ಏಕವಚನದಲ್ಲಿ ಸಂಬೋಧಿಸಿ ಸಿಎಂ ಯಡಿಯೂರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ನಿರ್ದೇಶಕ ಗುರುಪ್ರಸಾದ್..ವಿಡಿಯೋ ನೋಡಿ​​

ಕೊರೊನಾ ವೈರಸ್​​​​​​​​, ರಾಜ್ಯದಲ್ಲಿ ಸಾಕಷ್ಟು ಜನರನ್ನು ಬಲಿ ಪಡೆದಿದೆ. ಕೊರೊನಾ ಕಟ್ಟಿಹಾಕಲು ವಿಫಲವಾದ ಸರ್ಕಾರದ ವಿರುದ್ಧ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿಯಲ್ಲಿ ಯಡಿಯೂರಪ್ಪ ವಿರೋಧಿ ಬಣದವರು ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ ಎನ್ನಲಾಗುತ್ತಿದೆ. ಹೈಕಮಾಂಡ್ ಹೇಳಿದರೆ ನಾನು ಖಂಡಿತ ರಾಜೀನಾಮೆ ನೀಡಲು ಸಿದ್ಧ ಎಂದು ಯಡಿಯೂರಪ್ಪ ಕೂಡಾ ಪ್ರತಿಕ್ರಿಯಿಸಿದ್ದಾರೆ. ಯಡಿಯೂರಪ್ಪ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಂದ ರಾಜೀನಾಮೆ ಪಡೆಯುವ ಉದ್ದೇಶ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ. ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ, ಪಕ್ಷದಲ್ಲಿ ಯಾವುದೇ ರೀತಿಯ ಆಂತರಿಕ ಬಂಡಾಯ ಇಲ್ಲ ಎಂದು ಹೇಳಿದ್ಧಾರೆ. ಯಡಿಯೂರಪ್ಪ ರಾಜೀನಾಮೆ ವಿಚಾರ ರಾಜಕೀಯ ತಂತ್ರಗಾರಿಕೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಕೊರೊನಾ ಸಂಕಷ್ಟದ ನಡುವೆಯೂ ಪ್ರತಿದಿನ ರಾಜಕೀಯ ಕೆಸರೆರಚಾಟ ಮಾತ್ರ ನಿಲ್ಲುತ್ತಿಲ್ಲ.

ಸ್ಯಾಂಡಲ್​ವುಡ್ ನಿರ್ದೇಶಕ ಗುರುಪ್ರಸಾದ್ ಸಿಎಂ ಯಡಿಯೂರಪ್ಪ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ. ಫೇಸ್​​​ಬುಕ್ ಲೈವ್ ಬಂದು ಬಿಎಸ್​​​​ವೈ ವಿರುದ್ಧ ಕೆಂಡಾಮಂಡಲವಾಗಿದ್ದಾರೆ. “ನೀವು ಜನರ ಸೇವೆ ಮಾಡುತ್ತಿಲ್ಲ, ನಿಮ್ಮ ಪುತ್ರ, ವಂಶದ ಸೇವೆ ಮಾಡುತ್ತಿದ್ದೀರಿ. ಕೊರೊನಾದಿಂದ ನರಳುತ್ತಿದ್ದ 29,000 ಜನರನ್ನು ನೀವು ಆಪೋಷನ ತೆಗೆದುಕೊಂಡಿದ್ದೀರ. ನಿಮಗೆ ಪಶ್ಚಾತಾಪ ಇಲ್ಲವೇ…? ನಿಮಗೆ ಓಟು ಹಾಕಿದ್ದಕ್ಕೆ ನಮಗೆ ಬೆಲೆಯೇ ಇಲ್ಲವೇ..? ಮೋದಿ ಮುಖ ನೋಡಿ ನಿಮಗೆ ಓಟು ಹಾಕಿದ್ದೇವೆ. 29 ಸಾವಿರ ಜನರ ಕುಟುಂಬಕ್ಕೂ ಒಂದೊಂದು ಕೋಟಿ ಕೊಡುವಷ್ಟು ಆಸ್ತಿ ನಿಮ್ಮಲ್ಲಿದೆ. ಅಷ್ಟು ಜನರನ್ನು ಸಾ’ಯಿಸಿ, ಹೇಗೆ ಊಟ ಮಾಡುತ್ತಿದ್ದೀರಿ..? ನೀವೆಲ್ಲಾ ಭ್ರಷ್ಟಾಚಾರಿಗಳು, ಇದನ್ನೆಲ್ಲಾ ಕೋರ್ಟಿನಲ್ಲಿ ಪ್ರೂವ್ ಮಾಡುವಷ್ಟು ನನ್ನ ಬಳಿ ಸಾಕ್ಷಿ ಇದೆ. ಹೈಕಮಾಂಡ್ ಬಗ್ಗೆ ಮಾತನಾಡಬೇಡಿ, ಇಲ್ಲಿ ಕನ್ನಡಿಗರೇ ಹೈ ಕಮಾಂಡ್, ಎಲ್ಲರ ಸಾವಿಗೂ ನೀವೇ ಕಾರಣ, ರಾಜೀನಾಮೆ ನೀಡಿ ಮನೆಗೆ ಹೋಗಿ. ವಿಜಯೇಂದ್ರ ನಿಮ್ಮ ತಂದೆಯನ್ನು ಚೆನ್ನಾಗಿ ನೋಡಿಕೊಳ್ಳಿ” ಎಂದು ಕೋಪದಿಂದ ಮಾತನಾಡಿದ್ದಾರೆ.

“ಏನೇ ಕಷ್ಟ ಬಂದರೂ ನೀವು ಕೆಲಸ ಮಾಡಿ, ನಿಮಗೆ ಏನೂ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ ಎಂದು ಹೇಳುವುದು ಸರ್ಕಾರದ ಜವಾಬ್ದಾರಿ. ಸರ್ಕಾರ ನಮ್ಮ ತೆರಿಗೆ ಹಣವನ್ನು ಪೋಲು ಮಾಡುತ್ತಿದೆ. ಒಂದೂವರೆ ವರ್ಷದಿಂದ ಸಂಪಾದನೆ ಇಲ್ಲ. ಕೋಟ್ಯಂತರ ರೂಪಾಯಿ ಪ್ರಾಜೆಕ್ಟ್ ನನ್ನ ಕೈಯ್ಯಲ್ಲಿ ಇದ್ದರೂ ಕೆಲಸ ಮಾಡದೆ ಸಾಲ ಪಡೆದು ಬದುಕುತ್ತಿದ್ದೇನೆ. ಯಾರೂ ಸರಿಯಿಲ್ಲ, ಎಲ್ಲರೂ ಆನಂದವಾಗಿ ಕೊ’ಲೆಗಳನ್ನು ಮಾಡಿಕೊಂಡು ನೆಮ್ಮದಿಯಾಗಿದ್ದೀರಿ. ಸತ್ತಿರುವವರ ತಿ’ಥಿ ಮಾಡುವುದು ದೊಡ್ಡ ವಿಚಾರವಲ್ಲ, ಅವರನ್ನು ಉಳಿಸಿಕೊಂಡಿದ್ದರೆ ಅದು ವಿಚಾರವಾಗುತ್ತಿತ್ತು. ಇದು ರಾಜಕೀಯ ಮಾಡುವ ಸಮಯವಲ್ಲ, ಕೊರೊನಾ ಸಮಸ್ಯೆ ನಿವಾರಿಸುವುದು ಈಗ ಮುಖ್ಯ”.

”ರಾಜಕಾರಣಿಗಳು ಹಣ ಮಾಡಲು ಬರುವುದು, ದಯವಿಟ್ಟು ಯಾರೂ ಹಣ ಪಡೆದು ಓಟು ಹಾಕಬೇಡಿ, ಚುನಾವಣೆಗೆ ಖರ್ಚು ಮಾಡುವುದು ರಾಜಕಾರಣಿಗಳ ದುಡ್ಡಲ್ಲ, ಅದು ಜನರ ದುಡ್ಡು, ಮುಂದಿನ ಚುನಾವಣೆಗೆ ಎಲ್ಲರೂ ಅಭ್ಯರ್ಥಿಗಳಾಗಿ ನಿಂತರೆ ರಾಜಕೀಯದವರೆಲ್ಲರ ಸಂತತಿ ನಾಶವಾಗುತ್ತದೆ, ಕೆಲವೇ ದಿನಗಳಲ್ಲಿ ನೀವೆಲ್ಲಾ ನಿರ್ನಾಮವಾಗುತ್ತೀರಿ. ಶಾಸಕರ ಡೈರಿಯಲ್ಲಿ ಇರುವ ಎಲ್ಲಾ ನಂಬರ್​​ಗಳಿಗೂ ಕರೆ ಮಾಡಿದೆ, ಯಾರೂ ರಿಸೀವ್ ಮಾಡಲಿಲ್ಲ. ಪಕ್ಕದ ರಾಜ್ಯದ ಸಿಎಂಗಳು ಎಷ್ಟು ಚೆನ್ನಾಗಿ ಆಡಳಿತ ಮಾಡುತ್ತಿದ್ದಾರೆ. ನೀವೆಲ್ಲಾ ಸಾಕಷ್ಟು ಹಣ ಮಾಡಿದ್ದೀರ. ಮನೆಗೆ ಹೋಗಿ ಮೊಮ್ಮಕ್ಕಳನ್ನು ಆಡಿಸಿ” ಎಂದು ಗುರುಪ್ರಸಾದ್ ಕಿಡಿ ಕಾರಿದ್ಧಾರೆ. ಕೆಲವು ದಿನಗಳ ಹಿಂದೆ ಕೂಡಾ ಇದೇ ರೀತಿ ವಿಡಿಯೋ ಮಾಡಿದ್ದ ನಿರ್ದೇಶಕ ಗುರುಪ್ರಸಾದ್ ”ಕೊರೊನಾ ಬಂದು ನಾನು ಸತ್ತರೆ ಅದಕ್ಕೆ ರಾಜಕಾರಣಿಗಳೇ ಸಾಕ್ಷಿ” ಎಂದಿದ್ದರು. ಇದೀಗ ಅವರ ಹೊಸ ವಿಡಿಯೋ ನೋಡಿದ ಕೆಲವರು ಅವರ ಪರ ಕಮೆಂಟ್ ಮಾಡಿದ್ದರೆ ಮತ್ತೆ ಕೆಲವರು ಬೈಯ್ದು ಕಮೆಂಟ್ ಮಾಡಿದ್ದಾರೆ.

ಜಗ್ಗೇಶ್ ಅಭಿನಯದ ‘ಮಠ’ ಚಿತ್ರದ ಮೂಲಕ ನಿರ್ದೇಶನ ಆರಂಭಿಸಿದ ಗುರುಪ್ರಸಾದ್, ಎದ್ದೇಳು ಮಂಜುನಾಥ, ಡೈರೆಕ್ಟರ್ ಸ್ಪೆಷಲ್, ಎರಡನೇ ಸಲ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಕೆಲವೊಂದು ಸಿನಿಮಾಗಳಲ್ಲಿ ಆ್ಯಕ್ಟಿಂಗ್ ಕೂಡಾ ಮಾಡಿದ್ದಾರೆ. ‘ಅದೇಮಾ’ ಹಾಗೂ ‘ರಂಗನಾಯಕ’ ಸಿನಿಮಾಗಳು ಚಿತ್ರೀಕರಣ ಹಂತದಲ್ಲಿವೆ.

-ರಕ್ಷಿತ ಕೆ.ಆರ್. ಸಾಗರ

Be the first to comment

Leave a Reply

Your email address will not be published.


*