ಕಿರುತೆರೆಯ ಜೊತೆಗೆ ಹಿರಿತೆರೆಯಲ್ಲಿಯೂ ಬ್ಯುಸಿಯಾಗಿರುವ ಹ್ಯಾಂಡ್ ಸಮ್ ಹುಡುಗರು ಇವರೇ ನೋಡಿ

ಮನೋಜ್ಞ ನಟನೆಯ ಮೂಲಕ ಚಂದನವನದಲ್ಲಿ ಮೋಡಿ ಬರುತ್ತಿರುವ ಅನೇಕರು ಬಣ್ಣದ ಪಯಣ ಶುರು ಮಾಡಿದ್ದು ಕಿರುತೆರೆಯ ಮೂಲಕ. ಹೌದು ಕಿರುತೆರೆಯ ಮೂಲಕ ಬಣ್ಣದ ನಂಟು ಬೆಳೆಸಿಕೊಂಡ ಸುದೀಪ್, ದರ್ಶನ್, ರಮೇಶ್ ಅರವಿಂದ್, ಶ್ರೀನಗರ ಕಿಟ್ಟಿ, ಗಣೇಶ್, ಯಶ್, ಡಾರ್ಲಿಂಗ್ ಕೃಷ್ಣ, ರಿಷಿ ಮುಂತಾದವರು ಇಂದು ಚಂದನವನದಲ್ಲಿ ಛಾಪು ಮೂಡಿಸುತ್ತಿದ್ದಾರೆ. ಇದೀಗ ಆ ಸಾಲಿಗೆ ಹೊಸದಾಗಿ ಸೇರಿದ ನಟರು ಯಾರೆಲ್ಲಾ ಎಂಬುದನ್ನು ತಿಳಿಯೋಣ.

ಚಂದು ಗೌಡ
ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ನಾಯಕ ಚಂದು ಆಗಿ ನಟಿಸಿ ಕಿರುತೆರೆಯಲ್ಲಿ ಮನೆ ಮಾತಾದ ಚಂದು ಗೌಡ ಮೊದಲು ನಟಿಸಿದ್ದು ಗೃಹಲಕ್ಷ್ಮಿ ಧಾರಾವಾಹಿಯಲ್ಲಿ. ತ್ರಿನಯಿನಿ ಎನ್ನುವ ತೆಲುಗು ಧಾರಾವಾಹಿಯಲ್ಲಿ ನಟಿಸುತ್ತಿರುವ ಚಂದು ಗೌಡ ಈಗಾಗಲೇ ಹಿರಿತೆರೆಗೆ ಕಾಲಿಟ್ಟಾಗಿದೆ. ಅಟೆಂಪ್ಟ್ ಟು ಮರ್ಡರ್, ಕೃಷ್ಣ ಗಾರ್ಮೆಂಟ್ಸ್, ಕುಷ್ಕ ಸಿನಿಮಾಗಳಲ್ಲಿ ನಟಿಸಿರುವ ಚಂದು ಗೌಡ ದ್ವಿಪಾತ್ರ ಎನ್ನುವ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಅಭಿನಯಸುತ್ತಿದ್ದಾರೆ.

ಶ್ರೀಮಹದೇವ್
ಚಿಟ್ಟೆ ಹೆಜ್ಜೆ ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ಚಾಕಲೇಟ್ ಹೀರೋ ಶ್ರೀಮಹಾದೇವ್ ಕೂಡಾ ಇಂದು ಹಿರಿತೆರೆಯಲ್ಲಿ ಬ್ಯುಸಿ. ಚಿಟ್ಟೆಹೆಜ್ಜೆ ನಂತರ ಶ್ರೀರಸ್ತು ಶುಭಮಸ್ತು, ನೀಲಿ, ಇಷ್ಟದೇವತೆ ಧಾರಾವಾಹಿಗಳಲ್ಲಿ ನಟಿಸಿದ ಶ್ರೀಮಹದೇವ್ ಇರುವುದೆಲ್ಲವ ಬಿಟ್ಟು ಸಿನಿಮಾದ ಮೂಲಕ ಹಿರಿತೆರೆಗೆ ಹಾರಿದರು. ಕೋಟಿಗೊಬ್ಬ 3, ಹೊಂದಿಸಿ ಬರೆಯಿರಿ ಸಿನಿಮಾದಲ್ಲಿ ನಟಿಸಿರುವ ಇವರು ಲೆಟ್ಸ್ ಬ್ರೇಕಪ್ ಎನ್ನುವ ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರೆ.

ಅರ್ಜುನ್ ಯೋಗೇಶ್
ಅರಮನೆ ಗಿಳಿ ಧಾರಾವಾಹಿಯಲ್ಲಿ ನಾಯಕ ಅರ್ಜುನ್ ಆಗಿ ನಟಿಸಿದ್ದ ಅರ್ಜುನ್ ಯೋಗೇಶ್ ಕೂಡಾ ಇದೀಗ ಹಿರಿತೆರೆಯಲ್ಲಿ ಕಮಾಲ್ ಮಾಡುತ್ತಿದ್ದಾರೆ. ಚಲಿಸುವ ಮೋಡಗಳು, ಅಮ್ಮಾ ನಿನಗಾಗಿ, ಅಕ್ಕ ಧಾರಾವಾಹಿಯಲ್ಲಿ ನಟಿಸಿರುವ ಅರ್ಜುನ್ ಮದುವೆಯ ಮಮತೆಯ ಕರೆಯೋಲೆ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು. ಏನೆಂದು ಹೆಸರಿಡಲಿ, ನನ್ನ ಪ್ರಕಾರ, ಚೇಜ್ ಸಿನಿಮಾದಲ್ಲಿ ನಟಿಸಿದ ಅರ್ಜುನ್ ಇದೀಗ ಲಾಂಗ್ ಡ್ರೈವ್ ಸಿನಿಮಾದಲ್ಲಿ ನಾಯಕರಾಗಿ ಅಭಿನಯಿಸಲಿದ್ದಾರೆ.

ವಿನಯ್ ಗೌಡ
ಚಿಟ್ಟೆ ಹೆಜ್ಜೆ ಧಾರಾವಾಹಿಯ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟ ವಿನಯ್ ಗೌಡ ಮುಂದೆ ಸಿಐಡಿ ಕರ್ನಾಟಕ, ಅಂಬಾರಿ, ಅಮ್ಮ, ಹರಹರ ಮಹಾದೇವ, ಜೈ ಹನುಮಾನ್, ಉಘೇ ಉಘೇ ಮಾದೇಶ್ವರ, ಬಯಸದೇ ಬಳಿ ಬಂದೆ, ಯಡಿಯೂರು ಶ್ರೀಸಿದ್ಧಲಿಂಗೇಶ್ವರ ಸೇರಿದಂತೆ ಸಾಲು ಸಾಲು ಧಾರಾವಾಹಿಗಳಲ್ಲಿ ನಟಿಸಿದ್ದ ವಿನಯ್ ಗೌಡ ರಾಕೆಟ್ ಸಿನಿಮಾದ ಮೂಲಕ ಹಿರಿತೆರೆಗೆ ಪಾದಾರ್ಪಣೆ ಮಾಡಿದರು. ಮುಂದೆ ಪೊಗರು, ಶಿವಾಜಿ ಸುರತ್ಕಲ್, ಅವನಿಲ್ಲಿ ಇವಳಿಲ್ಲಿ ಸಿನಿಮಾಗಳಲ್ಲಿ ನಟಿಸಿದ ವಿನಯ್ ಸದ್ಯ ಕೈಮರ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

ಕಿರಣ್ ರಾಜ್
ದೇವತೆ ಧಾರಾವಾಹಿಯ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಕಿರಣ್ ರಾಜ್ ಮನೆ ಮಾತಾಗಿದ್ದು ಕಿನ್ನರಿ ಧಾರಾವಾಹಿಯಲ್ಲಿ ನಾಯಕ ನಕುಲ್ ಆಗಿ. ಸದ್ಯ ಕನ್ನಡತಿ ಧಾರಾವಾಹಿಯಲ್ಲಿ ನಾಯಕ ಹರ್ಷ ಆಗಿ ಮೋಡಿ ಮಾಡುತ್ತಿರುವ ಈತ ಕಿರುತೆರೆಯ ಜೊತೆಗೆ ಹಿರಿತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಕಿರಣ್ ರಾಜ್ ಅಸತೋಮಾ ಸದ್ಗಮಯ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು. ಮುಂದೆ ಮಾರ್ಚ್ 22 ಸಿನಿಮಾದಲ್ಲಿ ನಟಿಸಿದ ಕಿರಣ್ ರಾಜ್ ಬಹದ್ದೂರ್ ಗಂಡು, ಬಡ್ಡೀಸ್, ಚತುಷ್ಪಥ, ವಿಕ್ರಮ್ ಗೌಡ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.
– ಅಹಲ್ಯಾ

Be the first to comment

Leave a Reply

Your email address will not be published.


*