸಂಗೀತ ನೀಡಿದ್ದು ಅರವಿಂದ್ ಎಸ್. ಕಶ್ಯಪ್ ಕ್ಯಾಮರಾ ಕೆಲಸ ಮಾಡಿದ್ಧಾರೆ. ರಕ್ಷಿತ್ ಶೆಟ್ಟಿ ಜೊತೆಗೆ ಸಂಗೀತ ಶೃಂಗೇರಿ, ರಾಜ್ ಬಿ. ಶೆಟ್ಟಿ, ದಾನಿಶ್ ಸೇಠ್, ಬಾಬ್ಬಿ ಸಿಂಹ ಹಾಗೂ ಇನ್ನಿತರರು ನಟಿಸಿದ್ದಾರೆ.

-ರಕ್ಷಿತ ಕೆ.ಆರ್. ಸಾಗರ

Be the first to comment

Leave a Reply

Your email address will not be published.


*