ನಟನೆಯ ಹೊರತಾಗಿ ಪೋಟೋಗ್ರಫಿಯಲ್ಲಿ ಆಸಕ್ತಿ ಹೊಂದಿರುವ ಹ್ಯಾಂಡ್ ಸಮ್ ನಟ ಯಾರು ಗೊತ್ತಾ?

ಬಣ್ಣದ ಲೋಕಕ್ಕೆ ಅನೇಕ ಕನಸುಗಳನ್ನಿಟ್ಟುಕೊಂಡು ರಂಗಪ್ರವೇಶ ಮಾಡುವ ಹಲವಾರು ಪ್ರತಿಭೆಗಳು ನಮ್ಮ ನಡುವಿದ್ದಾರೆ‌. ಆದರೆ ಅವರಿಗೆ ತಮ್ಮ ಮೊದಲ ಪ್ರಯತ್ನದಲ್ಲೇ ಹಿರಿತೆರೆಯಲ್ಲಿ ಅವಕಾಶ ಸಿಗಬೇಕೇನೆಂದಿಲ್ಲ. ಅನೇಕ ಸವಾಲುಗಳು, ಹಂತಗಳನ್ನು ದಾಟಿ ಮುಂದುವರಿಯಬೇಕಾಗುತ್ತದೆ. ಇಂತಹ ಕನಸುಗಳನ್ನಿಟ್ಟುಕೊಂಡು ನಟನಾಲೋಕಕ್ಕೆ ಎಂಟ್ರಿ ಕೊಟ್ಟವರು ಉದಯ ಟಿವಿಯ ‘ಕಾವ್ಯಾಂಜಲಿ’ ಧಾರವಾಹಿ ಖ್ಯಾತಿಯ ಸಿಧ್ಧಾಥ್೯ ಅರಸ್. ಉದಯದ ‘ಕಣ್ಮಣಿ’, ಕಲಸ್೯ ಕನ್ನಡದಲ್ಲಿ ‘ಪದ್ಮಾವತಿ’, ತಮಿಳಿನ ‘ಅರುಂಧತಿ’ ಎಂಬ ಧಾರವಾಹಿಯಲ್ಲಿ ಇವರು ನಟಿಸಿರುವ ದರ್ಶಕ್ ಗೌಡ ಸದ್ಯ ಕಾವ್ಯಾಂಜಲಿ ಧಾರಾವಾಹಿಯ ಸಿದ್ಧಾರ್ಥ್ ಅರಸ್ ಆಗಿ ಮೋಡಿ ಮಾಡುತ್ತಿದ್ದಾರೆ. “ಕಿರುತೆರೆಗೆ ಬರುವ ಯಾವುದೇ ಯೋಜನೆಗಳಿರಲಿಲ್ಲ. ನಿರ್ದೇಶಕರೊಬ್ಬರು ನಾನು ಹೊಸ ಮುಖ ಆಗಿರೋದರಿಂದ ಯಾವುದೇ ನಿರ್ಮಾಪಕರು ನನ್ನ ಮೇಲೆ ಹಣ ಹೂಡಲು ತಯಾರಿರುವುದಿಲ್ಲ. ನಿನ್ನಲ್ಲಿರುವ ಪ್ರತಿಭೆಯನ್ನು ಹೊರಜಗತ್ತಿಗೆ ತಿಳಿಯಪಡಿಸು, ಟಿವಿಯಲ್ಲಿ ಮೊದಲಿಗೆ ಅವಕಾಶ ದೊರೆಕಬಹುದು ಎಂದು ಸಲಹೆ ನೀಡಿದರು. ಅಲ್ಲಿಂದ ಹಲವಾರು ಕಿರುತೆರೆ ಧಾರವಾಹಿಗಳ ಆಡಿ‌ಷನ್‌ಗಳಲ್ಲಿ ಭಾಗವಹಿಸಿದೆ. ಆ ಹಾದಿ ಅಷ್ಟೇನೂ ಸುಲಭವಾಗಿರಲಿಲ್ಲ.

ಸತತ ಪರಿಶ್ರಮದ ನಂತರ ಪಾತ್ರಗಳು ದೊರಕಲಾರಂಭಿಸಿದವು. ಹೆಚ್ಚಾಗಿ ನೆಗೆಟಿವ್ ಪಾತ್ರಗಳಲ್ಲೇ ನಟಿಸಿರುವ ನಾನು ಇದೀಗ ಮೊದಲ ಬಾರಿಗೆ ಪಾಸಿಟಿವ್ ಪಾತ್ರವೊಂದರಲ್ಲಿ ಬಣ್ಣ ಹಚ್ಚುತ್ತಿದ್ದೇನೆ. ಕಲಾವಿದನಾಗಿ ಹೊರಹೊಮ್ಮಬೇಕೆಂಬ ಹಂಬಲ ಇತ್ತೇ ಹೊರತು ಹೀರೋವಾಗಿ ಯಾವತ್ತೂ ಸಾದರಪಡಿಸಿಕೊಳ್ಳಬೇಕು ಎನ್ನುವ ಅಭಿಲಾಷೆ ಇರಲಿಲ್ಲ. ಆದರೆ ಅಭಿನಯದ ದೃಷ್ಟಿಯಿಂದ ನೋಡೋದಾದರೆ ಕ್ಲಿಷ್ಟಕರವಾದ ಪಾತ್ರವೊಂದನ್ನು ನಿಭಾಯಿಸುವ ಇರಾದೆ ಇದೆ” ಎಂದು ಹೇಳುತ್ತಾರೆ ನಟ ದರ್ಶಕ್ ಗೌಡ.

ಮೆಕಾನಿಕಲ್ ಇಂಜಿನಿಯರಿಂಗ್ ವಿದ್ಯಾಭ್ಯಾಸವನ್ನು ಪೂರೈಸಿರುವ ದರ್ಶಕ್ ತಮಗೆ ಉನ್ನತ ಕೆಲಸದ ಆಫರ್‌ಗಳು ಬಂದರೂ ಅವನ್ನು ತೊರೆದು ಅಭಿನಯಕ್ಕೆ ಎಂಟ್ರಿ ಕೊಟ್ಟರು. ಬಿಇ ಮಾಡೋವಾಗಲೇ ಸೃಜನಶೀಲವಾಗಿ ತನ್ನನ್ನು ತೊಡಗಿಸಿಕೊಳ್ಳಬೇಕೆಂದು ದರ್ಶಕ್ ಬಯಸಿದ್ದರು. ಆದರೆ ಅವರ ತಂದೆಗೆ ಮಗನನ್ನು ಜರ್ಮನಿಗೆ ಉನ್ನತ ವಿದ್ಯಾಭ್ಯಾಸಕ್ಕಾಗಿ ಕಳುಹಿಸಬೇಕೆನ್ನುವ ಆಶಯ ಇತ್ತು. ಅದಾಗ್ಯೂ ದರ್ಶಕ್ ದೇಶದಲ್ಲೇ ಎಂಟೆಕ್ ಪ್ರವೇಶ ಪರೀಕ್ಷೆ ಬರೆದು ಸೀಟು ಗಿಟ್ಟಿಸಿಕೊಂಡರು. ನಂತರ ಅನೇಕ ನಿರ್ದೇಶಕರುಗಳ- ಕಥೆಗಾರರ ಜೊತೆ ಭೇಟಿ- ಮಾತುಕತೆ ನಡೆದು ಇವರ ಕನಸಿಗೆ ರೆಕ್ಕೆ ಮೂಡಲು ಪ್ರಾರಂಭವಾಯಿತು. ಈ ಮಧ್ಯೆ ಎರಡು ಕಂಪೆನಿಗಳಲ್ಲಿ ಕೆಲಸ ಬದಲಾಯಿಸಿದರು. ಆದರೆ ಕೆಲಸದ ಒತ್ತಡದ ನಡುವೆ ತಮ್ಮ ಗುರಿಗೆ ಸಮಯ ನೀಡಲಾಗದೆ ಆದಾಯದ ಮೂಲವನ್ನೇ ತೊರೆಯಲು ನಿರ್ಧರಿಸಿದರು. ಮನೆಯವರು ಇದರ ಬಗ್ಗೆ ಆತಂಕ ವ್ಯಕ್ತಪಡಿಸಿದಾಗಲೂ ತನ್ನ ದೃಢ ನಿಶ್ಚಯದಿಂದ ಅವರ ಮನಸ್ಸನ್ನೂ ಬದಲಾಯಿಸುವಲ್ಲಿ ಯಶಸ್ವಿಯಾದರು.

ಇಷ್ಟೆಲ್ಲಾ ಫೋಕಸ್ಡ್ ಆಗಿರುವ ನಟ ಬರೀ ಅಭಿನಯದಲ್ಲಿ ಮಾತ್ರವಲ್ಲ ಫೋಟೋಗ್ರಾಫಿಯಲ್ಲೂ ಆಸಕ್ತಿ ಬೆಳೆಸಿಕೊಂಡಿದ್ದಾರೆ. “ಗೆಳೆಯನೊಬ್ಬ ಕಿರುಚಿತ್ರವನ್ನು ನಿರ್ಮಿಸುತ್ತಿದ್ದ. ನಾನು ಕಂಪೆನಿಯಲ್ಲಿ ವಕ್೯ ಮಾಡುತ್ತಿದ್ದಾಗ, ವೀಕೆಂಡ್ ಸಮಯದಲ್ಲಿ ಕ್ಯಾಮರಾ ಕೆಲಸದಲ್ಲಿ ಅವನ ಜೊತೆ ಕೈಜೋಡಿಸುತ್ತಿದ್ದೆ. ಅಲ್ಲಿ ಕಲಿಕೆಗೆ ಅನೇಕ ಅವಕಾಶಗಳು ಸಿಕ್ಕವು. ಕ್ಯಾಮರಾ ಕಣ್ಣಿನ ಹಿಂದೆ ಎಷ್ಟು ಪರಿಶ್ರಮ ಇದೆ ಅನ್ನೋದು ಆ ಅನುಭವದಿಂದ ತಿಳಿಯಿತು. ಆದರೆ ನಾನು ಎಡಿಟಿಂಗ್‌ನಲ್ಲಿ ಅಷ್ಟಾಗಿ ಪಳಗಿಲ್ಲ” ಎಂದು ಹೇಳುತ್ತಾರೆ ದರ್ಶಕ್.

ಇನ್ನು ಸಿನೆಮಾದಲ್ಲಿ ಕಾಣಿಸಿಕೊಳ್ಳುವ ವಿಚಾರದ ಬಗ್ಗೆ ದರ್ಶಕ್ ತಮ್ಮ ಮನದ ಮಾತನ್ನು ಈ ರೀತಿಯಾಗಿ ಬಿಚ್ಚಿಡುತ್ತಾರೆ. ” ಒಂದೆರಡು ಸಿನೆಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಎಲ್ಲಾ ಪೂರ್ವಾಭಾವಿ ತಯಾರಿಗಳೂ ನಡೆದಿದ್ದವು. ಆದರೆ ಕೊರೋನಾದಿಂದಾಗಿ ಲಾಕ್‌ಡೌನ್ ಹೇರಿದ್ದರಿಂದ ಎಲ್ಲಾ ಕೆಲಸಗಳೂ ಅಲ್ಲೇ ನಿಂತಿವೆ” ಎಂದು ಹೇಳುತ್ತಾರೆ. ಇದರ ಜೊತೆಗೆ ವರ್ಕೌಟ್ ಹಾಗೂ ಇತರೆ ತಾಲೀಮುಗಳನ್ನು ನಿಯಮಿತವಾಗಿ ಮಾಡುತ್ತಿರುವ ನಟ ಸಿದ್ಧಾಥ್೯ ತಮ್ಮ ಫಿಟ್‌ನೆಸ್ ಕುರಿತಾಗಿಯೂ ಕಾಳಜಿ ಹೊಂದಿದ್ದಾರೆ.
– ಅಹಲ್ಯಾ

Be the first to comment

Leave a Reply

Your email address will not be published.


*