ಕನ್ನಡದಲ್ಲಿ ಮಾತನಾಡುವಂತೆ ಅಲೆಕ್ಸಾಗೆ ತಾಕೀತು ಮಾಡಿದ ಸ್ಯಾಂಡಲ್​ವುಡ್ ನಿರ್ದೇಶಕನ 3 ವರ್ಷದ ಮಗು…ವಿಡಿಯೋ ನೋಡಿ..!

ಕಳೆದ ಎರಡು ದಿನಗಳಿಂದ ಕನ್ನಡಿಗರ ಆಕ್ರೋಶ ಭುಗಿಲೆದ್ದಿತ್ತು. ಗೂಗಲ್​​​​ನಲ್ಲಿ ನಮ್ಮ ಕನ್ನಡ ಭಾಷೆಗೆ ಅಪಮಾನ ಮಾಡಿದ್ದೇ ಇದಕ್ಕೆ ಕಾರಣ. ಗೂಗಲ್​​​​​ನ ಎಲ್ಲಾ ಮಾಹಿತಿಗಳು ಸರಿಯಾಗಿರುತ್ತದೆ ಎಂದು ಹೇಳಲಾಗುವುದಿಲ್ಲ. ಇಂತಹ ಸಾಕಷ್ಟು ತಪ್ಪುಗಳು ಗೂಗಲ್​​​ನಿಂದ ಆಗಿದೆ. ಆದರೆ ಕನ್ನಡಕ್ಕೆ ಗೂಗಲ್​​​ನಿಂದ ಅಪಮಾನವಾಗಿದ್ದಂತೂ ಎಂದೂ ಕ್ಷಮಿಸಲಾರದ ತಪ್ಪು. ಈ ವಿಚಾರ ವೈರಲ್ ಆಗುತ್ತಿದ್ದಂತೆ ಪ್ರತಿ ಕನ್ನಡಿಗರೂ ಸಿಡಿದೆದ್ದರು. ಗೂಗಲ್​​​​​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ರಿಪೋರ್ಟ್ ಮಾಡಲು ಆರಂಭಿಸಿದರು. ಅಷ್ಟೇ ಅಲ್ಲ, ಟ್ವಿಟ್ಟರ್​​ನಲ್ಲಿ
#queenoflanguagesಹಾಗೂ #kannada ಟ್ರೆಂಡಿಂಗ್​​​ನಲ್ಲಿತ್ತು. ರಾಜ್ಯ ಸರ್ಕಾರ ಕೂಡಾ ಗೂಗಲ್ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿತ್ತು. ಇದಾದ ಸ್ವಲ್ಪ ಸಮಯದ ಬಳಿಕ ಕನ್ನಡದ ಬಗ್ಗೆ ಅಪಮಾನ ಮಾಡಲಾಗಿದ್ದ ಪೇಜನ್ನು​​​​​​​​​​​​​​​​ ಗೂಗಲ್​​​ನಿಂದ ತೆಗೆದುಹಾಕಲಾಗಿದೆ. ಇದೀಗ ಕನ್ನಡ ‘ಭಾಷೆಗಳ ರಾಣಿ’ ಎಂಬ ವಿಚಾರ ಕನ್ನಡಿಗರಿಗೆ ಖುಷಿ ನೀಡಿದೆ.

ವೆಬ್​​ಸೈಟ್​​​​​ವೊಂದು ಕನ್ನಡ ಭಾಷೆಗೆ ಈ ರೀತಿ ಅಪಮಾನ ಮಾಡಿದ್ದು ಗೂಗಲ್ ಕೂಡಾ ಅದನ್ನು ಅನುಸರಿಸುತ್ತಿದ್ದುದೇ ಇಷ್ಟೆಲ್ಲಾ ಸಮಸ್ಯೆಗೆ ಕಾರಣವಾಯ್ತು. ಆದ್ದರಿಂದ ಆ ವೆಬ್​​ಸೈಟ್ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿ change.orgಯಲ್ಲಿ ಸಹಿ ಸಂಗ್ರಹ ಕೂಡಾ ಮಾಡಲಾಗಿತ್ತು. ಇದೀಗ ಗೂಗಲ್, ಕನ್ನಡಿಗರ ಬಳಿ ಕ್ಷಮೆ ಕೇಳಿದೆ. ”ಹುಡುಕುವುದು ಯಾವಾಗಲೂ ಪರಿಪೂರ್ಣವಾಗಿರುವುದಿಲ್ಲ. ಯಾವುದೇ ತಪ್ಪು ನಮ್ಮ ಗಮನಕ್ಕೆ ಬಂದ ಕೂಡಲೇ ನಾವು ಅದರ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ಕನ್ನಡಿಗರ ಭಾವನೆಗಳಿಗೆ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ” ಎಂದು ಕನ್ನಡದಲ್ಲೇ ಟೈಪ್ ಮಾಡಲಾಗಿದ್ದ ಸಂದೇಶ ಈಗ ವೈರಲ್ ಆಗುತ್ತಿದೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್​ವುಡ್ ನಿರ್ದೇಶಕರೊಬ್ಬರ 3 ವರ್ಷದ ಮಗ, ಅಲೆಕ್ಸಾಗೆ ಕನ್ನಡದಲ್ಲಿ ಮಾತನಾಡುವಂತೆ ತಾಕೀತು ಮಾಡಿದ್ದಾನೆ. ‘ಅಲೆಕ್ಸಾ ಕನ್ನಡ ಮಾತಾಡು’ ಎಂದು ನಿರ್ದೇಶಕ ಪನ್ನಗಾಭರಣ ಪುತ್ರ ವೇದ್, ಅಲೆಕ್ಸಾಗೆ ಕಮಾಂಡ್ ಹೇಳಿದ್ದಾನೆ. ಇದಕ್ಕೆ, ‘ಕ್ಷಮಿಸಿ ನನಗೆ ಅದು ತಿಳಿದಿಲ್ಲ’ ಎಂಬ ಉತ್ತರ ಬಂದಿದೆ. ಇದನ್ನು ಕೇಳಿದ ಮಗು, ಅಷ್ಟೇನಾ…? ಎಂದಿದ್ದಾನೆ. ಮತ್ತೆ ಪ್ರತಿಕ್ರಿಯಿಸಿರುವ ಅಲೆಕ್ಸಾ, ‘ಓಕೆ ಆಮೇಲೇ ಸಿಗೋಣ ಬೈ’ ಎಂದು ಉತ್ತರಿಸಿದೆ. ‘ನಿನ್ನೆ ನಿನಗೆ ಗೊತ್ತಾಗ್ಲಿಲ್ಲ ಅಲ್ವಾ..?’ ಎಂದು ಕೊನೆಯದಾಗಿ ಆ ಮಗು ಹೇಳುವ ಮಾತು ಕೇಳಿದರೆ ನಿಜಕ್ಕೂ ಈ ಪುಟ್ಟ ಬಾಲಕನಿಗೆ ಕನ್ನಡದ ಬಗ್ಗೆ ಎಷ್ಟು ಅಭಿಮಾನ ಇದೆ ಎಂಬುದು ತಿಳಿಯುತ್ತದೆ.

ಪನ್ನಗಾಭರಣ ತಮ್ಮ ಮಗನ ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ”ವೇದ್ ಜೊತೆ ಅಲೆಕ್ಸಾ ಕನ್ನಡದಲ್ಲಿ ಮಾತನಾಡಿದಳು” ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಮಗುವಿನ ಮುದ್ದು ಮಾತಿಗೆ, ಮುಗ್ಧತೆಗೆ, ಕನ್ನಡದ ಮೇಲಿನ ಪ್ರೀತಿಗೆ ನೆಟಿಜನ್ಸ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬ ಮಾತಿನಂತೆ ಮಕ್ಕಳಿಗೆ ಈಗಿನಿಂದಲೇ ನಮ್ಮ ಭಾಷೆ, ನಮ್ಮ ಸಂಸ್ಕತಿ ಬಗ್ಗೆ ತಿಳಿಹೇಳಿದರೆ, ಮಕ್ಕಳು ಬೆಳೆಯುತ್ತಾ ಒಬ್ಬ ನಿಜವಾದ ಹೆಮ್ಮೆಯ ಕನ್ನಡಿಗನಾಗುವುದರಲ್ಲಿ ಸಂದೇಹವೇ ಇಲ್ಲ.

ಇನ್ನು ಅಮೆಜಾನ್ ಅಭಿವೃದ್ಧಿಪಡಿಸಿರುವ ಸ್ಮಾರ್ಟ್‌ ಅಸಿಸ್ಟೆಂಟ್‌ ಸಾಧನವಾದ ಅಲೆಕ್ಸಾ ಆ್ಯಪ್​​ನಲ್ಲಿ ಇಂಗ್ಲೀಷ್ ಸೇರಿದಂತೆ ಕೆಲವೇ ಕೆಲವು ಭಾಷೆಗಳನ್ನು ಸೇರಿಸಲಾಗಿದೆ. ಆದರೆ ಕರ್ನಾಟಕದಲ್ಲಿ ಸಂಪೂರ್ಣ ಕನ್ನಡವೇ ಆಡಳಿತ ಭಾಷೆಯಾಗಬೇಕು ಎಂದು ನಾವು ಆಸೆ ಪಡುವಂತೆ ಕನ್ನಡಿಗರು ಖರೀದಿಸುವ ಅಲೆಕ್ಸಾ ಆ್ಯಪ್​​​​ನಲ್ಲೂ ನಮ್ಮ ಸವಿ ಕನ್ನಡವನ್ನು ಸೇರಿಸಿದರೆ ಎಷ್ಟು ಚೆಂದ ಅಲ್ವಾ..?

-ರಕ್ಷಿತ ಕೆ.ಆರ್. ಸಾಗರ

Be the first to comment

Leave a Reply

Your email address will not be published.


*