ಚಾರ್ಲಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು…ಮಲಯಾಳಂನಲ್ಲಿ ಸ್ಟಾರ್​ ನಟ, ತಮಿಳಿನಲ್ಲಿ ಸ್ಟಾರ್​ ನಿರ್ದೇಶಕನ ತೆಕ್ಕೆಗೆ ಸಿನಿಮಾ ರೈಟ್ಸ್

‘ಅವನೇ ಶ್ರೀಮನ್ನಾರಾಯಣ’ ಚಿತ್ರದ ನಂತರ ರಕ್ಷಿತ್ ಶೆಟ್ಟಿ ಕೈಗೆತ್ತಿಕೊಂಡ ಸಿನಿಮಾ ‘ಚಾರ್ಲಿ 777’. ಸಿನಿಮಾ ಚಿತ್ರೀಕರಣ ಆರಂಭವಾಗಿ ಸುಮಾರು 2 ವರ್ಷಗಳು ಕಳೆದರೂ ಕೊರೊನಾ ಲಾಕ್​​ಡೌನ್ ಕಾರಣದಿಂದ ರಿಲೀಸ್ ತಡವಾಗುತ್ತಲೇ ಬರುತ್ತಿದೆ. ಆದರೆ ಇದೀಗ ಸಿನಿಮಾ ಚಿತ್ರೀಕರಣ ಮುಗಿಸಿ ಪೋಸ್ಟ್​ ಪ್ರೊಡಕ್ಷನ್ ಹಂತದಲ್ಲಿದೆ. ಶೀಘ್ರದಲ್ಲೇ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ. ಮೈಸೂರು, ಗುಜರಾತ್, ಪಂಜಾಬ್, ಶಿಮ್ಲಾ, ಹಿಮಾಚಲ ಪ್ರದೇಶ, ಕಾಶ್ಮೀರ ಹಾಗೂ ಇನ್ನಿತರ ಸುಂದರ ತಾಣಗಳಲ್ಲಿ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಮನುಷ್ಯ ಹಾಗೂ ನಾಯಿ ನಡುವಿನ ಬಾಂಧವ್ಯವನ್ನು ತಿಳಿಸುವ ಈ ಚಿತ್ರದಲ್ಲಿ ಶ್ವಾನ ಕೂಡಾ ಪ್ರಮುಖ ಆಕರ್ಷಣೆ. ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಧರ್ಮ ಎಂಬ ಪಾತ್ರ ಮಾಡುತ್ತಿದ್ದು ನಾಯಿಗೆ ಚಾರ್ಲಿ ಎಂದು ಹೆಸರಿಡಲಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಪೋಸ್ಟರ್​, ಟೀಸರ್ ಹಾಗೂ ಕೆಲವೊಂದು ಮೇಕಿಂಗ್ ವಿಡಿಯೋಗಳು ಕುತೂಹಲ ಕೆರಳಿಸಿದೆ.

ಚಿತ್ರ ತಡವಾಗಲು ಲಾಕ್​ಡೌನ್ ಮಾತ್ರ ಕಾರಣವಲ್ಲದೆ, ಶ್ವಾನಕ್ಕೆ ತರಬೇತಿ ನೀಡಿ ಚಿತ್ರೀಕರಣ ಮುಗಿಸಲು ಇಷ್ಟು ತಡವಾಯ್ತು ಎನ್ನುತ್ತಾರೆ ನಿರ್ದೇಶಕ ಕೆ. ಕಿರಣ್ ರಾಜ್. ಈ ಸಿನಿಮಾ ಕಿರಣ್ ಮೊದಲ ಚಿತ್ರವಾಗಿದ್ದು ಅವರೇ ಕಥೆ ಬರೆದು ನಿರ್ದೇಶಿಸುತ್ತಿದ್ಧಾರೆ. ತಾನಾಯಿತು ತನ್ನ ಕೆಲಸವಾಯ್ತು ಎನ್ನುತ್ತಾ ಯಾರೊಂದಿಗೂ ಮಾತನಾಡದೆ ಬದುಕುತ್ತಿರುವ ವ್ಯಕ್ತಿಯ ಜೀವನದಲ್ಲಿ ಒಂದು ನಾಯಿ ಬಂದಾಗ ಆತನ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತವೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಈ ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿ 5 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಜೂನ್ 6 ರಂದು ರಕ್ಷಿತ್ ಶೆಟ್ಟಿ ಹುಟ್ಟುಹಬ್ಬವಿದ್ದು ಆ ದಿನ ಮತ್ತೊಂದು ಟೀಸರ್ ಬಿಡುಗಡೆ ಮಾಡಲಾಗುವುದು ಎಂದು ಚಿತ್ರತಂಡ ತಿಳಿಸಿದೆ.

ವಿಶೇಷ ಎಂದರೆ ಈಗಾಗಲೇ ಮಲಯಾಳಂ ಹಾಗೂ ತಮಿಳು ಭಾಷೆಗಳಿಗೆ ‘ಚಾರ್ಲಿ 777’ ವಿತರಣಾ ಹಕ್ಕು ಮಾರಾಟವಾಗಿದೆ. 2 ದಿನಗಳ ಹಿಂದಷ್ಟೇ ಮಲಯಾಳಂ ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್, ತಮ್ಮ ಪೃಥ್ವಿರಾಜ್ ಪ್ರೊಡಕ್ಷನ್ ಮೂಲಕ ಮಲಯಾಳಂ ಡಿಸ್ಟ್ರಿಬ್ಯೂಷನ್ ಹಕ್ಕುಗಳನ್ನು ಖರೀದಿಸಿರುವ ವಿಚಾರವನ್ನು ಚಿತ್ರತಂಡ ಬಹಿರಂಗಪಡಿಸಿತ್ತು. ಇದೀಗ ತಮಿಳು ಭಾಷೆಯಲ್ಲಿ ಖ್ಯಾತ ನಿರ್ದೇಶಕ ಕಾರ್ತಿಕ್ ಸುಬ್ಬರಾಜು ತಮ್ಮ ಸ್ಟೋನ್ ಬೆಂಚ್ ಬ್ಯಾನರ್ ಮೂಲಕ ಚಾರ್ಲಿ 777 ರೈಟ್ಸ್ ಖರೀದಿಸಿದ್ಧಾರೆ. ಕಾರ್ತಿಕ್ ಸುಬ್ಬರಾಜು ಜಿಗರ್ಥಂಡಾ, ಮರ್ಕ್ಯುರಿ, ಪೆಟಾ, ಜಗಮೇ ತಂಧಿರಮ್, ಚಿಯಾನ್ 60 ಚಿತ್ರಗಳ ನಿರ್ದೇಶಕ. ಎರಡೂ ಭಾಷೆಗಳಲ್ಲೂ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆಗಳೇ ‘ಚಾರ್ಲಿ 777’ ಹಕ್ಕು ಪಡೆದಿರುವುದು ನಿಜಕ್ಕೂ ಕನ್ನಡ ಸಿನಿಪ್ರಿಯರಿಗೆ ಸಂತೋಷದ ವಿಚಾರ. ಇನ್ನು ತೆಲುಗು ಹಾಗೂ ಹಿಂದಿಯಲ್ಲಿ ಯಾರು ಈ ಚಿತ್ರದ ವಿತರಣಾ ಹಕ್ಕುಗಳನ್ನು ಪಡೆಯಲಿದ್ದಾರೆ ಎಂಬುದನ್ನು ಕಾದು ನೋಡಬೇಕು.

ಚಿತ್ರವನ್ನು ರಕ್ಷಿತ್ ಶೆಟ್ಟಿ ಹಾಗೂ ಜಿ.ಎಸ್. ಗುಪ್ತ ನಿರ್ಮಿಸುತ್ತಿದ್ಧಾರೆ. ಚಿತ್ರದ ಹಾಡುಗಳಿಗೆ ನೊಬಿನ್ ಪೌಲ್ ಸಂಗೀತ ನೀಡಿದ್ದಾರೆ. ರಕ್ಷಿತ್ ಶೆಟ್ಟಿ ಜೊತೆ ಸಂಗೀತ ನಾಯಕಿಯಾಗಿ ನಟಿಸುತ್ತಿದ್ದು ಕರ್ಷಣ್ ರಾಯ್ ಎಂಬ ಪಾತ್ರದಲ್ಲಿ ಹಂಬಲ್ ಪೊಲಿಟಿಷಿಯನ್​​​​​​​​​ ನೊಗ್​ರಾಜ್ ಖ್ಯಾತಿಯ ದಾನಿಶ್ ಸೇಠ್ ನಟಿಸುತ್ತಿದ್ಧಾರೆ. ಒಂದು ಮೊಟ್ಟೆ ಕಥೆ ಖ್ಯಾತಿಯ ರಾಜ್​ ಬಿ. ಶೆಟ್ಟಿ, ಹಿರಿಯ ನಟ ಹೆಚ್​​​.ಜಿ. ಸೋಮಶೇಖರ್, ಹಿರಿಯ ನಟಿ ಭಾರ್ಗವಿ ನಾರಾಯಣ್, ಬೇಬಿ ಶರ್ವರಿ ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸಿದ್ದಾರೆ ಎನ್ನಲಾಗಿದೆ. ಎಲ್ಲಾ ಅಂದುಕೊಂಡಂತೆ ಆದರೆ ಇದೇ ವರ್ಷ ಅಕ್ಟೋಬರ್​​ನಲ್ಲಿ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ.

-ರಕ್ಷಿತ ಕೆ.ಆರ್. ಸಾಗರ

Be the first to comment

Leave a Reply

Your email address will not be published.


*