ಜೀವನಚರಿತ್ರೆಯನ್ನು ಸಿನಿಮಾ ಮಾಡಲು ಅನುಮತಿಗಾಗಿ ದೊಡ್ಡ ಮೊತ್ತ ಪಡೆದಿದ್ದ ಧೋನಿ…ಮತ್ತೊಂದು ಅಚ್ಚರಿ ವಿಚಾರ ಇಲ್ಲಿದೆ ನೋಡಿ..!

ಖ್ಯಾತನಾಮರ ಜೀವನ ಚರಿತ್ರೆಯನ್ನು ಸಿನಿಮಾವನ್ನಾಗಿ ಮಾಡುವುದು ಬಹಳ ಹಿಂದಿನಿಂದಲೂ ಇದೆ. ಇತ್ತೀಚೆಗೆ ಇದು ಸಖತ್ ಟ್ರೆಂಡ್ ಆಗಿದೆ. ಸಿನಿಮಾ, ಸಾಹಿತ್ಯ, ಕ್ರೀಡೆ, ರಾಜಕೀಯ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಬಹಳಷ್ಟು ಗಣ್ಯ ವ್ಯಕ್ತಿಗಳ ಜೀವನ ಚರಿತ್ರೆ ಸಿನಿಮಾವಾಗಿ ತೆರೆ ಕಂಡಿದೆ. ಇನ್ನು ಎಷ್ಟೋ ಮಹನೀಯರ ಜೀವನ ಚರಿತ್ರೆ ತೆರೆ ಮೇಲೆ ಬರಲಿದೆ. ಖ್ಯಾತ ಕ್ರಿಕೆಟಿಗ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಜೀವನಚರಿತ್ರೆ ಕೂಡಾ ಈಗಾಗಲೇ ಬೆಳ್ಳಿ ತೆರೆ ಮೇಲೆ ಬಂದಿದೆ. ನೀರಜ್ ಪಾಂಡೆ ನಿರ್ದೇಶನದ ‘ಎಂ.ಎಸ್. ಧೋನಿ: ದಿ ಅನ್​​ಟೋಲ್ಡ್ ಸ್ಟೋರಿ’ 2016 ರಲ್ಲಿ ಬಿಡುಗಡೆಯಾಗಿತ್ತು. ಚಿತ್ರದಲ್ಲಿ ಸುಶಾಂತ್ ಸಿಂಗ್ ರಾಜ್​ಪೂತ್ ಧೋನಿ ಪಾತ್ರದಲ್ಲಿ ನಟಿಸಿದ್ದರು. ಇದಕ್ಕೂ ಮುನ್ನ 3-4 ಸಿನಿಮಾಗಳಲ್ಲಿ ನಟಿಸಿದ್ದ ಸುಶಾಂತ್​​​ಗೆ ಈ ಸಿನಿಮಾದಿಂದ ದೊಡ್ಡ ಬ್ರೇಕ್ ಸಿಕ್ಕಿತ್ತು. ಇತ್ತೀಚಿಗಿನ ಮಾಹಿತಿ ಪ್ರಕಾರ ಈ ಚಿತ್ರಕ್ಕೆ ಅನುಮತಿ ನೀಡಲು ಮಹೇಂದ್ರ ಸಿಂಗ್ ಧೋನಿ ದೊಡ್ಡ ಮೊತ್ತದ ಸಂಭಾವನೆ ಪಡೆದಿದ್ದರಂತೆ. ಈ ವಿಚಾರವನ್ನು ಚಿತ್ರತಂಡ ಬಹಿರಂಗಪಡಿಸಿದ್ದು ಆನ್​ಲೈನ್ ಮಾಧ್ಯಮವೊಂದು ವರದಿ ಮಾಡಿದೆ.

ಮಹೇಂದ್ರ ಸಿಂಗ್ ಧೋನಿ ಮೈದಾನದಲ್ಲಿ ಮಾತ್ರವಲ್ಲ ಮೈದಾನದ ಹೊರಗೆ ಕೂಡಾ ಅವರು ಬೇಡಿಕೆಯ ವ್ಯಕ್ತಿ. ಕ್ರಿಕೆಟ್​​​​ನಲ್ಲಿ ಅವರ ಖ್ಯಾತಿ ಹೆಚ್ಚುತ್ತಿದ್ದಂತೆ ಬಹಳಷ್ಟು ಜಾಹೀರಾತು ಕಂಪನಿಗಳು ಕೋಟಿ ಕೋಟಿ ಹಣ ನೀಡಿ ಅವರನ್ನು ತಮ್ಮ ಜಾಹೀರಾತಿಗೆ ಮಾಡೆಲ್ ಆಗಿ ಕರೆತಂದವು. ಬಿಸ್ಕೆಟ್, ಮೋಟಾರ್ ವೆಹಿಕಲ್, ಮ್ಯಾಟ್ರಿಮೋನಿ ಸೇರಿದಂತೆ ಅನೇಕ ಜಾಹೀರಾತುಗಳಲ್ಲಿ ನಟಿಸುವ ಮೂಲಕ ಧೋನಿ ತಾವೊಬ್ಬ ಕ್ರಿಕೆಟಿಗ ಮಾತ್ರವಲ್ಲ ಒಳ್ಳೆ ನಟ ಎಂಬುದನ್ನೂ ಪ್ರೂವ್ ಮಾಡಿದ್ದಾರೆ. ಧೋನಿ ಖ್ಯಾತಿ ಹೆಚ್ಚುತ್ತಿದ್ದಂತೆ ಬಾಲಿವುಡ್​​ನ ಬಹಳಷ್ಟು ನಿರ್ಮಾಪಕರು ಅವರ ಜೀವನಚರಿತ್ರೆ ಮಾಡುವುದಾಗಿ ಮುಂದೆ ಬಂದರು. ಕೊನೆಗೂ ಈ ಅವಕಾಶ ಅರುಣ್ ಪಾಂಡೆ ಹಾಗೂ ಫಾಕ್ಸ್ ಸ್ಟಾರ್ ಸ್ಟುಡಿಯೋಸ್​​​​ಗೆ ಒಲಿಯಿತು. ‘ಎಂ.ಎಸ್. ಧೋನಿ-ದಿ ಅನ್​ಟೋಲ್ಡ್ ಸ್ಟೋ’ ಹೆಸರಿನಲ್ಲಿ ಸಿನಿಮಾ ತಯಾರಾಯ್ತು. ಸಿನಿಮಾ ಯಶಸ್ಸು ಕೂಡಾ ಕಂಡಿತು.

ಆದರೆ ಈ ಸಿನಿಮಾಗೆ ಅನುಮತಿ ನೀಡಲು, ವೈಯಕ್ತಿಕ ಜೀವನದ ಬಗ್ಗೆ ಮಾಹಿತಿ ನೀಡಲು, ಹಳೆಯ ಫೋಟೋ-ವಿಡಿಯೋಗಳನ್ನು ಚಿತ್ರತಂಡಕ್ಕೆ ನೀಡಲು, ಚಿತ್ರವನ್ನು ಪ್ರಮೋಟ್ ಮಾಡಲು ಹಾಗೂ ಇನ್ನಿತರ ವಿಚಾರಗಳಿಗೆ ಧೋನಿ ಒಟ್ಟು 45 ಕೋಟಿ ರೂಪಾಯಿ ಪಡೆದಿದ್ದಾರೆ ಎಂಬ ಮಾಹಿತಿ ಈಗ ಬಯಲಾಗಿದೆ. ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಸುಶಾಂತ್ ಸಿಂಗ್ ರಾಜ್​​ಪೂತ್​​ಗೆ ಈ ಚಿತ್ರಕ್ಕಾಗಿ 2 ಕೋಟಿ ರೂಪಾಯಿ ಸಂಭಾವನೆ ನೀಡಿದ್ದು ಮತ್ತೊಂದು ಅಚ್ಚರಿಯ ವಿಚಾರವೆಂದರೆ, ಸುಶಾಂತ್ ಸಂಭಾವನೆಗಿಂತ ಧೋನಿ ಮ್ಯಾನೇಜನ್​​​ಗೆ ಕೂಡಾ ಹೆಚ್ಚಿನ ಹಣ ನೀಡಲಾಗಿದೆಯಂತೆ. ಧೋನಿ ವ್ಯವಹಾರಗಳನ್ನು ನೋಡಿಕೊಳ್ಳುವ ಅರುಣ್ ಪಾಂಡೆ ಈ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾಗಿದ್ದು ಅವರಿಗೂ 5 ಕೋಟಿ ಪಾಲಾಗಿದೆಯಂತೆ. ಧೋನಿ ಪಡೆದಿರುವ ಸಂಭಾವನೆ ಮೊತ್ತ ಕೇಳಿ ಇದೀಗ ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ.

‘ಎಂ.ಎಸ್. ಧೋನಿ-ದಿ ಅನ್​ಟೋಲ್ಡ್ ಸ್ಟೋರಿ’ ಚಿತ್ರವನ್ನು ಸುಮಾರು 100 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದು ಬಾಕ್ಸ್ ಆಫೀಸಿನಲ್ಲಿ ಈ ಚಿತ್ರ 216 ಕೋಟಿ ರೂಪಾಯಿ ಕೊಳ್ಳೆ ಹೊಡೆದಿದೆ. ಚಿತ್ರದಲ್ಲಿ ಸುಶಾಂತ್ ಧೋನಿ ಪಾತ್ರದಲ್ಲಿ, ಕೈರಾ ಅಡ್ವಾಣಿ-ಸಾಕ್ಷಿ ಪಾತ್ರದಲ್ಲಿ ನಟಿಸಿದ್ದರು. ಇವರೊಂದಿಗೆ ದಿಶಾ ಪಠಾನಿ, ಅನುಪಮ್ ಖೇರ್, ಭೂಮಿಕಾ ಚಾವ್ಲಾ ಹಾಗೂ ಇನ್ನಿತರರು ಸಿನಿಮಾದಲ್ಲಿ ಅಭಿನಯಿಸಿದ್ದರು. ಏನೇ ಆಗಲಿ, ಸುಶಾಂತ್ ಇಂದು ನಮ್ಮೊಂದಿಗೆ ಇಲ್ಲವೆಂದ ಮೇಲೆ ಧೋನಿ ಸಂಭಾವನೆ ವಿಚಾರ ಈಗೇಕೆ ಎನ್ನುತ್ತಿದ್ದಾರೆ ಸುಶಾಂತ್ ಅಭಿಮಾನಿಗಳು.

ರಕ್ಷಿತ ಕೆ.ಆರ್. ಸಾಗರ

Be the first to comment

Leave a Reply

Your email address will not be published.


*