ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಮಗಳೇ ನನ್ನ ಶಕ್ತಿ ಎಂದ ಶ್ರುತಿ ಹರಿಹರನ್.

ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿ ಅನೇಕ ಸೆಲೆಬ್ರಿಟಿಗಳು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ನಟಿ ಶ್ರುತಿ ಹರಿಹರನ್ ಕೂಡಾ ಇದಕ್ಕೆ ಹೊರತಾಗಿಲ್ಲ. ಅವರು ಈ ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ನಿಖರವಾದ ಮಾಹಿತಿಯನ್ನು, ಸಹಾಯಹಸ್ತವನ್ನು ನೀಡುವ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅವರು ಕೆಲವೊಂದು ಸೇವಾಸಂಘಟನೆಗಳನ್ನೂ ಸೇರಿಕೊಂಡು ಕಾರ್ಯಪ್ರವೃತ್ತರಾಗಿದ್ದಾರೆ. ಇತ್ತೀಚೆಗೆ ನಟಿ ವಿಡಿಯೋವೊಂದನ್ನು ಹರಿಬಿಟ್ಟಿದ್ದರು, ಅದರಲ್ಲಿ ಅವರು ಸಾಂಕ್ರಾಮಿಕದ ಸಂದರ್ಭದಲ್ಲಿ ಮೂಡಿದ ಯೋಚನೆಗಳನ್ನು ಹಂಚಿಕೊಂಡಿದ್ದರು‌. ” ಕೋವಿಡ್ ಮಹಾಮಾರಿಯು ಈ ಬಾರಿ ಹೆಚ್ಚಿನ ಹೊಡೆತವನ್ನು ನೀಡಿದೆ. ಮೊದಲನೇ ಅಲೆಯಲ್ಲಿ, ಸೋಂಕು ಪೀಡಿತರ ಸಂಖ್ಯೆ ಕಡಿಮೆಯಿತ್ತು. ನಾನೂ ವೈಯುಕ್ತಿಕವಾಗಿ ಸೋಂಕಿಗೆ ತುತ್ತಾಗಿರಲಿಲ್ಲ. ಎರಡನೇ ಅಲೆಯಲ್ಲಿ ನನ್ನ ಕುಟುಂಬದ ಮೂವರಲ್ಲಿ ಸೋಂಕು ಕಾಣಿಸಿಕೊಂಡಿತು. ಅತ್ಯಂತ ಕಠಿಣ ಪರಿಸ್ಥಿತಿ ಇದಾಗಿತ್ತು.

ಆ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ಬೆಡ್ ಸೌಕರ್ಯಗಳೂ ಸಿಗದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ನನ್ನ ಆಂಟಿ ಇನ್ನೂ ವೆಂಟಿಲೇಷನ್‌‌ನಲ್ಲಿದ್ದಾರೆ. ಅವರು ಶೀಘ್ರವೇ ಮರಳುತ್ತಾರೆ ಅನ್ನೋ ಭರವಸೆ ಇದೆ. ನಾವು ಮನೆಯಲ್ಲಿ ನಾಲ್ಕು ಗೋಡೆಗಳ ಮಧ್ಯೆ ಇರೋವಾಗ ಹೊರಜಗತ್ತಿನ ಪರಿವೇ ಇರುವುದಿಲ್ಲ‌.ಆದ್ರೆ ಹೊರಗೊಮ್ಮೆ ಕಣ್ಣಾಯಿಸಿದಾಗ ತುಂಬಾನೇ ಭಯಾನಕವಾಗಿದೆ” ಎಂದು ಶ್ರುತಿ ವಿವರಿಸುತ್ತಾರೆ. ತಮ್ಮ ಮಗಳು ಜಾನಕಿ ಜೊತೆ ಕ್ಷಣಗಳನ್ನು ಕಳೆಯುವ ಮೂಲಕ ಸಂತೋಷದಿಂದ ಇರುವುದಾಗಿ ಶ್ರುತಿ ಹೇಳಿಕೊಂಡಿದ್ದಾರೆ. ” ನಾನು ನನ್ನ ಮಗಳಿಂದ ಯಾವುದೇ ಭಾವನೆಗಳನ್ನು ಬಚ್ಚಿಡುವುದಿಲ್ಲ.

ಮನಸ್ಸಿಗೆ ತುಂಬಾ ನೋವಾಗಿದ್ದಾಗ ನಾನು ಅವಳನ್ನು ಗಟ್ಟಿಯಾಗಿ ತಬ್ಬಿಕೊಂಡು ಅತ್ತೇ ಬಿಟ್ಟಿದ್ದೆ. ಅವಳು ತನ್ನದೇ ವಿಧಾನಗಳ ಮೂಲಕ ನನ್ನನ್ನು ಸಮಾಧಾನಪಡಿಸುವಲ್ಲಿ ತೊಡಗುತ್ತಾಳೆ. ಅವಳು ನಮಗೆ ಮಾನಸಿಕ, ದೈಹಿಕ ಹಾಗೂ ಭಾವನಾತ್ಮಕವಾಗಿ ದೊಡ್ಡ ಶಕ್ತಿ” ಎಂದು ಶ್ರುತಿ ಹೇಳಿಕೊಂಡಿದ್ದಾರೆ. “ನಮಗೆ ಆಧಾರ ಸ್ಥಂಭದ ರೀತಿಯಾಗಿ ಜಾನಕಿ ಇದ್ದರೂ ಅವಳನ್ನು ಮನೆಯಲ್ಲೇ ಬಂಧಿಸಿಡುವುದು ಅತ್ಯಂತ ಕಠಿಣಕರ ಕೆಲಸ‌. ಆದರೆ ಅದಕ್ಕೂ ಪರಿಹಾರವನ್ನು ಕಂಡುಹಿಡಿದಿದ್ದೇವೆ. ನಾವು ವಾಸಿಸೋ ಅಪಾರ್ಟ್ ಮೆಂಟ್‌ನ ಮೇಲ್ಗಡೆಯ ಟೆರೇಸ್‌ಗೆ ಅವಳನ್ನು ಕರೆದುಕೊಂಡು ಹೋಗುತ್ತೇನೆ. ನಮಗೆ ಸಂಪರ್ಕದಲ್ಲಿರೋದಿಕ್ಕೆ ಸಾಧ್ಯವಾಗೋದು ಪಕ್ಕದ ಮನೆಯವರು ಹಾಗೂ ಅವರ ಮೂರು ವರ್ಷದ ಮಗಳ ಜೊತೆ ಮಾತ್ರ.

ಅವರಿಬ್ಬರೂ ಉತ್ತಮ ಸ್ನೇಹಿತೆಯರು. ನನ್ನ ಅಮ್ಮ ಕೂಡಾ ಪಕ್ಕದಲ್ಲೇ ಇರೋದರಿಂದ ಇನ್ನೊಂದು ಜೀವದ ಸಾಮೀಪ್ಯ ಮಗಳಿಗಾಗುತ್ತದೆ” ಎಂದು ಶ್ರುತಿ ಹಂಚಿಕೊಳ್ಳುತ್ತಾರೆ. “ಸೆಲೆಬ್ರಿಟಿಯಾಗಿ, ಜನರ ಮೇಲೆ ಪ್ರಭಾವ ಬೀರುವ ಸಾಮರ್ಥ್ಯ ಉಳ್ಳವಳಾಗಿ ಈ ಸಮಯದಲ್ಲಿ ಒಂದಿಷ್ಟು ಸಹಾಯ ಮಾಡಲು ಆಗುತ್ತಿರುವುದು ಸಂತೋಷದ ವಿಚಾರ. ಯಾವತ್ತೂ ಅಧಿಕಾರ ಹಾಗೂ ಹೆಸರಿನ ಜೊತೆಗೆ ಜವಾಬ್ದಾರಿಗಳು ಕೂಡಾ ಬರುತ್ತವೆ. ಜನರು ನಮ್ಮ ಸಾಮಾಜಿಕ ಜಾಲತಾಣಗಳ ಪೇಜ್‌ಗಳನ್ನು ಮಾಹಿತಿಗಳಿಗಾಗಿ ಹಿಂಬಾಲಿಸುತ್ತಿರುತ್ತಾರೆ.

ಹಲವು ಸೆಲೆಬ್ರಿಟಿಗಳು ನಿಜಕ್ಕೂ ಉತ್ತಮ ಕಾರ್ಯಗಳನ್ನು ಕೈಗೊಳ್ಳುತ್ತಿದ್ದಾರೆ‌. ಸಂಯುಕ್ತಾ ಹೊರನಾಡು, ಶ್ರದ್ಧಾ ಶ್ರೀನಾಥ್ ಹಾಗೂ ಬೀಟ್‌ಬಾಕ್ಸರ್ ವಿನೀತ್ ವಿನ್ಸೆಂಟ್, ಮೊದಲಾದವರಿಂದ ಸಾಮಾಜಿಕ‌ ಜಾಲತಾಣವನ್ನು ಮಾಧ್ಯಮವಾಗಿಟ್ಟುಕೊಂಡು ಅನೇಕ ಕೆಲಸಗಳು ನಡೆಯುತ್ತಿವೆ ನಿಜಕ್ಕೂ ಪ್ರೇರಣಾದಾಯವಾಗಿದೆ. ಅದನ್ನು ಸ್ಕ್ರೀನ್‌ಶಾಟ್ ತೆಗೆದು ಹಂಚಿಕೊಳ್ಳಲು ಮಾತ್ರ ನನಗೆ ಸಾಧ್ಯ. ಹಲವಾರು ಬಾರಿ ನಾನು ಎಲ್ಲಾ ಜಂಜಾಟಗಳಿಂದ ಹಿಂದುಳಿದಿದ್ದೇನೆ. ಅದು ಮನಸ್ಸಿನ ನೆಮ್ಮದಿಗಾಗಿ, ಹಾಗೂ ನನ್ನ ಮಗಳ ಬಗ್ಗೆ ಗಮನ ಹರಿಸಬೇಕಾದ ಅವಶ್ಯಕತೆಯೂ ಇದೆ”, ಎಂದು ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಾರೆ.‌

ಶ್ರುತಿ ಹಂಚಿಕೊಂಡ ಇನ್ನೊಂದು ಪ್ರಮುಖ ಮಾಹಿತಿಯೆಂದರೆ ಅದು ವ್ಯಾಕ್ಸಿನೇಷನ್‌ ಬಗ್ಗೆ.‌ ಪ್ರಮುಖವಾಗಿ ತಾಯಂದಿರು ಲಸಿಕೆ ಪಡೆದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಶ್ರುತಿ ಕೂಡಾ ಲಸಿಕೆಯನ್ನು ಇತ್ತೀಚೆಗಷ್ಟೇ ತೆಗೆದುಕೊಂಡಿದ್ದಾರೆ. “ಭಾರತ ಸರ್ಕಾರವು ಮೊದಲು ತಂದಿದ್ದ ಹಾಲುಣಿಸುವ ತಾಯಂದಿರು ಹಾಗೂ ಗರ್ಭಿಣಿ ಮಹಿಳೆಯರು ಲಸಿಕೆ ಪಡೆದುಕೊಳ್ಳಬಾರದೆಂಬ ನಿಯಮಗಳಲ್ಲಿ ಸಣ್ಣ ಬದಲಾವಣೆ ತಂದು, ಹಾಲುಣಿಸುವ ತಾಯಂದಿರು ವ್ಯಾಕ್ಸಿನ್ ಪಡೆದುಕೊಳ್ಳಬಹುದು ಎಂದು ಹೇಳಿದೆ. ವೈದ್ಯರು ತೆಗೆದುಕೊಳ್ಳಬಾರದು ಎಂಬ ಸಲಹೆ ನೀಡಿದರೆ ಮಾತ್ರ ತೆಗೆದುಕೊಳ್ಳಿ. ಹಾಗಾಗಿ ಭಯಭೀತರಾಗದೆ ಲಸಿಕೆ ಪಡೆದುಕೊಳ್ಳಿ ಎಂದು ಹೇಳಿದ್ದಾರೆ.
– ಅಹಲ್ಯಾ

Be the first to comment

Leave a Reply

Your email address will not be published.


*