ಕನ್ನಡ ಸಿನಿಪ್ರಿಯರಿಗೆ ಗುಡ್​​ನ್ಯೂಸ್​​​​​…ತೆಲುಗು ಭಾಷೆ ನಂತರ ತಮಿಳಿಗೆ ರೀಮೇಕ್ ಆಗುತ್ತಿದೆ ಮತ್ತೊಂದು ಕನ್ನಡ ಸಿನಿಮಾ

ಕನ್ನಡ ಸಿನಿಮಾಗಳು ಎಂದು ಮೂಗು ಮುರಿಯುತ್ತಿದ್ದವರು ಈಗ ಕನ್ನಡ ಸಿನಿಮಾಗಳ ರೀಮೇಕ್ ಹಕ್ಕನ್ನು ಕೊಂಡುಕೊಳ್ಳಲು ಮುಗಿಬಿದ್ದಿರು ಕಾಲ ಬಂದಿದೆ. ಪರಭಾಷೆಯ ಬಹಳಷ್ಟು ಸಿನಿಮಾಗಳು ಕನ್ನಡಕ್ಕೆ ರೀಮೇಕ್ ಆಗಿರುವುದು ಹೌದು. ಆದರೆ ಕೆಲವು ವರ್ಷಗಳ ಹಿಂದೆ ಕನ್ನಡ ಸಿನಿಮಾಗಳು ಎಂದರೆ ಪರಭಾಷೆಯವರು ಉಡಾಫೆಯಿಂದ ಮಾತನಾಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಕನ್ನಡ ಸಿನಿಮಾಗಳಿಗೆ ರಾಷ್ಟ್ರೀಯ ಮಟ್ಟದಲ್ಲಿ ಡಿಮ್ಯಾಂಡ್ ಬಂದಿದೆ. ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಜನರು ಸ್ವೀಕರಿಸಿದ್ದಾರೆ. ಕನ್ನಡದ ಅನೇಕ ನಟ-ನಟಿಯರಿಗೆ ಪರಭಾಷೆಯಲ್ಲೂ ಹೆಚ್ಚಿನ ಅಭಿಮಾನಿಗಳಿದ್ದಾರೆ. ಸಾಕಷ್ಟು ಕನ್ನಡ ನಟ-ನಟಿಯರು ಪರಭಾಷೆ ಸಿನಿಮಾಗಳಲ್ಲಿ ಸ್ಟಾರ್​​​ಗಳಾಗಿ ಮಿಂಚುತ್ತಿದ್ಧಾರೆ. ಇತ್ತೀಚೆಗೆ ಲವ್ ಮಾಕ್​​ಟೇಲ್, ಆ ಕರಾಳ ರಾತ್ರಿ, ಬೀರ್​​ಬಲ್​​​​​​​​​​​​​​ ಸಿನಿಮಾಗಳು ತೆಲುಗಿಗೆ ರೀಮೇಕ್ ಆಗಿತ್ತು. ದಿಯಾ ಕೂಡಾ ಪರಭಾಷೆಗೆ ರೀಮೇಕ್ ಆಗಲಿದೆ ಎನ್ನಲಾಗುತ್ತಿದೆ. ಇದೀಗ ಮತ್ತೊಂದು ಕನ್ನಡ ಸಿನಿಮಾ ಪರಭಾಷೆಗೆ ರೀಮೇಕ್ ಆಗಲು ಹೊರಟಿದೆ. ಶ್ರೀನಿ ಅಭಿನಯದ ಬೀರ್​​ಬಲ್ ಸಿನಿಮಾ ತೆಲುಗಿನ ನಂತರ ಈಗ ತಮಿಳಿನತ್ತ ಹೊರಟಿದೆ.

 

ಎಂ.ಜಿ. ಶ್ರೀನಿವಾಸ್ ಕಥೆ ಬರೆದು ನಿರ್ದೇಶಿಸಿ ನಟಿಸಿದ್ದ ‘ಬೀರಬಲ್’ ಸಿನಿಮಾ 2019 ರಲ್ಲಿ ಬಿಡುಗಡೆಯಾಗಿತ್ತು. ಈ ಸಿನಿಮಾ ಮೂರು ಭಾಗಗಳಲ್ಲಿ ತಯಾರಾಗಲಿದೆ ಎಂದು ಶ್ರೀನಿವಾಸ್ ಮೊದಲೇ ಹೇಳಿದ್ದರು. ಅದರಂತೆ ಮೊದಲ ಭಾಗಕ್ಕೆ ‘ಬೀರಬಲ್ – ಫೈಂಡಿಂಗ್ ವಜ್ರಮುನಿ’ ಎಂದು ಹೆಸರಿಡಲಾಗಿತ್ತು. ಕ್ರೈಂ, ಥ್ರಿಲ್ಲರ್ ಕಥೆ ಆಧರಿಸಿದ ಈ ಚಿತ್ರವನ್ನು ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಬ್ಯಾನರ್ ಅಡಿ ಟಿ. ಆರ್. ಚಂದ್ರಶೇಖರ್ ನಿರ್ಮಿಸಿದ್ದರು. ಚಿತ್ರದಲ್ಲಿ ಶ್ರೀನಿವಾಸ್, ಲಾಯರ್ ಪಾತ್ರದಲ್ಲಿ ನಟಿಸಿದ್ದರು. ರುಕ್ಮಿಣಿ ವಸಂತ್ ಶ್ರೀನಿ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಸುರೇಶ್ ಹೆಬ್ಳೀಕರ್, ಸುಜಯ್ ಶಾಸ್ತ್ರಿ, ಅರುಣಾ ಬಾಲರಾಜ್, ಕವಿತಾ ಗೌಡ, ಮಧುಸೂಧನ್ ಗೌಡ ಹಾಗೂ ಇನ್ನಿತರರು ಈ ಚಿತ್ರದಲ್ಲಿ ನಟಿಸಿದ್ಧಾರೆ. ಕನ್ನಡದಲ್ಲಿ ಉತ್ತಮ ಪ್ರತಿಕ್ರಿಯೆ ಕಂಡಿದ್ದ ಈ ಸಿನಿಮಾ ಇದೀಗ ತಮಿಳಿಗೆ ರೀಮೇಕ್ ಆಗುತ್ತಿದೆ.

ತಮಿಳಿನಲ್ಲಿ ಈ ಚಿತ್ರಕ್ಕೆ ‘ಮಧಿಯಾಲನ್ ಕೇಸ್-1’ ಎಂದು ಹೆಸರಿಡಲಾಗಿದೆ. ಶಂತನು ಭಾಗ್ಯರಾಜ್ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು ಕ್ರಿಶ್ ಆ್ಯಕ್ಷನ್ ಕಟ್ ಹೇಳುತ್ತಿದ್ಧಾರೆ. ತಮಿಳು ನೇಟಿವಿಟಿಗೆ ತಕ್ಕಂತೆ ಸಿನಿಮಾವನ್ನು ಮಾಡಲಾಗುತ್ತಿದೆ. ಸದ್ಯಕ್ಕೆ ಪ್ರೀ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು ತಮಿಳುನಾಡಿನಲ್ಲಿ ಚಿತ್ರೀಕರಣಕ್ಕೆ ಅನುಮತಿ ನೀಡಿದ ನಂತರ ಶೂಟಿಂಗ್ ಆರಂಭವಾಗಲಿದೆ. ಸಿನಿಮಾ ತಮಿಳಿಗೆ ರೀಮೇಕ್ ಆಗುತ್ತಿರುವ ವಿಚಾರವನ್ನು ಶ್ರೀನಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ. ಈಗಾಗಲೇ ಈ ಸಿನಿಮಾ ತೆಲುಗಿನಲ್ಲಿ ‘ತಿಮ್ಮರುಸು’ ಹೆಸರಿನಲ್ಲಿ ತಯಾರಾಗಿದ್ದು ಬಿಡುಗಡೆಗೆ ಸಿದ್ಧವಿದೆ. ಈ ಸಿನಿಮಾದ ಟೀಸರ್ ಕೂಡಾ ಬಿಡುಗಡೆಯಾಗಿದೆ. ಲಾಕ್​ಡೌನ್ ಕಾರಣ ಸಿನಿಮಾ ಬಿಡುಗಡೆಯನ್ನು ಮುಂದೂಡಲಾಗಿದೆ. ಚಿತ್ರದಲ್ಲಿ ಸತ್ಯದೇವ್ ಕಂಚರನ, ಪ್ರಿಯಾಂಕ ಜವಲ್ಕರ್, ಅಜಯ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಶರಣ್ ಕೊಪ್ಪಿಶೆಟ್ಟಿ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಈ ಹಿಂದೆ ಕನ್ನಡದ ಕಿರಿಕ್ ಪಾರ್ಟಿ ಚಿತ್ರವನ್ನು ಇದೇ ಶರಣ್ ಕೊಪ್ಪಿಶೆಟ್ಟಿ ತೆಲುಗಿನಲ್ಲಿ ಕಿರ್ರಾಕ್ ಪಾರ್ಟಿ ಹೆಸರಿನಲ್ಲಿ ನಿರ್ದೇಶಿಸಿದ್ದರು.

ಕನ್ನಡ ಸಿನಿಮಾಗಳಿಗೆ ಈಗ ಪರಭಾಷೆಯಲ್ಲಿ ಇಷ್ಟು ಡಿಮ್ಯಾಂಡ್​​​ ಇರುವುದನ್ನು ನೋಡಿದರೆ ಕನ್ನಡ ಚಿತ್ರರಂಗ ಹೇಗೆ ಬೆಳೆಯುತ್ತಿದೆ ಎಂಬುದು ತಿಳಿಯುತ್ತದೆ. ಶ್ರೀನಿ ಸದ್ಯಕ್ಕೆ ಅದಿತಿ ಪ್ರಭುದೇವ ಜೊತೆ ‘ಓಲ್ಡ್ ಮಾಂಕ್’ ಚಿತ್ರದಲ್ಲಿ ಬ್ಯುಸಿ ಇದ್ದಾರೆ. ಬೀರಬಲ್ ಭಾಗ 2 – ಅವ್ರನ್ ಬಿಟ್ಟು ಇವ್ರನ್ ಬಿಟ್ಟು ಇವರ್ಯಾರು..? ಹಾಗೂ ಭಾಗ 3 – ತುರೇಮಣೆ ಯಾವಾಗ ಆರಂಭವಾಗಲಿದೆ ಎಂಬುದರ ಬಗ್ಗೆ ಶ್ರೀನಿ ಶ್ರೀಘ್ರದಲ್ಲೇ ಮಾಹಿತಿ ನೀಡಲಿದ್ದಾರೆ.

-ರಕ್ಷಿತ ಕೆ.ಆರ್. ಸಾಗರ

Be the first to comment

Leave a Reply

Your email address will not be published.


*