ಹಾಲಿವುಡ್​​​ನಲ್ಲೂ ಧೂಳೆಬ್ಬಿಸಲು ಮುಂದಾದ್ರಾ ಅಪ್ಪ-ಮಗನ ಜೋಡಿ…ವಿಜಯೇಂದ್ರ ಪ್ರಸಾದ್ ಹೇಳಿದ್ದೇನು…?

ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಸಿನಿಮಾ ‘ಬಾಹುಬಲಿ’. ಈ ಚಿತ್ರಕ್ಕೆ ತಂದೆ ಕೆ.ವಿ. ವಿಜಯೇಂದ್ರ ಪ್ರಸಾದ್ ಕಥೆ ಬರೆದರೆ ನಿರ್ದೇಶನ ಮಾಡಿದ್ದು ಮಗ ಎಸ್.ಎಸ್. ರಾಜಮೌಳಿ. ಈ ಅಪ್ಪ-ಮಗನ ಜೋಡಿ ಇದಕ್ಕೂ ಮುನ್ನ ಸಾಕಷ್ಟು ಸಿನಿಮಾಗಳಲ್ಲಿ ಮೋಡಿ ಮಾಡಿದ್ದಾರೆ. ಜ್ಯೂನಿಯರ್ ಎನ್​​ಟಿಆರ್ ಅಭಿನಯದ ‘ಸಿಂಹಾದ್ರಿ’, ನಿತಿನ್ ಅಭಿನಯದ ‘ಸೈ’, ಪ್ರಭಾಸ್ ಅಭಿನಯದ ‘ಛತ್ರಪತಿ’, ರವಿತೇಜ ಅಭಿನಯದ ‘ವಿಕ್ರಮಾರ್ಕುಡು’ ಈಗ ರಾಜಮೌಳಿ ನಿರ್ದೇಶಿಸುತ್ತಿರುವ ‘ಆರ್​​ಆರ್​ಆರ್’​​​​​​​​​​​​​​​ ಸೇರಿದಂತೆ, ರಾಜಮೌಳಿ ನಿರ್ದೇಶನದ ಬಹುತೇಕ ಸಿನಿಮಾಗಳಿಗೆ ಕಥೆ ಬರೆದಿರುವುದು ಅವರ ತಂದೆ ವಿಜಯೇಂದ್ರ ಪ್ರಸಾದ್. ಭಾರತೀಯ ಸಿನಿಮಾಗಳ ಸೆನ್ಸೇಷನಲ್ ರೈಟರ್​​​​​​​​​​​​​​​​​​​​ ಎಂದೇ ಖ್ಯಾತರಾಗಿರುವ ವಿಜಯೇಂದ್ರ ಪ್ರಸಾದ್ ಹಾಗೂ ಸ್ಟಾರ್ ನಿರ್ದೇಶಕ ರಾಜಮೌಳಿ ಜೋಡಿ ಇದೀಗ ಹಾಲಿವುಡ್​​ನಲ್ಲಿ ಕೂಡಾ ಹವಾ ಸೃಷ್ಟಿಸಲು ಹೊರಟಿದೆ ಎನ್ನಲಾಗಿದೆ. ಸ್ವತ: ವಿಜಯೇಂದ್ರ ಪ್ರಸಾದ್ ಈ ವಿಚಾರನ್ನು ಬಹಿರಂಗಪಡಿಸಿದ್ದಾರೆ.

ಇತ್ತೀಚೆಗೆ ತೆಲುಗಿನ ‘ಆಲಿತೋ ಸರದಾಗ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಜಯೇಂದ್ರ ಪ್ರಸಾದ್ ತಮ್ಮ ಹಾಲಿವುಡ್ ಎಂಟ್ರಿ ಬಗ್ಗೆ ಮಾತನಾಡಿದ್ಧಾರೆ. ”ರಾಜಮೌಳಿ ಹೊಸ ಚಿತ್ರಕ್ಕೆ ನಾನೇ ಕಥೆ ಬರೆದಿದ್ದೇನೆ. ಈ ಕಥೆ ಹಾಲಿವುಡ್ ಸಿನಿಮಾಗೆ ಬರೆದಿದ್ದರೂ ಚಿತ್ರದಲ್ಲಿ ಇಂಡಿಯನ್ ಕಂಟೆಂಟ್ ಇರಲಿದೆ. ಹಾಲಿವುಡ್ ಹಾಗೂ ಭಾರತೀಯ ನಟ-ನಟಿಯರೂ ಚಿತ್ರದಲ್ಲಿರಲಿದ್ದಾರೆ. ಇದೊಂದು ಲೈವ್ ಅನಿಮೇಟೆಡ್ ಸಿನಿಮಾ. ಇದೊಂದು ದೊಡ್ಡ ಪ್ರಾಜೆಕ್ಟ್ ಆಗಿದ್ದು ಹಾಲಿವುಡ್ ಸ್ಟುಡಿಯೋವೊಂದರ ಸಹಯೋಗದಲ್ಲಿ ಚಿತ್ರವನ್ನು ನಿರ್ಮಿಸಲಾಗುತ್ತಿದೆ” ಎಂದು ವಿಜಯೇಂದ್ರ ಪ್ರಸಾದ್ ತಮ್ಮ ಹಾಗೂ ಮಗನ ಹಾಲಿವುಡ್​​​ ಎಂಟ್ರಿ ಬಗ್ಗೆ ಮಾಹಿತಿ ನೀಡಿದ್ಧಾರೆ. ಈ ಚಿತ್ರದ ಕಲಾವಿದರು, ತಂತ್ರಜ್ಞರು ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಶೀಘ್ರದಲ್ಲೇ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

ಇನ್ನು ಕಾರ್ಯಕ್ರಮದ ಆರಂಭದಿಂದಲೂ ನಟ ಆಲಿ ಜೊತೆ ತಮಾಷೆಯಾಗೇ ಮಾತನಾಡುತ್ತಾ ಬಂದ ವಿಜಯೇಂದ್ರ ಪ್ರಸಾದ್, ”ನಾನು ಹಾಲಿವುಡ್​​ಗೆ ಹೋಗುತ್ತಿಲ್ಲ, ನನ್ನನ್ನು ಅವರು ಎಲ್ಲಿಗೂ ಕರೆದೊಯ್ಯುತ್ತಿಲ್ಲ. ನನ್ನ ಕಥೆಯನ್ನು ಹಾಲಿವುಡ್​​ ಸಿನಿಮಾವನ್ನಾಗಿ ಮಾಡಲಾಗುತ್ತಿದೆ. ನಾನು ನಾಲ್ಕು ಗೋಡೆಗಳ ನಡುವೆಯೇ ಕುಳಿತು ಕಥೆ ಬರೆಯುತ್ತೇನೆ” ಎಂದು ನಗೆಚಟಾಕಿ ಹಾರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಲಿ, ”ವಿಸಾಗೆ ಅಪ್ಲೈ ಮಾಡಿ ಅಮೆರಿಕಾಗೆ ಹೋಗಿ. 10 ವರ್ಷಗಳ ಅವಧಿಗೆ ವೀಸಾ ದೊರೆಯುತ್ತದೆ. ನಾನು ನಿಮ್ಮೊಂದಿಗೆ ಬಂದು ಕಂಪನಿ ಕೊಡುತ್ತೇನೆ” ಎಂದು ಹೇಳಿದರು, ಇದಕ್ಕೆ ವಿಜಯೇಂದ್ರ ಪ್ರಸಾದ್ ನಗೆ ಬೀರಿ, ಸರಿ ಹೋಗೋಣ ಎಂದರು.

 

ವಿಜಯೇಂದ್ರ ಪ್ರಸಾದ್ ತೆಲುಗು ಮಾತ್ರವಲ್ಲದೆ ಹಿಂದಿ, ಕನ್ನಡ, ತಮಿಳು ಸಿನಿಮಾಗಳಿಗೆ ಕೂಡಾ ಕಥೆ ಬರೆದಿದ್ದಾರೆ. ಕನ್ನಡದಲ್ಲಿ ಅಪ್ಪಾಜಿ, ಕುರುಬನ ರಾಣಿ, ಪಾಂಡುರಂಗ ವಿಠಲ, ಜಾಗ್ವಾರ್ , ಹಿಂದಿಯ ಬಜರಂಗಿ ಭಾಯ್​​​ ಜಾನ್, ಮಣಿಕರ್ಣಿಕಾ ಹಾಗೂ ತಮಿಳಿನ ತಲೈವಿ ಚಿತ್ರಗಳಿಗೆ ವಿಜಯೇಂದ್ರ ಪ್ರಸಾದ್ ಕಥೆ ಬರೆದಿದ್ದಾರೆ. ನಿರ್ದೇಶಕರಾಗಿ ಕೂಡಾ ಗುರುತಿಸಿಕೊಂಡಿರುವ ಇವರು ತೆಲುಗಿನ ಅರ್ಧಾಂಗಿ, ಶ್ರೀಕೃಷ್ಣ, ರಾಜಣ್ಣ ಹಾಗೂ ಶ್ರೀವಳ್ಳಿ ಎಂಬ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.

ಇನ್ನು ರಾಜಮೌಳಿ ಸಿನಿಮಾ ವಿಚಾರಕ್ಕೆ ಬರುವುದಾದರೆ ಸದ್ಯಕ್ಕೆ ಅವರು ‘ಆರ್​​​ಆರ್​ಆರ್’ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲುರಿ ಸೀತಾರಾಮ ರಾಜು ಹಾಗೂ ಕೊಮರಂ ಭೀಮ್ ಜೀವನಾಧಾರಿತ ಸಿನಿಮಾ ಇದಾಗಿದ್ದು ರಾಮ್ ಚರಣ್ ತೇಜ ಹಾಗೂ ಜ್ಯೂನಿಯರ್ ಎನ್​​​ಟಿಆರ್​ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಜಯ್ ದೇವ್ಗನ್, ಆಲಿಯಾ ಭಟ್, ಸಮುದ್ರಕನಿ ಹಾಗೂ ಇನ್ನಿತರರು ಚಿತ್ರದಲ್ಲಿದ್ದಾರೆ. ಡಿವಿವಿ ದಾನಯ್ಯ ನಿರ್ಮಿಸುತ್ತಿರುವ ಸಿನಿಮಾ ಅಕ್ಟೋಬರ್ 13 ರಂದು ಬಿಡುಗಡೆಯಾಗಲಿದೆ.

-ರಕ್ಷಿತ ಕೆ.ಆರ್. ಸಾಗರ

Be the first to comment

Leave a Reply

Your email address will not be published.


*