ರಿಯಲ್ ಹೀರೋ ಮೇಲೆ ಮತ್ತೊಂದು ಅಪವಾದ…ನಿಜಕ್ಕೂ ಸೋನುಸೂದ್ ಹಾಗೆ ಮಾಡಿದ್ರಾ…?

ಈಗಂತೂ ಎಲ್ಲೆಡೆ ನಟ ಸೋನುಸೂದ್​​​​ ಅವರದ್ದೇ ಸುದ್ದಿ. ಅಷ್ಟರ ಮಟ್ಟಿಗೆ ಅವರು ಜನರ ಮನಸ್ಸನ್ನು ಗೆದ್ದಿದ್ದಾರೆ. “ಆಡದೆ ಮಾಡುವವನು ಉತ್ತಮ, ಆಡಿ ಮಾಡುವವನು ಮಧ್ಯಮ, ಆಡಿಯೂ ಮಾಡದನು ಅಧಮ” ಎಂಬ ಮಾತಿದೆ. ಕಷ್ಟಕಾಲದಲ್ಲಿ ಏನೂ ಇಲ್ಲದವರಿಗೆ ಸಹಾಯ ಮಾಡಲೂ ಮನಸ್ಸು ಬೇಕು. ತಾವಾಯಿತು, ತಮ್ಮ ಕೆಲಸವಾಯ್ತು ಎಂದು ಸ್ವಾರ್ಥದಿಂದ ಬದುಕುವವರ ನಡುವೆ ಸೋನುಸೂದ್ ವಿಭಿನ್ನವಾಗಿ ನಿಲ್ಲುತ್ತಾರೆ. ಯಾವ ಪ್ರತಿಫಲ ಬಯಸದೆ ಬಡವರಿಗೆ ಸಹಾಯ ಮಾಡುತ್ತಲೇ ಬಂದಿದ್ಧಾರೆ. ತಮ್ಮದೇ ಟ್ರಸ್ಟ್ ಸ್ಥಾಪಿಸಿ, ಆ ಟ್ರಸ್ಟ್ ಮೂಲಕ ಜನರ ಕಷ್ಟಗಳಿಗೆ ಬೆನ್ನುಲುಬಾಗಿ ನಿಂತಿದ್ದಾರೆ. ವಿಲನ್ ಸೋನುಸೂದ್ ಈಗ ರಿಯಲ್ ಹೀರೋ ಆಗಿ ಬದಲಾಗಿದ್ದಾರೆ. ಆದರೆ ಒಬ್ಬ ಮನುಷ್ಯ ಬೆಳೆಯುವುದನ್ನು ಸಹಿಸದ ಹಲವರು ಆತನ ಕಾಲು ಎಳೆಯಲು ಕಾಯುತ್ತಿರುತ್ತಾರೆ. ಇದೀಗ ಸೋನುಸೂದ್ ವಿಚಾರದಲ್ಲಿ ಆಗಿರುವುದು ಕೂಡಾ ಅದೇ. ತಮ್ಮ ಸ್ವಂತ ದುಡ್ಡು ಖರ್ಚು ಮಾಡಿ ಜನರಿಗೆ ಇಷ್ಟೆಲ್ಲಾ ಸಹಾಯ ಮಾಡುತ್ತಿರುವ ಸೋನುಸೂದ್ ಮೇಲೆ ಒಂದೊಂದೇ ಅಪವಾದಗಳು ಮೇಲೆರಗಿ ಬರುತ್ತಿವೆ.

ಸೋನುಸೂದ್ ಲಾಕ್​ಡೌನ್ ಸಮಯದಲ್ಲಿ ಜನರಿಗೆ ಸಹಾಯ ಮಾಡಲು ಆರಂಭಿಸಿದಾಗ ರಾಜಕೀಯಕ್ಕೆ ಸೇರುವ ಉದ್ದೇಶದಿಂದ ಜನರಿಗೆ ಸಹಾಯ ಮಾಡುವ ನಾಟಕ ಮಾಡುತ್ತಿದ್ಧಾರೆ ಎಂದು ಕೆಲವರು ಆರೋಪಿಸಿದ್ದರು. ಆದರೆ ತಮ್ಮ ಮೇಲಿನ ಆರೋಪವನ್ನು ಸೋನುಸೂದ್ ನಿರಾಕರಿಸಿದ್ದರು. ರಾಜಕೀಯಕ್ಕೆ ಬರುವ ಉದ್ಧೇಶವಿದ್ದರೆ ಎಂದೋ ಬರುತ್ತಿದ್ದೆ. ನನ್ನದು ನಿಸ್ವಾರ್ಥ ಸೇವೆ, ಜನರಿಗೆ ಸಹಾಯವಾಗಬೇಕೆಂಬುದು ನನ್ನ ಉದ್ದೇಶವೇ ಹೊರತು, ಇದರಲ್ಲಿ ಯಾವುದೇ ಸ್ವಾರ್ಥವಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಇತ್ತೀಚೆಗೆ ಮತ್ತೊಬ್ಬರು ಸೋನುಸೂದ್​ ಅವರ ಮೇಲೆ ಮತ್ತೊಂದು ಆರೋಪ ಮಾಡಿದ್ದರು. ಆಕ್ಸಿಜನ್ ಕಾನ್ಸನ್ಟ್ರೇಟಿಂಗ್ ಮೆಷನ್​​​​ ಕಂಪನಿಯೊಂದರ ಪರ ಪ್ರಚಾರ ಮಾಡುವ ಮೂಲಕ ಸೋನುಸೂದ್ ಎಲ್ಲರಿಗೂ ಮೋಸ ಮಾಡುತ್ತಿದ್ಧಾರೆ. ಆಕ್ಸಿಜನ್ ಕಾನ್ಸನ್ಟ್ರೇಟಿಂಗ್ ಮೆಷನ್​​​​ ಬೆಲೆ 2 ಲಕ್ಷ ರೂಪಾಯಿ. ಬಡವರಿಗೆ ಸಹಾಯ ಮಾಡುತ್ತೇನೆ ಎಂದು ಸುಳ್ಳು ಹೇಳುತ್ತಾ ಹಣ ಮಾಡುವ ದಾರಿ ಹಿಡಿದಿದ್ದಾರೆ ಎಂದು ಆರೋಪಿಸಿದ್ದರು. ಈ ಟ್ವೀಟ್​​ಗೆ ಬಾಲಿವುಡ್​​ ನಟಿ ಕಂಗನಾ ರಣಾವತ್ ಲೈಕ್ ಒತ್ತಿದ್ದರು. ಇದೀಗ ಟಾಲಿವುಡ್ ನಿರ್ಮಾಪಕ ತಮ್ಮಾರೆಡ್ಡಿ ಭಾರಧ್ವಾಜ್​​​​​​​​ ಸೋನುಸೂದ್ ಮೇಲೆ ಮತ್ತೊಂದು ಆರೋಪ ಮಾಡಿದ್ದಾರೆ.

“ಈಗ ಜನರಿಗೆ ಸಹಾಯ ಮಾಡುತ್ತಿರುವ ಸೋನುಸೂದ್ ಕೆಲವು ವರ್ಷಗಳ ಹಿಂದೆ ಯಾವುದೇ ಕೆಲಸವನ್ನು ಹಣ ಪಡೆಯದೆ ಮಾಡುತ್ತಿರಲಿಲ್ಲ. ಮೊದಲು ಆತನ ಕೈಗೆ ಹಣ ನೀಡಿದ ನಂತರವಷ್ಟೇ ಕೆಲಸ ಮಾಡುವ ವ್ಯಕ್ತಿಯಾಗಿದ್ದರು. ಒಮ್ಮೆ ಅಂಗವಿಕಲರಿಗಾಗಿ ಒಂದು ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಸೋನುಸೂದ್ ಇದ್ದರೆ ಕಾರ್ಯಕ್ರಮ ಯಶಸ್ವಿಯಾಗುತ್ತದೆ ಎಂದು ಎಲ್ಲರೂ ಆಸೆ ಪಟ್ಟರು. ಅದರಂತೆ ನಾನು ಸೋನುಸೂದ್​​ಗೆ ವಿಚಾರ ತಿಳಿಸಿ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದೆ. ಆದರೆ ಸೋನುಸೂದ್​​​​​ ಪ್ರತಿಕ್ರಿಯೆ ನೋಡಿ ನನಗೆ ಶಾಕ್ ಆಯ್ತು. ಅವರು ಕೇಳಿದಷ್ಟು ಹಣ ನೀಡಿದರೆ ಮಾತ್ರ ಕಾರ್ಯಕ್ರಮಕ್ಕೆ ಬರುವುದಾಗಿ ಸೋನುಸೂದ್ ಡಿಮ್ಯಾಂಡ್ ಮಾಡಿದರು. ಆತ ಒಬ್ಬ ಹಣಕ್ಕಾಗಿ ಬಾಯಿ ಬಿಡುವ ವ್ಯಕ್ತಿ ಎಂಬ ಸತ್ಯ ನನಗೆ ಆ ದಿನ ತಿಳಿಯಿತು. ಆದರೆ ಇದೀಗ ಅವರು ಬದಲಾಗಿದ್ಧಾರೆ” ಎಂದು ತಮ್ಮಾರೆಡ್ಡಿ ಭಾರಧ್ವಾಜ್ ಸೋನುಸೂದ್ ಬಗ್ಗೆ ಮಾತನಾಡಿದ್ಧಾರೆ.

ನಿರ್ಮಾಪಕ ತಮ್ಮಾ ರೆಡ್ಡಿ ಹೀಗೆ ಸೋನುಸೂದ್ ಬಗ್ಗೆ ಮಾತನಾಡುತ್ತಿದ್ದಂತೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿತ್ರರಂಗದಲ್ಲಿ ಯಾವ ಸ್ಟಾರ್ ನಟ ತಾನೇ ದುಡ್ಡು ಕೇಳದೆ ಕೆಲಸ ಮಾಡಿಕೊಡುತ್ತಿದ್ದಾರೆ..? ಎಲ್ಲರೂ ಹಣ, ಹೆಸರು ಮಾಡಬೇಕೆಂಬ ಉದ್ದೇಶದಿಂದಲೇ ಚಿತ್ರರಂಗಕ್ಕೆ ಬರುವುದು. ಆ ರೀತಿ ಯಾರಾದರೂ ಇದ್ದರೆ ಅವರ ಹೆಸರು ಹೇಳಿ. ಎಷ್ಟು ಜನ ಸ್ಟಾರ್ ನಟರು ಸೋನುಸೂದ್​​​ ಅವರಂತೆ ಜನರಿಗೆ ಸಹಾಯ ಮಾಡುತ್ತಿದ್ದಾರೆ…? ಅವರ ಪಟ್ಟಿ ಕೊಡಿ ಎಂದು ತಮ್ಮಾರೆಡ್ಡಿ ಅವರನ್ನು ಪ್ರಶ್ನಿಸುತ್ತಿದ್ದಾರೆ.

-ರಕ್ಷಿತ ಕೆ.ಆರ್. ಸಾಗರ

Be the first to comment

Leave a Reply

Your email address will not be published.


*