ಚಿರು ಮರೆಯಾಗಿ ಒಂದು ವರ್ಷ…ಪತಿಯೊಂದಿಗಿರುವ ಫೋಟೋ ಹಂಚಿಕೊಂಡ ಮೇಘನಾ, ಅಣ್ಣನಿಗೆ ಭಾವನಾತ್ಮಕ ಪತ್ರ ಬರೆದ ಧ್ರುವ

ಜೂನ್ 7, ಇಂದಿಗೆ ಚಿರಂಜೀವಿ ಸರ್ಜಾ ಚಿರನಿದ್ರೆಗೆ ಜಾರಿ ಒಂದು ವರ್ಷ ಕಳೆದಿದೆ. ಕಳೆದ ವರ್ಷ ಇದೇ ದಿನ ಮಧ್ಯಾಹ್ನದ ವೇಳೆ ಬಂದ ಚಿರು ಇನ್ನಿಲ್ಲ ಎಂಬ ಆಘಾತಕಾರಿ ಸುದ್ದಿ ಚಿರು ಕುಟುಂಬದವರಿಗೆ, ಸ್ನೇಹಿತರಿಗೆ , ಅಭಿಮಾನಿಗಳಿಗೆ ಶಾಕ್ ನೀಡಿತ್ತು. ಹೃದಯಾಘಾತದಿಂದ ಚಿರಂಜೀವಿ ಸರ್ಜಾ ಬಾರದ ಲೋಕಕ್ಕೆ ತೆರಳಿದರು. ಮದುವೆಯಾಗಿ 2 ವರ್ಷಗಳಷ್ಟೇ ಕಳೆದಿದೆ. ಪತ್ನಿ,ಮಗುವಿನೊಂದಿಗೆ ಕುಟುಂದೊಂದಿಗೆ ಸಂತೋಷದಿಂದ ಬಾಳಿ ಬದುಕಬೇಕಿದ್ದ, ಮತ್ತಷ್ಟು ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸಬೇಕಿದ್ದ ಚಿರಂಜೀವಿ ಸರ್ಜಾ ಚಿಕ್ಕ ವಯಸ್ಸಿಗೆ ನಿಧನರಾಗಿದ್ದು ಯಾರಿಗೂ ಅರಗಿಸಿಕೊಳ್ಳಲಾಗುತ್ತಿಲ್ಲ. 10 ವರ್ಷದ ಪ್ರೀತಿ, 2 ವರ್ಷಗಳ ದಾಂಪತ್ಯ ಜೀವನ ಕಂಡಿದ್ದ ಮೇಘನಾ ಅಂತೂ ಈ ಆಘಾತದಿಂದ ಹೊರಬರಲು ಬಹಳ ಕಷ್ಟಪಡಬೇಕಾಯ್ತು. ಇಂದಿಗೆ ಚಿರಂಜೀವಿ ಸರ್ಜಾ ನಿಧನರಾಗಿ ಒಂದು ವರ್ಷ ತುಂಬಿದೆ. ಚಿರಂಜೀವಿ ಸರ್ಜಾ ಹಾಗೂ ಮೇಘನಾ ಮನೆಯವರು ಚಿರು ಸಮಾಧಿ ಬಳಿ ತೆರಳಿ ಪೂಜೆ ಸಲ್ಲಿಸಿದ್ದಾರೆ. ಪ್ರೀತಿಯ ಪತಿಯೊಂದಿಗೆ ಇರುವ ಫೋಟೋವನ್ನು ಮೇಘನಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡರೆ, ಧ್ರುವ ಸರ್ಜಾ ಪ್ರೀತಿಯ ಅಣ್ಣನಿಗೆ ಭಾವನಾತ್ಮಕ ಪತ್ರವೊಂದನ್ನು ಬರೆದಿದ್ಧಾರೆ.

ಚಿರಂಜೀವಿ ಸರ್ಜಾ ಜೊತೆ ಇರುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿರುವ ಮೇಘನಾ ”ನಾವು, ನನ್ನವನು” ಎಂದು ಲವ್ ಎಮೋಜಿಯೊಂದಿಗೆ ಕ್ಯಾಪ್ಷನ್ ನೀಡಿದ್ದಾರೆ. ಚಿರಂಜೀವಿ ಸರ್ಜಾ ಹಾಗೂ ಮೇಘನಾ ಇಬ್ಬರೂ 10 ವರ್ಷಗಳಿಂದ ಪ್ರೀತಿಸುತ್ತಿದ್ದರು. ಮನೆಯವರ ಒಪ್ಪಿಗೆಯೊಂದಿಗೆ 2 ಮೇ 2018 ರಂದು ಮದುವೆಯಾದರು. ಚಿರಂಜೀವಿ ಸರ್ಜಾ ನಿಧನರಾದಾಗ ಮೇಘನಾ 5 ತಿಂಗಳ ಗರ್ಭಿಣಿ. 22 ಅಕ್ಟೋಬರ್ 2020 ರಂದು ಮೇಘನಾ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದರು. ಚಿರು ನೆನಪಿನಲ್ಲಿ, ಮಗನ ನಗುವಲ್ಲೇ ಪತಿಯ ನಗುವನ್ನು ನೋಡುತ್ತಾ ಮೇಘನಾ ಜೀವನ ಸಾಗಿಸುತ್ತಿದ್ದಾರೆ. ಮೇಘನಾ ಪೋಸ್ಟ್​​ಗೆ ನಿರ್ದೇಶಕ ಪನ್ನಗಾಭರಣ, ನಟಿ ಶ್ವೇತಾ ಚಂಗಪ್ಪ, ಸಂಯುಕ್ತಾ ಹೊರನಾಡು ಹಾಗೂ ಇನ್ನಿತರರು ಕಮೆಂಟ್ ಮಾಡಿದ್ದಾರೆ.

ಇನ್ನು ಚಿರಂಜೀವಿ ಸರ್ಜಾರನ್ನು ಬಹಳ ಗೌರವಿಸುತ್ತಿದ್ದ ಧ್ರುವ ಸರ್ಜಾ, ಅಣ್ಣನಿಗೆ ಭಾವನಾತ್ಮಕ ಪತ್ರವೊಂದನ್ನು ಬರೆದುಕೊಂಡಿದ್ದಾರೆ. ”ನೀನು ದೇವರಮನೆಗೆ ಹೋಗಿ ಒಂದು ವರ್ಷವಾಯ್ತು. ಎಷ್ಟು ಬೇಗ ಒಂದು ವರ್ಷ..! ಈ 365 ದಿನಗಳಲ್ಲಿ ನಿನ್ನ ನೆನೆಯದ ದಿನಗಳೇ ಇಲ್ಲ,ಕನಸಿನಲ್ಲಿ ನಿನ್ನ ಕಾಣದ ರಾತ್ರಿಗಳೇ ಇಲ್ಲ. ಮರೆಯಲಾಗದ ಚಿರ ನೆನಪುಗಳು. ಕುಟುಂಬದ ಮೇಲೆ ನಿನಗಿದ್ದ ಅಪಾರವಾದ ಗೌರವ, ಜನಗಳಿಗೆ ನೀನು ತೋರಿಸುತ್ತಿದ್ದ ಪ್ರೀತಿ, ಪ್ರೇಮ, ಸ್ನೇಹ, ಉದಾರಗುಣ ಮತ್ತು ಅಜಾತಶತ್ರುವಾಗಿದ್ದ ನಿನ್ನ ನೆನಪುಗಳೇ ಈಗ ನಮ್ಮ ಕರಗಲಾರ ಆಸ್ತಿ. ನೀನೆಲ್ಲಿದ್ದರೂ ಅಲ್ಲಿ ನಗು ತುಂಬಿರಬೇಕು, ನಿನ್ನ ಆತ್ಮ ಸದಾ ಶಾಂತಿಯಿಂದಿರಬೇಕು, ಆ ಪ್ರಾರ್ಥನೆಯಲ್ಲೇ ಎಂದೆಂದೂ ನಿನ್ನ ನೆನಪಿನಲ್ಲೇ ನಿನ್ನ ಪ್ರೀತಿಯ, ನಿನ್ನ ಕುಟುಂಬ” ಎಂದು ಧ್ರುವ ಸರ್ಜಾ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

 

2009 ರಲ್ಲಿ ಬಿಡುಗಡೆಯಾದ ‘ವಾಯುಪುತ್ರ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದ ಚಿರಂಜೀವಿ ಸರ್ಜಾ ಗಂಡೆದೆ, ವರದನಾಯಕ, ಚಂದ್ರಲೇಖ, ರುದ್ರತಾಂಡವ, ಆಟಗಾರ, ಸಂಹಾರ, ಸೀಜರ್, ಅಮ್ಮ ಐ ಲವ್ ಯು, ಸಿಂಗ, ಖಾಕಿ, ಆದ್ಯ, ಶಿವಾರ್ಜುನ ಸೇರಿ 20 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ರಾಜಮಾರ್ತಾಂಡ’ ಸಿನಿಮಾ ಪೋಸ್ಟ್​​ ಪ್ರೊಡಕ್ಷನ್ ಹಂತದಲ್ಲಿದ್ದ ಸಮಯದಲ್ಲಿ ಚಿರು ನಿಧನರಾದರು. ಆದ್ದರಿಂದ ಅಣ್ಣನಿಗೆ ಧ್ರುವ ಅವರೇ ವಾಯ್ಸ್ ಡಬ್ ಮಾಡಿದ್ದಾರೆ. ರಣಂ, ಕ್ಷತ್ರಿಯ, ಏಪ್ರಿಲ್, ಜುಗಾರಿ ಸಿನಿಮಾಗಳನ್ನು ಚಿರು ಒಪ್ಪಿಕೊಂಡಿದ್ದರು. ಇದರಲ್ಲಿ ‘ರಣಂ’ ಸಿನಿಮಾಗೆ ಸ್ವಲ್ಪ ಭಾಗ ಚಿತ್ರೀಕರಣ ಕೂಡಾ ನಡೆದಿತ್ತು. ಆದರೆ ಸಿನಿಮಾ ಪೂರ್ಣಗೊಳ್ಳುವ ಮುನ್ನವೇ ಚಿರು ನಿಧನರಾದರು. ಚಿರಂಜೀವಿ ಸರ್ಜಾ ಇಂದು ನಮ್ಮೊಂದಿಗೆ ಇಲ್ಲವಾದರೂ ಅವರ ನೆನಪು ಎಂದಿಗೂ ನಮ್ಮ ಮನದಲ್ಲಿ ಸದಾ ಹಸಿರಾಗಿರುತ್ತದೆ.

-ರಕ್ಷಿತ ಕೆ.ಆರ್. ಸಾಗರ

Be the first to comment

Leave a Reply

Your email address will not be published.


*