ವೆಬ್ ಸೀರಿಸ್ ಮೂಲಕ ಮನೆಮಾತಾದ ಈತ ಕಿರುತೆರೆಯ ಜನಪ್ರಿಯ ನಟ ಹೌದು!

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ನಾಯಕ ಸಾಕೇತ್ ರಾಜ್ ಗುರು ಆಗಿ ಅಭಿನಯಿಸುತ್ತಿರುವ ರಘು ಗೌಡ ಇದೀಗ ವೆಬ್ ಸಿರೀಸ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇಷ್ಟು ದಿನ ಸೀರಿಯಲ್ ಮೂಲಕ ವೀಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸುತ್ತಿದ್ದ ರಘು ಇದೀಗ ವೆಬ್ ಸಿರೀಸ್ ಮೂಲಕ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಿದ್ದಾರೆ. ಹೌದು, ಮಾಧ್ಯಮ ಅನೇಕ ಯೂ ಟ್ಯೂಬ್ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದ್ದ ಸೂಪರ್ ಕಪಲ್ ಎನ್ನುವ ವೆಬ್ ಸಿರೀಸ್ ನಲ್ಲಿ ಈಶ್ವರ್ ಆಗಿ ನಟಿಸುವ ಮೂಲಕ ನೆಟ್ಟಿಗರ ಮನ ಸೆಳೆಯುವಲ್ಲಿ ರಘು ಯಶಸ್ವಿಯಾಗಿದ್ದರು. ಇದೀಗ ಸೂಪರ್ ಕಪಲ್ ಸೀಸನ್ 2 ಕೂಡಾ ಇತ್ತೀಚೆಗೆ ಆರಂಭಗೊಂಡಿದ್ದು ನೆಟ್ಟಿಗರು ಅದನ್ನು ಮೆಚ್ಚಿಕೊಂಡಿದ್ದಾರೆ.

ಸೂಪರ್ ಕಪಲ್ ಎನ್ನುವ ವೆಬ್ ಸಿರೀಸ್ ತುಂಬಾ ಸೊಗಸಾಗಿ ಮೂಡಿಬರುತ್ತಿದ್ದು ಅದರಲ್ಲಿ ಯುವ ಟೆಕ್ಕಿ ಜೋಡಿಯ ರಿಯಲ್ ಲೈಫ್ ನಲ್ಲಿ ಏನೆಲ್ಲಾ ಕಥೆಗಳು ನಡೆಯುತ್ತದೆ ಎಂಬುದನ್ನು ಸಿರೀಸ್ ಗಳಾಗಿ ಮಾಡಿ ತೋರಿಸಲಾಗಿದೆ‌. ಅದರಲ್ಲಿ ಯುವ ಟೆಕ್ಕಿ ಈಶ್ವರ್ ಆಗಿ ರಘು ಗೌಡ ನಟಿಸಿದರೆ ಇನ್ನು ಶಾರ್ವರಿಯಾಗಿ ತೇಜಸ್ವಿನಿ ಶರ್ಮ ಬಣ್ಣ ಹಚ್ಚಿದ್ದಾರೆ.

“ಸಂಗಾತಿಗಳ ಜೀವನದಲ್ಲಿ ಪ್ರತಿದಿನ ನಡೆಯುವ ಆಗು ಹೋಗುಗಳನ್ನೇ ಮುಖ್ಯವಾಗಿರಿಸಿಕೊಂಡು ಸೂಪರ್ ಕಪಲ್ ವೆಬ್ ಸಿರೀಸ್ ನಲ್ಲಿ ಬಹು ಸುಂದರವಾಗಿ ತೋರಿಸಲಾಗಿದೆ. ಈಗಾಗಲೇ ಸೂಪರ್ ಕಪಲ್ ನ ಒಂದು ಸೀಸನ್ ಬಹಳ ಅದ್ಭುತವಾಗಿ ಮೂಡಿ ಬಂದಿದ್ದು ನೆಟ್ಟಿಗರ ಮನ ಸೆಳೆಯುವಲ್ಲಿ ಯಶಸ್ವಿಯೂ ಆಗಿತ್ತು. ಇದೀಗ ಎರಡನೇ ಸೀಸನ್ ಆರಂಭಗೊಂಡಿದ್ದು ಮಗದೊಮ್ಮೆ ಹೊಸ ಕಥೆ, ನವಿರಾದ ಹಾಸ್ಯದ ಮೂಲಕ ಪ್ರೇಕ್ಷಕರ ಮನ ಸೆಳೆಯುತ್ತಿದ್ದೇವೆ” ಎಂದು ಸಂತಸದಿಂದ ಹೇಳುತ್ತಾರೆ ರಘು ಗೌಡ.

ಅಂದ ಹಾಗೇ ಒಂದಾದ ಮೇಲೆ ಒಂದರಂತೆ ಧಾರಾವಾಹಿಗಳಲ್ಲಿ ನಟಿಸುವ ಸುವರ್ಣಾವಕಾಶ ಪಡೆದುಕೊಂಡಿರುವ ರಘು ಗೌಡ ಕಿರುತೆರೆಗೆ ಕಾಲಿಟ್ಟಿದ್ದು ರಂಗೇಗೌಡರಾಗಿ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಿಸ್ಟರ್ ಆ್ಯಂಡ್ ಮಿಸೆಸ್ ರಂಗೇಗೌಡ ಧಾರಾವಾಹಿಯಲ್ಲಿ ನಾಯಕ ರಂಗೇಗೌಡ ಆಗಿ ಅಭಿನಯಿಸುವ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ರಘು ಮತ್ತೆ ಹಿಂತಿರುಗಿ ನೋಡಿದ್ದೇ ಇಲ್ಲ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೀವನಚೈತ್ರ ಧಾರಾವಾಹಿಯಲ್ಲಿ ನಾಯಕ ಆಗಿ ನಟಿಸಿ ಸೈ ಎನಿಸಿಕೊಂಡಿದ್ದ ರಘು ಗೌಡ ಮುಂದೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ದೇವಯಾನಿ ಧಾರಾವಾಹಿಯಲ್ಲಿ ನಾಯಕ ಶ್ರೀವತ್ಸ ಆಗಿ ಅಭಿನಯಿಸಿದ್ದಾರೆ. ಇನ್ನು ಇದರ ಹೊರತಾಗಿ ನಮ್ಮನೆ ಯುವರಾಣಿ ಧಾರವಾಹಿಯಲ್ಲಿ ನಾಯಕ ಸಾಕೇತ್ ರಾಜ್ ಗುರು ಆಗಿ ಅಭಿನಯಿಸುತ್ತಿರುವ ಈ ಹ್ಯಾಂಡ್ ಸಮ್ ಹುಡುಗ ಹಿರಿತೆರೆಗೆ ಕಾಲಿಡುತ್ತಾರಾ ಎಂದು ಕಾದು ನೋಡಬೇಕಾಗಿದೆ.
– ಅಹಲ್ಯಾ

Be the first to comment

Leave a Reply

Your email address will not be published.


*