ಸದ್ದಿಲ್ಲದೆ ನಿರ್ದೇಶಕನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಣೇಶ್ ಸಿನಿಮಾ ನಾಯಕಿ

ಸದ್ಯದ ಪರಿಸ್ಥಿತಿಯಲ್ಲಿ ಮದುವೆ ಸೇರಿದಂತೆ ಇನ್ನಿತರ ಸಮಾರಂಭಗಳು, ಇತರ ಕಾರ್ಯಕ್ರಮಗಳನ್ನು ಅದ್ಧೂರಿಯಾಗಿ ಮಾಡುವಂತಿಲ್ಲ. ಕೊರೊನಾ ಲಾಕ್​ಡೌನ್ ಎಲ್ಲಕ್ಕೂ ಬ್ರೇಕ್ ನೀಡಿದೆ. 4-5 ತಿಂಗಳ ಹಿಂದೆ ಕಲ್ಯಾಣ ಮಂಟಪ ಬುಕ್ ಮಾಡಿದ್ದವರು ಲಾಕ್​ಡೌನ್ ಕಾರಣದಿಂದ ಕ್ಯಾನ್ಸಲ್ ಮಾಡಿಕೊಂಡು ಈಗ ಬಹಳ ಸರಳವಾಗಿ ಮನೆಯಲ್ಲೇ ಮದುವೆಯಾಗುತ್ತಿದ್ದಾರೆ. ಇದರಿಂದ ಒಂದು ಕಡೆ ಛತ್ರದವರು, ಅಡುಗೆಯವರು, ಮಂಗಳ ವಾದ್ಯದವರಿಗೆ, ಡೆಕೊರೇಷನ್ ಮಾಡುವವರಿಗೆ ಲಾಸ್ ಆಗುತ್ತಿದೆ. ಮತ್ತೊಂದೆಡೆ ಸರಳ ಮದುವೆಯಿಂದ ಹೆಣ್ಣು ಹೆತ್ತವರಿಗೆ ಉಳಿತಾಯ ಆಗುತ್ತಿದೆ. ದೊಡ್ಡ ಪ್ಯಾಲೇಸ್, ಡೆಸ್ಟಿನೇಷನ್​​​ ವೆಡ್ಡಿಂಗ್, ಅದ್ಧೂರಿ ಸೆಟ್ ಹಾಕಿಸಿ ವಿಜೃಂಭಣೆಯಿಂದ ಮದುವೆಯಾಗುತ್ತಿದ್ದ ಸಿನಿಮಾ ಸ್ಟಾರ್​​ಗಳು ಕೂಡಾ ಇದೀಗ ಕುಟುಂಬಸ್ಥರು ಸೇರಿದಂತೆ ಕೆಲವೇ ಕೆಲವರ ಸಮ್ಮುಖದಲ್ಲಿ ಸರಳವಾಗಿ ಮದುವೆಯಾಗುತ್ತಿದ್ದಾರೆ. ಕಳೆದ ಬಾರಿ ಲಾಕ್​ಡೌನ್​​ನಲ್ಲಿ ಕೂಡಾ ಬಹಳ ಸಿನಿಮಾ ಮಂದಿ ವೈವಾಹಿಕ ಬಂಧನಕ್ಕೆ ಒಳಗಾಗಿದ್ದರು.

ಕಳೆದ ಭಾನುವಾರವಷ್ಟೇ ಬಹುಭಾಷಾ ನಟಿ ಪ್ರಣಿತಾ ಸುಭಾಷ್​ ಸದ್ದಿಲ್ಲದೆ ಮದುವೆಯಾಗಿದ್ದರು. ಮರುದಿನ ಅವರು ಈ ವಿಚಾರವನ್ನು ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದರು. ಇದೀಗ ಯಾಮಿ ಗೌತಮ್ ಕೂಡಾ ಅದೇ ದಾರಿ ಹಿಡಿದಿದ್ದಾರೆ. ‘ಉಲ್ಲಾಸ ಉತ್ಸಾಹ’ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ನಟಿಸಿದ್ದ ಯಾಮಿ ಗೌತಮ್ ಎಲ್ಲರಿಗೂ ನೆನಪಿರಬಹುದು. ಈ ನಟಿ ಶುಕ್ರವಾರ ತಾವು ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದ ಆದಿತ್ಯ ಧಾರ್ ಎಂಬುವವರನ್ನು ವರಿಸಿದ್ದಾರೆ.

ಯಾಮಿ ತಮಗೆ ಮದುವೆ ಗೊತ್ತಾಗಿರುವ ವಿಚಾರವನ್ನು ಇದಕ್ಕೂ ಮುನ್ನ ಯಾರಿಗೂ ತಿಳಿಸಿರಲಿಲ್ಲ. ಶುಕ್ರವಾರ ಸಂಜೆ ತಮ್ಮ ಮೆಹಂದಿ ಶಾಸ್ತ್ರ ಹಾಗೂ ಮದುವೆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಾಗಲೇ ಯಾಮಿ ಮದುವೆ ವಿಚಾರ ಎಲ್ಲರಿಗೂ ತಿಳಿದದ್ದು. ಆದಿತ್ಯ ಧಾರ್ ಕೂಡಾ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಅನೇಕ ಸಿನಿಮಾಗಳಿಗೆ ಅವರು ಸಂಭಾಷಣೆ ಹಾಗೂ ಸಾಹಿತ್ಯ ಬರೆದಿದ್ದಾರೆ. ಅಷ್ಟೇ ಅಲ್ಲ, 2019 ರಲ್ಲಿ ಬಿಡುಗಡೆಯಾದ ‘ಉರಿ’ ಸಿನಿಮಾವನ್ನು ನಿರ್ದೇಶಿಸಿದ್ದು ಇದೇ ಆದಿತ್ಯ ಧಾರ್.

ಕುಟುಂಬದ ಸದಸ್ಯರ ಆಶೀರ್ವಾದದೊಂದಿಗೆ ಇಂದು ನಾವು ಮದುವೆಯಾಗಿದ್ದೇವೆ. ಕುಟುಂಬಸ್ಥರು ಹಾಗೂ ಕೆಲವೇ ಆಪ್ತರ ಸಮ್ಮುಖದಲ್ಲಿ ಸಮಾರಂಭ ನೆರವೇರಿದೆ. ಜೀವನದ ಹೊಸ ಹಂತಕ್ಕೆ ಕಾಲಿಟ್ಟಿದ್ದೇನೆ. ನಿಮ್ಮೆಲ್ಲರ ಆಶೀರ್ವಾದ ಹಾಗೂ ಪ್ರೀತಿ ನನ್ನ ಮೇಲೆ ಸದಾ ಇರಲಿ. ನಿಮ್ಮ ಪ್ರೀತಿಯ ಯಾಮಿ ಹಾಗೂ ಆದಿತ್ಯ ಎಂದು ಯಾಮಿ ಗೌತಮ್ ಬರೆದುಕೊಂಡಿದ್ದಾರೆ. ಯಾವುದೇ ಸುಳಿವು ಇಲ್ಲದೆ ಯಾಮಿ ಮದುವೆ ವಿಚಾರ ತಿಳಿದ ಅಭಿಮಾನಿಗಳು ಶಾಕ್ ಆಗಿದ್ದಾರೆ. ಆದರೂ ಮೆಚ್ಚಿನ ನಟಿ ವೈವಾಹಿಕ ಜೀವನ ಚೆನ್ನಾಗಿರಲಿ ಎಂದು ಶುಭ ಕೋರಿದ್ಧಾರೆ. ಚಿತ್ರರಂಗದ ಗಣ್ಯರು ಕೂಡಾ ಯಾಮಿಗೆ ವಿಶ್ ತಿಳಿಸಿದ್ದಾರೆ.

ಹಿಂದಿ ಕಿರುತೆರೆ ಮೂಲಕ ಆ್ಯಕ್ಟಿಂಗ್ ಕರಿಯರ್ ಆರಂಭಿಸಿದ ಯಾಮಿ ಗೌತಮ್ ಫೇರ್​ ಅ್ಯಂಡ್​​ ಲವ್ಲಿ, ಇಮಾಮಿ ಹೇರ್ ಆಯಿಲ್, ಮಿರಿಂಡಾ ಸೇರಿ ಅನೇಕ ಟಿವಿ ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಗಣೇಶ್ ಜೊತೆ ಉಲ್ಲಾಸ ಉತ್ಸಾಹ ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡದಿಂದ ಸಿನಿ ಕರಿಯರ್ ಆರಂಭಿಸಿದ ಯಾಮಿ ಗೌತಮ್ ಹಿಂದಿ, ಪಂಜಾಬಿ, ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯಕ್ಕೆ ಅವರು ಹಿಂದಿಯ ಭೂತ್ ಪೊಲೀಸ್, ದಸ್ವಿ, ಎ ಥರ್ಸ್​ಡೇ ಎಂಬ ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ.

-ರಕ್ಷಿತ ಕೆ.ಆರ್. ಸಾಗರ

Be the first to comment

Leave a Reply

Your email address will not be published.


*